Friday, December 30, 2011

( ಈ ಹಾಡು, "ಹಾಗೆ ಸುಮ್ಮನೆ" ಚಿತ್ರದ, "ಮಾಯವಾಗಿದೆ ಮನಸು ಹಾಗೆ ಸುಮ್ಮನೆ.." ಎಂಬ ಹಾಡಿನ ಧಾಟಿಗೆ ಬರೆದ ಹೊಸ ಸಾಹಿತ್ಯ..)

ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ..|
ಕಣ್ಣ ಸನ್ನೆಯಲ್ಲಿಯೇ ಸೆಳೆವ ಸಾಲು ಮಲ್ಲಿಗೆ.
ಪೂರ್ಣ ಕಳೆದು ಹೋಗಿಹೆ ಕಾಣದೆ ಎಲ್ಲಿಗೆ....


ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ..|


ಕಂಡ ಬೆರಗಿನಲ್ಲಿಯೇ ಸೋತು ಕ್ಷಣದಲಿ
ಇಂದೇ ತೆರೆಯುವೆ ಭಾವದ ಬಾನುಲಿ..
ನಲ್ಲೆ ನಿನಗೆ ಮೀಸಲು ಮನದ ಮಾಳಿಗೆ
ನೀಡಬೇಕು ತಂಗಲು, ನೋಟದ ಬಾಡಿಗೆ...||1||

ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ...

ನಿನ್ನ ನೆನಪಿನಂದಕೆ ಎಲ್ಲಿ ಪರಿಮಿತಿ..
ಹೂಡು ಖಾತೆಗೆ ಕನಸಿನ ಪಾವತಿ..
ನೀನೆ ಸಾಥಿ ಎಂದಿಗೂ ಎಲ್ಲಾ ದಾರಿಗೆ..
ತಾಣವೀಗ ಮೋಹದ ಮಾಯೆಯ ಊರಿಗೆ...||2||

ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ..

ಕಣ್ಣ ಸನ್ನೆಯಲ್ಲಿಯೇ ಸೆಳೆವ ಸಾಲು ಮಲ್ಲಿಗೆ.
ಪೂರ್ಣ ಕಳೆದು ಹೋಗಿಹೆ ಕಾಣದೆ ಎಲ್ಲಿಗೆ....

Wednesday, December 28, 2011

( ಈ ಹಾಡು, "ಲೈಫು ಇಷ್ಟೇನೆ." ಚಿತ್ರದ, "ನಿನ್ನ ಗುಂಗಲ್ಲೇ ಚಲಿಸುವೆನು.." ಎಂಬ ಹಾಡಿನ ರಾಗಕ್ಕೆ ಬರೆದ ಹೊಸ ಗೀತೆ..)

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..
ಹುಸಿ ಮುನಿಸೊಂದಿಗೆ, ತುಸು ನಗು ಹೂಡಲು
ಇಂದು ಮತ್ತೊಮ್ಮೆ ಮಣಿಯುವೆನು..
ಕಣ್ಣ ನಡೆಯಲ್ಲೇ ದಣಿಯುವೆನು...||

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..

ಕೋಮಲೆ ನಿನ್ನ ಮುಖದ ರಂಗದಿ, ನನ್ನಂತರಂಗವಿರಿಸು..
ಭೂಮಿಯೇ ಸ್ವರ್ಗ ನೀನು ನಡೆದಾಡುತಾ, ದಯಮಾಡಿ ನನ್ನೂ ಕರೆಸು..
ಬಳಸಿ ತೋಳಲಿ, ಬಿಡದೆ ಪೀಡಿಸು.,
ಒಮ್ಮೆ ನಿನ್ನಲ್ಲೇ ಕಳೆಯುವೆನು..
ಪ್ರತಿಕನಸಲ್ಲೂ ಕಲೆಯುವೆನು...||1||

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..

ಕಾವಲು ಇದ್ದರೂನು ಆಕಾಂಕ್ಷೆಯ ದೋಚಿರುವೆ ಗೂಢಚಾರಿ..
ಹಾವಳಿ ತಾಳದೇನೆ ಅನ್ವೇಷಿತ ನಿನ್ನೆಡೆಯ ಗುಪ್ತದಾರಿ..
ಒಲವಿನ ಈ ಖುಷಿ, ಇನ್ನು ಕಂಗೆಡಿಸಿದೆ.,
ಮಧುಭಾವದಲಿ ನೆನೆಯುವೆನು..
ನಿನ್ನ ಹಾಜರಿಗೆ ತಣಿಯುವೆನು...||2||

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..
ಹುಸಿ ಮುನಿಸೊಂದಿಗೆ, ತುಸು ನಗು ಹೂಡಲು
ಇಂದು ಮತ್ತೊಮ್ಮೆ ಮಣಿಯುವೆನು..
ಕಣ್ಣ ನಡೆಯಲ್ಲೇ ದಣಿಯುವೆನು...||

Monday, December 26, 2011

( ಈ ಹಾಡು "ಗೋಕುಲ" ಚಿತ್ರದ, "ಆರಾಮಾಗೆ ಇದ್ದೆ ನಾನು, ನಿನ್ನ ಕಂಡು ಅರೆ ಏನಾಯಿತು.." ಎಂಬ ಹಾಡಿನ ಧಾಟಿಗೆ ಬರೆದ ಹೊಸ ಸಾಹಿತ್ಯ..)

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ
ಈ ಕ್ಷಣದಿಂದಲೇ ನವಿರಾದ ಸೆಲೆ, ಚಿಗುರೊಡೆದಂತೆ ನನ್ನೆದೆಯಿಂದಲೇ..
ಹರಡಿದೆ ಈಗಲೇ, ಕಿರುನಗೆಯ ಬಲೆ, ಮುಗಿಲೆತ್ತರಕೂ ಭುವಿಯಿಂದಲೇ...||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ........
 
ಸುರಿಯಿತು ಕನಸು ಸುರಿಯಿತು, ಮೃದುಮಿಂಚಿನ ಓಕುಳಿಯೊಂದನು..
ಬರೆಯಿತು ಮನವು ಬರೆಯಿತು, ನಿನ ಅಂಚೆಗೆ ಓಲೆಯನೊಂದನು..
ಈಗಲೇನೆ ಶುಭತಾರಾಯೋಗ..
ಪ್ರೀತಿಯಲ್ಲಿ ಜೋಡಿಯಾಗು ಬೇಗ..
ಹೊಸಕುಸುರಿಕಲೆ, ಈ ಕ್ಷಣದಿಂದಲೇ, ಅರಳಿದೆ ಮಧುರ ನೆನಪಿಂದಲೇ....||1||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ......
 
ಬೆರೆಯಿತು ಭಾವ ಬೆರೆಯಿತು, ಈ ನೋಟದ ಸಂಗಮದಲ್ಲಿಯೇ..
ಮೆರೆಯಿತು ಜೀವ ಮೆರೆಯಿತು, ಅತಿನೂತನ ಸಂಭ್ರಮದಲ್ಲಿಯೇ..
ಹೇಳದೇನೇ ಒಮ್ಮೆ ಕೇಳದೇನೇ 
ಮೋಡಿ ಮಾಡಿ ಕಾಡಿದಾಕೆ ನೀನೆ...
ಬದಲೀಗ ನೆಲೆ, ಈ ಕ್ಷಣದಿಂದಲೇ, ನವಸೌಧಕೆ ನಿನ್ನೊಲವಿಂದಲೇ...||2||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ
ಈ ಕ್ಷಣದಿಂದಲೇ ನವಿರಾದ ಸೆಲೆ, ಚಿಗುರೊಡೆದಂತೆ ನನ್ನೆದೆಯಿಂದಲೇ..
ಹರಡಿದೆ ಈಗಲೇ, ಕಿರುನಗೆಯ ಬಲೆ, ಮುಗಿಲೆತ್ತರಕೂ ಭುವಿಯಿಂದಲೇ...||

Saturday, December 24, 2011

ಭಾವ ಲಾಸ್ಯ..!!!!!

ನನ್ನ ಎದೆಯ ವೀಣೆಯಲ್ಲಿ, ಮೀಟಿದೊಂದು ಭಾವಕೆ
ಮಿಡಿದಳೀ ಅಭಿಸಾರಿಕೆ..
ನಯನಪುಷ್ಪ ಪೋಣಿಸಿರಲು, ಮೂಡಿದೊಲವಮಾಲಿಕೆ
ಕೊರಳಪದಕ ಸೋಲಿಗೆ..

ಕಲೆಯ ಶಿಲ್ಪ ಉಸಿರು ತಂದು, ಉಸುರಿದಂಥ ಹೆಸರು ನೀನು
ಬೆಳೆದ ಹಸಿರು ಪೈರು ಎಸೆದ, ಎಸೆವ ಕಂಪಿನಾಕೆ ನೀನು..
ದೂರದೃಶ್ಯ ಕ್ಷೀರಪಥದಿ ಮೆರೆವ ತಾರೆಗಳ ಕುಂಚ,
ಬಿಡಿಸಿ ತಂದ ರೂಪವೀಗ, ಮನದಿ ವ್ಯಾಪ್ತ ಬಿಡದೆ ಕೊಂಚ..||

ಝರಿಯ ಒಡಲ ರವದಿ ಬಂತು, ಹೂವುನಡೆಯ ಮೃದುಲತಾಳ
ಕಿವಿಯ ಮೀನು ತೇಲಿ ಇಂದು, ಕಲಕಿತೀಗ ಮನತಿಳಿಗೊಳ..
ನಗೆಯ ಸೂರ್ಯ ಮೇರೆ ಮೀರೆ, ಕಬ್ಬುಸಿಹಿಯ ಸಂಕ್ರಾಂತಿ,
ನಿನ್ನ ನೆನಪೇ ಪ್ರವಹಿಸಿರಲು, ಕನಸಿಗೆಲ್ಲಿಯ ವಿಶ್ರಾಂತಿ..!!!

Thursday, December 22, 2011

( ಈ ಹಾಡು "ಪೃಥ್ವಿ" ಚಿತ್ರದ, "ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ.." ಎಂಬ ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..)

ನನಗೇನೋ ಅಪಾರವಾದ ಸಂತಸ ಕಣ್ಣಲ್ಲಿ..
ನಿನಗೇನೇ ಅಪಾರವಾದ ಮಾನಸ ನನ್ನಲ್ಲಿ..
ಈಗ ಭೂಮಿ ಬಾನು ಎಲ್ಲವ, ನಾನು ಮರೆತೆನು ನಿನ್ನಲ್ಲಿ...|

ನನಗೇನೋ ಅಪಾರವಾದ ವಿಸ್ಮಯ ಕಂಡಲ್ಲಿ..
ನಿನಗೇನೇ ಅಪಾರವಾದ ನಲ್ಮೆಯು ಇನ್ನಿಲ್ಲಿ..
ಬೇಗ ಪ್ರೇಮಜಾಲವ ರೂಪಿಸಿ, ನನ್ನ ಬಚ್ಚಿಡು ನಿನ್ನಲ್ಲಿ...||

ಈ ಕಣ್ಣಲಿ ಕಂಡ ಒಲವೀಗ.. ಹುಣ್ಣಿಮೆಯಲಿ ಮೊರೆವ ಕಡಲಂತೆ..
ನನ್ನುಸಿರಲಿ ನಿನ್ನ ಹೆಸರಿಗ.. ತಂಗಾಳಿಗೆ ಕಂಪು ಬೆರೆತಂತೆ..
ಸವಿನೆನಪಗನ್ನಡಿಯನು ನಾ ಹೊರತೆಗೆದೆ ನನ್ನೆದೆಯಲಿ.. ಬರಿ ಕಂಡೆ ನಿನ್ನದರಲಿ.. ಹೋ ಹೋ..
ಹೊಸ ಕನಸಿನಂಗಡಿಯನು ನಾನು ತೆರೆದೆ ಈ ಮನದಲಿ.. ನೀ ದೋಚಿದೆ ನಗೆಯಲಿ.. ಹೋ ಹೋ...||1||

ನನಗೇನೋ ಅಪಾರವಾದ ಸಂತಸ ಕಣ್ಣಲ್ಲಿ..
ನಿನಗೇನೇ ಅಪಾರವಾದ ಮಾನಸ ನನ್ನಲ್ಲಿ..
ಈಗ ಭೂಮಿ ಬಾನು ಎಲ್ಲವ, ನಾನು ಮರೆತೆನು ನಿನ್ನಲ್ಲಿ...|
 
ನೀನಿಲ್ಲದೆ ಕ್ಷಣವೂ ಯುಗದಂತೆ.. ಆವರಿಸು ನೀ ನನ್ನನೀಗಿಂದೆ..
ನೀ ನಡೆಯಲು ಸನಿಹ ಬಿಡದಂತೆ.. ನಾ ನಡೆಯುವೆ ನಿನ್ನ ನೆರಳಂತೆ..
ಸಿಹಿ ನಿನ್ನ ಒಡನಾಟವ ನೆನೆದು, ಖುಷಿಯು ತುಳುಕಾಡಿದೆ.. ಇನ್ನೊಮ್ಮೆ ಬೇಕಿನಿಸಿದೆ.. ಹೋ ಹೋ..
ಹಿತವಾದ ಕಣ್ಣೋಟವ ಬಯಸಿ ಮನವು ಚಡಪಡಿಸಿದೆ.. ನನ್ನೊಮ್ಮೆ ನೋಡು ಬರಿದೆ...||2||
ಹೋ ಹೋ...

ನನಗೇನೋ ಅಪಾರವಾದ ವಿಸ್ಮಯ ಕಂಡಲ್ಲಿ..
ನಿನಗೇನೇ ಅಪಾರವಾದ ನಲ್ಮೆಯು ಇನ್ನಿಲ್ಲಿ..
ಬೇಗ ಪ್ರೇಮಜಾಲವ ರೂಪಿಸಿ, ನನ್ನ ಬಚ್ಚಿಡು ನಿನ್ನಲ್ಲಿ...||..

Friday, December 16, 2011

                                ಹಂಬಲ..
           

                          ಎಣಿಕೆಯಿಲ್ಲದೆ ಕಲ್ಲು ಎಸೆದು ಬರಿದಾಗಿಹುದು
                          ಉಳಿದದ್ದು ನಾನೀಗ ಕುಳಿತಿರುವ ಬಂಡೆ..
                          ದಾಸವಾಳದ ಸೂರ್ಯ, ಗಗನಗರ್ಭದಿ ಲೀನ
                          ನೀನು ಜೊತೆಯಿರದೆ, ನೀರವತೆಯಲಿ ದಂಡೆ..

                          ನೂಪುರದ ಇನಿದನಿಯ ತೆರೆಯ ಹಂಬಲದಲ್ಲಿ,
                          ಭೋರ್ಗರೆವ ತೆರೆಗಳದೂ ಮೌನಗೀತೆ..
                          ಜಡನದಿಯು ಸಾಗರವ ಸೇರಲುತ್ಸುಕವಿಹುದು,
                          ಭೇಟಿಗೊಮ್ಮೆಯೂ ಬರದೆ, ಏಕೆ ಕುಳಿತೆ.??!!

                          ನೀನಿರದ ಬೇಸರದ ಭಾವತೀವ್ರತೆಯಲ್ಲಿ
                          ಕಣ್ಣ ಕೊಳ ತುಳುಕಾಡಿ, ಕೆನ್ನೆ ತೇವ..
                          ಮರದ ಜೋಡಿಯ ಹಕ್ಕಿ ಕೆಣಕಿಹುದು ಏಕಾಂತ,
                          ನೋಟದಲೆ ಹುದುಗಿಸಿಹೆ, ಒಡಲ ನೋವ..

                          ತಲ್ಲಣಿಸುವಂತೆ ಮನ ಮಾಡಿರುವೆ ನೀ ಗೆಳತಿ,
                          ಹೇಳು ಬೇಗನೆ ಮುಂದೆ ನನ್ನ ಪಾಡೇನು.?
                          ಎದೆಯೊಳಗೆ ಪೂಜಿಸಲು, ಒಲವಸುಮವಿರಿಸಿರುವೆ,
                          ತಡವಿರದೆ ಗುಡಿಯೊಳಗೆ ಬರಬೇಕು ನೀನು..!!!


( ಚಿತ್ರಕೃಪೆ --
123rf.com )

Thursday, November 24, 2011

ಅಲಂಕಾರ..!!

ಇರುಳುಗುರುಳಿನ ಸುರುಳಿಹೆರಳನು
ಹೊರಳಿಸುತ ನೀ ತೆರಳಲು..
ಸರಳದಲೇ ಮನ ಮರುಳು ಮಾಡಿಹೆ
ಮರಳಿ ಅರಳಿತು ನೆರಳಲೂ..

ಮೊಗದಿ ಮುಗಿಯದ ಮುಗುಳುನಗುವಿನ
ಸೊಗಸಿಗತಿಮಿಗಿಲಿಲ್ಲವು..
ಹಗಲು ಮುಗಿಲಲೂ ಝಗಝಗಿಸುವ
ಮಿನುಗುಖಗಗಳು ಜಿಗಿದವು..

ಬಾನಿನೊಳು ಘನಇನನು ಕುಣಿಸುವ
ಭಾನುಸನ್ನಿಭ ಹೊನ್ನು ನೀ..
ನೆನೆಯೇ ಅನುದಿನ ಜೇನುಕೆನೆಯನು
ಹನಿಸುವ ಮನವನಿತೆ ನೀ..

ದ್ರುಮದ ಕುಸುಮದಿ ಮಧುಗೆ ಭ್ರಮರದ
ಸಂಭ್ರಮದಿ ಪರಿಭ್ರಮಿಸುವೆ..
ಭ್ರೂಭ್ರಮದ ಗಮಕ್ರಮದಲುಗಮಿಪ
ಅಮರ ಪ್ರೇಮದಿ ರಮಿಸುವೆ...

Wednesday, October 26, 2011

( ಈ ಹಾಡು, "ಜಾನಿ ಮೇರಾ ನಾಮ್-ಪ್ರೀತಿ ಮೇರಾ ಕಾಮ್" ಚಿತ್ರದ, "ಯಾವ ಸೀಮೆಯ ಮಾಯಗಾತಿಯೇ.." ಎಂಬ ಹಾಡಿನ ಧಾಟಿಯಲ್ಲಿ ಬರೆದ ಹೊಸ ಸಾಹಿತ್ಯ..)

ಪ್ರೇಮಗೀತೆಯ ರೂಪರೇಖೆ ನೀ,
ನನ್ನ ಮುನ್ನುಡಿ.. ಇನ್ನು ಮುನ್ನಡಿ..
ಕ್ಷೇಮವಾರ್ತೆಯ ನಿತ್ಯನೌಕೆ ನೀ,
ನಿನ್ನ ಕಣ್ಣಡಿ.. ಮೋಹಗನ್ನಡಿ..
ನನ್ನೊಮ್ಮೆ ಮರೆಸುತಾ ನಿಂತೆ ರಮಿಸುತಾ ರಾಗಿಣಿ..
ಮತ್ತೊಮ್ಮೆ ಸೆಳೆಯುತಾ ಬಂದೆ ಹೊಳೆಯುತಾ ರೋಹಿಣೀ..||

ಪ್ರೇಮಗೀತೆಯ ರೂಪರೇಖೆ ನೀ..........

ಮಾತಲೇ, ತೀರದ ತಂಪು ಕಂಪೆರೆವೆ ನೀನು..
ಮೌನದ ಕಡಲಲೂ ಮುತ್ತು ಕಟ್ಟಿರುವೆಯೇನು.?!!
ಭಾವರಾಶಿಯಿಂದ ಇಂದು,ಮೂರ್ತಿವೆತ್ತ ಕಿನ್ನರಿ..
ನಿನ್ನ ಸ್ವಪ್ನ ಕಂಡ ಮೇಲೆ, ಮತ್ತ ಈ ಪರಿ..
ಜಿನುಗಿಬಾ.... ಭರಿಸಲು.. ಎದೆಯನು..||೧||


ಪ್ರೇಮಗೀತೆಯ ರೂಪರೇಖೆ ನೀ,
ನನ್ನ ಮುನ್ನುಡಿ.. ಇನ್ನು ಮುನ್ನಡಿ....

ಅಂದದಿ ಗೋಚರ, ನೂರು ಹೊಂಬಣ್ಣ ಸಾಲು..
ಮುಂದಿನ ಈ ಸ್ವರ, ನೀಡು ನನಗೊಂದು ಪಾಲು..
ಸ್ಪರ್ಶದಲ್ಲೇ ಜೀವ ಧನ್ಯ, ನೀನು ಬಾನಿನ ನದಿ..
ಚಿತ್ತದಲ್ಲೇ ದೃಶ್ಯವಾದ, ಸುಧಾಕೌಮುದಿ..
ಗುನುಗಿಹೆ.... ಅನುದಿನ.. ಒಲವನು..||೨||

ಪ್ರೇಮಗೀತೆಯ ರೂಪರೇಖೆ ನೀ,
ನನ್ನ ಮುನ್ನುಡಿ.. ಇನ್ನು ಮುನ್ನಡಿ..
ಕ್ಷೇಮವಾರ್ತೆಯ ನಿತ್ಯನೌಕೆ ನೀ,
ನಿನ್ನ ಕಣ್ಣಡಿ.. ಮೋಹಗನ್ನಡಿ..
ನನ್ನೊಮ್ಮೆ ಮರೆಸುತಾ ನಿಂತೆ ರಮಿಸುತಾ ರಾಗಿಣಿ..
ಮತ್ತೊಮ್ಮೆ ಸೆಳೆಯುತಾ ಬಂದೆ ಹೊಳೆಯುತಾ ರೋಹಿಣೀ..||

Saturday, October 8, 2011

(ಈ ಹಾಡು  "ಪಂಚರಂಗಿ" ಚಿತ್ರದ, "ಉಡಿಸುವೆ ಬೆಳಕಿನ ಸೀರೆಯ.." ಹಾಡಿನ ಧಾಟಿಗೆ ಬರೆದ ನೂತನ ಸಾಹಿತ್ಯ.)

ಒಲವಿನ ಅಲೆಗಳ ಸಾಗರ..
ತುಂಬಿದೆ., ಎದೆಯೊಳಗೆ..
ಇಂದು ಉಕ್ಕಿ ಬಂದ, ಕಾರಣ ಈಗಲೇನೇ ನಾನು ಕಂಡ..
ನಿನ್ನೊಂದು ಹೂನಗೆ....

ಒಲವಿನ ಅಲೆಗಳ ಸಾಗರ......

ನೀ ಬಂದ ಈ ಅಂದದ ದಾರಿ.. ನಿಂತಿಹುದು ಹಸಿರು ಚಿಗುರಿ.,
ಮೈದಾಳಿದೆ ಹೂವಿನ ಕೇರಿ.. ನಿನ್ನಯದೇ ಹೆಸರು ಉಸುರಿ..
ಕನಸಿನ ಮಣಿ ಕಲೆಹಾಕುವ ಬಾ, ಈ ಘಳಿಗೆ., ಈ ಕಣ್ಣಲ್ಲೇ ಮೆಲ್ಲಗೆ....||೧||

ಒಲವಿನ ಅಲೆಗಳ ಸಾಗರ..
ತುಂಬಿದೆ., ಎದೆಯೊಳಗೆ..
ಇಂದು ಉಕ್ಕಿ ಬಂದ, ಕಾರಣ ಈಗಲೇನೇ ನಾನು ಕಂಡ..
ನಿನ್ನೊಂದು ಹೂನಗೆ....

ನೂರಾರು ಚಂದಿರರ ಬೆಳಕಿನ ಕೂಟ.. ನಲ್ಮೆಯ ನೋಟ.. ಮುಂಗುರುಳಲಿ..
ನೀನೇನೆ ಸುಂದರದ ನೆನಪಿಗೆ ಜೋಡಿ.. ಮಾಯದ ಮೋಡಿ.. ಮುಂಬೆಳಗಲಿ...
ನಿನ್ನ ಜಾಡಿನಲ್ಲೇ, ಇನ್ನೀಗ ಎಲ್ಲ ಪಾಡು.. ನನ್ನ ಹಾಡಿನ ದೋಣಿಯ ಬೀಡು ಎಂದೂ ನೀನಿದ್ದಲ್ಲಿಗೆ.....||೨||

ಒಲವಿನ ಅಲೆಗಳ ಸಾಗರ..
ತುಂಬಿದೆ., ಎದೆಯೊಳಗೆ..
ಇಂದು ಉಕ್ಕಿ ಬಂದ, ಕಾರಣ ಈಗಲೇನೇ ನಾನು ಕಂಡ..
ನಿನ್ನೊಂದು ಹೂನಗೆ....||

Wednesday, September 28, 2011

( ಈ ಹಾಡು, "ಜಂಗ್ಲಿ" ಚಿತ್ರದ, "ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.." ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ.)

       ಈ ದೀಪದಿ ಹೊಮ್ಮಿರುವ, ನೀನೇ ಮಧುರ ಹೊಂಗಿರಣ..
       ಈ ರೂಪದಿ ಚಿಮ್ಮಿರುವ, ಕಲೆಯ ಸೆಲೆಯು ತಾರೆಗಣ..
       ಈ ರಾಗದಿ ಮೂಡಿರುವ, ಮನದ ಗೀತೆ ನೀನೇನಾ..?!

       ಈ ದೀಪದಿ ಹೊಮ್ಮಿರುವ, ನೀನೇ ಮಧುರ ಹೊಂಗಿರಣ..

       ಉಚಿತ ಬಂದಾಯ್ತು ಬಯಕೆಗಳು,
       ಖಚಿತವಾಯ್ತೀಗ ನೆನಪುಗಳು,
       ರಚಿತವಾದಂತೆ ಕನಸುಗಳು,
       ನಿನ್ನ ಹೆಸರೊಳು....
       ನನ್ನ ಕಣ್ಣ ರೆಪ್ಪೆಯ ಒಳಗೆ, ಬಚ್ಚಿಕೊಂಡು ಕೂರು ನೀನು..
       ತೆರೆದ ಕಣ್ಣು ಮುಚ್ಚಿದರೂನು, ಕಾಣುವಂತೆ ನಿನ್ನ ನಾನು..
       ಹಂಚಿಹೋದ ಭಾವಕಿನ್ನು, ಸೂತ್ರ ನೀನೇನಾ....?!

       ಈ ದೀಪದಿ ಹೊಮ್ಮಿರುವ, ನೀನೇ ಮಧುರ ಹೊಂಗಿರಣ..
       ಈ ರೂಪದಿ ಚಿಮ್ಮಿರುವ, ಕಲೆಯ ಸೆಲೆಯು ತಾರೆಗಣ..

       ಇಳಿದ ಸವಿಭಾವ ನನ್ನೊಳಗೆ,
       ಉಳಿದ ಪ್ರತಿಮಾತು ಈ ಘಳಿಗೆ,
       ಸುಳಿದ ಹೊಸದಾರಿ ಕಣ್ಣೊಳಗೆ,
       ನನ್ನ ಬಾಳಿಗೆ....
       ನೀನು ನಡೆವ ಹಾದಿಯ ಮೇಲೆ, ಹೂವಿನಂತೆ ಹಾಸುವೆ ನನ್ನ..
       ಒಮ್ಮೆ ಹೃದಯ ಹಾದು ಹೋಗು, ಎಲ್ಲೇ ಪಯಣ ಹೋಗುವ ಮುನ್ನ..
       ಕಾದುಕೂತ ವೃಕ್ಷ ನಾನು, ಚೈತ್ರ ನೀನೇನಾ....?!

       ಈ ದೀಪದಿ ಹೊಮ್ಮಿರುವ, ನೀನೇ ಮಧುರ ಹೊಂಗಿರಣ..
       ಈ ರೂಪದಿ ಚಿಮ್ಮಿರುವ, ಕಲೆಯ ಸೆಲೆಯು ತಾರೆಗಣ..
       ಈ ರಾಗದಿ ಮೂಡಿರುವ, ಮನದ ಗೀತೆ ನೀನೇನಾ..?!

Saturday, September 17, 2011

( ಈ ಹಾಡು, "ಸಂಜು ವೆಡ್ಸ್ ಗೀತಾ" ಚಿತ್ರದ, "ಗಗನವೇ ಬಾಗಿ.." ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..)

ಮನವಿದೋ ಹಾಡಿ, ಹೇಳಿದೆ..ಪ್ರೀತಿಯ ನಿನಗೆ..
ಮುಗಿಲು ಸುರಿದಂತೆ, ಮಳೆಯನು ಧರಣಿಗೆ..
ಪೂರ್ಣಜೀವನವೇ ನಿನ್ನಲಿ..
ಕಂಡ ಭಾವನೆಯು ನನ್ನಲಿ..
ಜೀವದ ಆಣೆ..ನಿನಗೆ ನಾ ಅರ್ಪಣೆ...||ಪ||

ಮನವಿದೋ ಹಾಡಿ, ಹೇಳಿದೆ..ಪ್ರೀತಿಯ ನಿನಗೆ..
ಮುಗಿಲು ಸುರಿದಂತೆ, ಮಳೆಯನು ಧರಣಿಗೆ..|

ಕಣ್ಣಿನ...ನೂತನ...ಪ್ರತಿನೋಟವು ನೀ..
ನಾಳಿನ...ಬಾಳಿನ...ಭರವಸೆಗಳು ನೀ..
ಎದೆಯಿಂದ ಮಿಡಿದು ಬಂದೆರಗಿವೆ, ಹೊಸಬಯಕೆಯ ಈ ಪೂರ..
ಒಲವಿಂದ ಮನದಿ ಸಂದಣಿಸಿವೆ, ಸಿಹಿಮಾಸ  ಶರಧಿತೀರ..
ಜೀವದ ಆಣೆ...ನಿನಗೆ ನಾ ಅರ್ಪಣೆ...||೧||

ಮನವಿದೋ ಹಾಡಿ, ಹೇಳಿದೆ..ಪ್ರೀತಿಯ ನಿನಗೆ..
ಮುಗಿಲು ಸುರಿದಂತೆ, ಮಳೆಯನು ಧರಣಿಗೆ..|

ನಿನ್ನಯ...ಸನ್ನೆಯ...ಅರಿತಾಗಿದೆ ನಾ...
ನಲ್ಮೆಯ...ವಿಸ್ಮಯ...ಅನುಭಾವಿಸಿ ನಾ...
ನನ್ನೆದೆಯ ತಾಪ ಪರಿಹರಿಸುವ, ಹೊಸ ಪ್ರೆಮವೈದ್ಯ ನೀನು..
ನಿನ್ನೆದುರೆ ಖುಷಿಯ ಆವಿರ್ಭವ, ಅದಕಾಗೆ ಕಾದೆ ನಾನು...
ಜೀವದ ಆಣೆ...ನಿನಗೆ ನಾ ಅರ್ಪಣೆ...||೨||

ಮನವಿದೋ ಹಾಡಿ, ಹೇಳಿದೆ..ಪ್ರೀತಿಯ ನಿನಗೆ..
ಮುಗಿಲು ಸುರಿದಂತೆ, ಮಳೆಯನು ಧರಣಿಗೆ..
ಪೂರ್ಣಜೀವನವೇ ನಿನ್ನಲಿ..
ಕಂಡ ಭಾವನೆಯು ನನ್ನಲಿ..
ಜೀವದ ಆಣೆ..ನಿನಗೆ ನಾ ಅರ್ಪಣೆ...||

Monday, August 22, 2011

( ಈ ಹಾಡು "ಮಳೆಯಲಿ ಜೊತೆಯಲಿ" ಚಿತ್ರದ, "ನೀ ಸನಿಹಕೆ ಬಂದರೆ ಹೃದಯದ ಗತಿಯೇನು.." ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ..)

ಈ ನಯನದಿ ಮಿನುಗುವ ಒಲವಿನ ಮಣಿ ನೀನೇ.... ನೀನೇ ಏನೇ?! , ಹೇಳೇ ಜಾಣೆ..
ಬಾರೆ ಬಳಿಗೆ , ಒಂದು ಘಳಿಗೆ ,
ನನ್ನ ಮಿಡಿವ ಹೃದಯದೆಡೆಗೆ...
ಈ ಜಗದಲಿ ಮುಗಿಯದ ಚೆಲುವಿನ ಗಣಿ ನೀನೇ.... ನೀನೇ ತಾನೆ ?!, ಬೇರೆ ಕಾಣೆ..||

ನೀನಂತೂ ಪೂರ್ಣಚಂದಿರನ , ಬಣ್ಣಾಟದ ಈ ಕಲೆಯಂದ..
ಸೋತೆ ನಾ, ಹೊಂದಿಸಲು ನಿನ್ನ, ಕಣ್ಣೋಟದ ಈ ಪದಬಂಧ.. |
ನಿನ್ನ ಒಲುಮೆ, ಸಿಹಿ ನಲುಮೆ, ಅರಳಿಸಿಹುದು ಖುಷಿ ಚಿಲುಮೆ..
ನಿನ್ನ ಜೊತೆಗೆ , ನನ್ನ ನಡಿಗೆ,
ನಡೆ ನೇರ, ಕನಸಿನೆಡೆಗೆ..||

ಈ ನಯನದಿ ಮಿನುಗುವ ಒಲವಿನ ಮಣಿ ನೀನೇ.... ನೀನೇ ಏನೇ , ಹೇಳೇ ಜಾಣೆ..|

ಅತೀಮಧುರ ನಿನ್ನ ನೆನಪೇ, ಮನದ ತುಂಬಾ ಹೊನ್ನ ಬೆಳಕು..
ಪ್ರತೀಕ್ಷಣವೂ ನಿನ್ನ ಹೆಸರ ಸ್ಮರಣೆಯೊಂದೇ ನನ್ನ ಬದುಕು.. |
ಕರೆಯೋಲೆ ನೀಡುವೆ ನಿನಗೆ, ಭವ್ಯ ಪ್ರಣಯದ ದಿಬ್ಬಣಕೆ,
ಬಂದು ಒಮ್ಮೆ ಸಂತೈಸು, ಕಾದು ಕೂತ ಈ ಜೀವಕೆ.. 
ನಿನ್ನ ಸಲುಗೆ, ಬೀಸೋ ಬಲೆಗೆ,
ಬಿದ್ದ ಮೇಲೆ, ನೀನೇ ನನಗೆ..||

ಈ ನಯನದಿ ಮಿನುಗುವ ಒಲವಿನ ಮಣಿ ನೀನೇ.... ನೀನೇ ಏನೇ , ಹೇಳೇ ಜಾಣೆ..
ಈ ಜಗದಲಿ ಮುಗಿಯದ ಚೆಲುವಿನ ಗಣಿ ನೀನೇ.... ನೀನೇ ತಾನೆ , ಬೇರೆ ಕಾಣೆ....||

Friday, July 29, 2011

( ಈ ಹಾಡು, " ಮಿಲನ " ಚಿತ್ರದ  "ನಿನ್ನಿಂದಲೇ..ನಿನ್ನಿಂದಲೇ.." ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ..)


ನಿನ್ನಂದವೇ.. ನಿನ್ನಂದವೇ.. ಮನದಲ್ಲಿ ಹರಿದಾಡಿದೆ..
ನಿನ್ನಂದವೇ.. ನಿನ್ನಂದವೇ.. ಕ್ಷಣದಲ್ಲೇ ಸೆರೆಮಾಡಿದೆ..|
ಈ ಹೊಸದಾದ ಬಲುರಮ್ಯ ರೋಮಾಂಚನ, ನೀ ಭೇಟೀಲೇ ಹೆಣೆದಾಗ ಅನುಬಂಧವೇ..
ನಿನ್ನ ಪಿಸುಮಾತೆ  ಸವಿಜೇನಿನ ಸಿಂಚನ, ಈಗೆಲ್ಲೆಲ್ಲೂ ನಿನ್ನಂದ ಸೌಗಂಧವೇ...||
ನಿನ್ನಂದವೇ.. ನಿನ್ನಂದವೇ.. ಮನದಲ್ಲಿ ಹರಿದಾಡಿದೆ..
ನಿನ್ನಂದವೇ.. ನಿನ್ನಂದವೇ.. ಕ್ಷಣದಲ್ಲೇ ಸೆರೆಮಾಡಿದೆ....

ಕೋಲ್ಮಿಂಚಿನ ಹಾಗೆ ಹೊಳೆವ ನಗುವು, ಚಾಚಿದೆ ನಿನ್ನ ತುಟಿಗಳಲಿ..
ಕಣ್ಣಂಚಿನ ಲೇಖನಿಯಲೇ ಒಲವ, ಗೀಚಿದೆ ಎದೆಯ ಪುಟಗಳಲಿ..
ನಿನ್ನಂದಕೆ.. ಎದುರಾಗದೆ..
ಮಲೆಬಿಲ್ಲೇ ಮರೆಯಾಗಿದೆ...||೧||

ನಿನ್ನಂದವೇ.. ನಿನ್ನಂದವೇ.. ಮನದಲ್ಲಿ ಹರಿದಾಡಿದೆ..
ನಿನ್ನಂದವೇ.. ನಿನ್ನಂದವೇ.. ಕ್ಷಣದಲ್ಲೇ ಸೆರೆಮಾಡಿದೆ..

ಹೊಳೆಯಲ್ಲಿನ ಆಳ ಸುಳಿಯಂತೆ ನನ್ನ, ಒಳಗೆಳೆದೆ ಒಡನೆ ಪ್ರೀತಿಯಲಿ..
ಬಳಿ ನೀನು ಕುಳಿತೀಗ ತೋಳಲಿ ನನ್ನ, ಬರಸೆಳೆದುಕೋ ಬಿಡದ ರೀತಿಯಲಿ..
ಈ ಚೇತನ.. ಈ ಜೀವನ..
ನಿನಗೇನೆ ಮುಡಿಪಾಗಿದೆ..||೨||

ನಿನ್ನಂದವೇ.. ನಿನ್ನಂದವೇ.. ಮನದಲ್ಲಿ ಹರಿದಾಡಿದೆ..
ನಿನ್ನಂದವೇ.. ನಿನ್ನಂದವೇ.. ಕ್ಷಣದಲ್ಲೇ ಸೆರೆಮಾಡಿದೆ..|
ಈ ಹೊಸದಾದ ಬಲುರಮ್ಯ ರೋಮಾಂಚನ, ನೀ ಭೇಟೀಲೇ ಹೆಣೆದಾಗ ಅನುಬಂಧವೇ..
ನಿನ್ನ ಪಿಸುಮಾತೆ, ಸವಿಜೇನಿನ ಸಿಂಚನ, ಈಗೆಲ್ಲೆಲ್ಲೂ ನಿನ್ನಂದ ಸೌಗಂಧವೇ...||

Saturday, May 21, 2011

                           ಆಂತರ್ಯ 
                      
                      ಎದೆಯ ಭಾವದ ಲೋಕ,
                      ಅವಳ ಸ್ಪರ್ಶದಿ ನಾಕ.,
                      ಸಿಂಗರಿಸಿ ಸಂಭ್ರಮಿಪ, ಉತ್ಸವವಿದು..
                      ಹೃದಯಮಂಟಪ ದೈವ,
                      ಕರುಣಿಸಿಹಳೀ ಒಲವ,
                      ತಪ್ತ ಮನಸಿನ, ಪ್ರೇಮಪೂಜೆಗೊಲಿದು...

                      ನದಿದಡದ ತುಸು ಗಾಳಿ,
                      ಬರುತಲಿಹುದಲೆ ತೇಲಿ,
                      ನಿನ್ನ ಕಾಲ್ಗೆಜ್ಜೆ ದನಿ ; ಪ್ರಣಯ ಕವನ..
                      ಬಾಹುವಿನ ಬಂಧನಕೆ,
                      ತೆರೆದು ಹಾರಿದೆ ಬಯಕೆ.,
                      ನಿನ್ನೊಲುಮೆ ಗೂಡೆನ್ನ, ಭವ್ಯಭವನ...

                      ಕಾಲ ಹೊರಳಲು ಸಹಜ,
                      ದೊರೆತ ಭಾಗ್ಯದ ಖನಿಜ.,
                      ಕಡಲ ಗರ್ಭದ ಮುತ್ತು-ರತ್ನದಂತೆ..
                      ಯಾವ ದಾರಿಯ ಬಳಸಿ,
                      ಬಂದೆ ನೀ ನನ್ನರಸಿ !
                      ಸ್ವಪ್ನ-ಚಲನೆಯು ಮೀನಹೆಜ್ಜೆಯಂತೆ...

Wednesday, May 18, 2011

( ಈ ಹಾಡು " ಉಲ್ಲಾಸ ಉತ್ಸಾಹ " ಚಿತ್ರದ , " ಚಲಿಸುವ..ಚೆಲುವೇ.. ಒಲಿಸಲು.. ಬರುವೆ.." ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ )                   

                    ಚೆಲುವೆಯೇ ನೀ ನನಗೆ... ಒಲಿದಿಹೆ ಈ ಘಳಿಗೆ...
                    ನಾ ನೋಡಿದರೆಲ್ಲೇ ನಲ್ಲೆ, ಕ್ಷಣದಲೇ ಬರುವೆ ನೀನೇನೇ ಕಣ್ಮುಂದೆ...   ಚೆಲುವೇ..
                    ನೀ ಮಲ್ಲಿಗೆಮಾಲೆ ಬಾಲೆ, ನಗುತಲೇ ಮರೆವೆ ನಾ ನನ್ನೇ ನಿನ್ಮುಂದೆ...  ಚೆಲುವೇ..
                             ಎದೆಯ ಬಯಲಿಗೆ ಹಸಿರಂತೆ , ನೀ ಬರುವೆ 
                             ಅಂದಕೆ ಹೆಸರಂತೆ , ನೀನಿರುವೆ 
                             ಚಂದದ ನೆನಪನ್ನ , ನೀ ತರುವೆ 
                             ನನ್ನ ಮನಕೆ ಒಮ್ಮೆಲೇ..
                             ಕನಸಿನಿಳೆಯಲಿ ಮಳೆಯಂತೆ , ನೀನಿಳಿವೆ
                             ಹುಣ್ಣಿಮೆ ಕಳೆಯಂತೆ , ನೀ ಹೊಳೆವೆ 
                             ಕಣ್ಣಲೇ ನನ್ನನ್ನ , ನೀ ಸೆಳೆವೆ 
                             ನಿನ್ನ ಮನಕೆ ಒಮ್ಮೆಲೇ..
                    ಮನಸು.. ಹೊಸದಾದಂತೆ.. ಮನಸಾಗಿದೆ...||

                    ಕೇಳಲೆಂದೇ ಸವಿನುಡಿಯ , ಜೀವವೀಗ ತುಡಿಯುತಿದೆ 
                    ನುಡಿಯುತಲೇ.. ತಣಿಯುವೆನು...
                    ನೂರು ಬಾರಿ ನವಿರೆದೆಯ , ಭಾವವೀಣೆ ಮಿಡಿಯುತಿದೆ 
                    ನೆನೆಯುತಲೇ.. ಪ್ರಣಯವನು...
                    ಹೂದುಂಬಿ ಹಾಗೆ ನಾವು ಸೇರೋಣ...
                    ಸುರಿವಂತೆ ಜೆನಧಾರೆ ಕೂಡಿ ಹಾಡೋಣ.... 
                          ಎದೆಯ ಬಯಲಿಗೆ ಹಸಿರಂತೆ , ನೀ ಬರುವೆ 
                          ಅಂದಕೆ ಹೆಸರಂತೆ , ನೀನಿರುವೆ 
                          ಚಂದದ ನೆನಪನ್ನ , ನೀ ತರುವೆ 
                          ನನ್ನ ಮನಕೆ ಒಮ್ಮೆಲೇ..
                          ಕನಸಿನಿಳೆಯಲಿ ಮಳೆಯಂತೆ , ನೀನಿಳಿವೆ
                          ಹುಣ್ಣಿಮೆ ಕಳೆಯಂತೆ , ನೀ ಹೊಳೆವೆ 
                          ಕಣ್ಣಲೇ ನನ್ನನ್ನ , ನೀ ಸೆಳೆವೆ 
                          ನಿನ್ನ ಮನಕೆ ಒಮ್ಮೆಲೇ..
                    ಮನಸು.. ಹೊಸದಾದಂತೆ.. ಮನಸಾಗಿದೆ...||

                    ಚೆಲುವೆಯೇ ನೀ ನನಗೆ... ಒಲಿದಿಹೆ ಈ ಘಳಿಗೆ...||

                    ಕಾಣಲಿಲ್ಲ ಹುಡುಕಿದರೂ , ಕನ್ಯೆ ನಿನ್ನ ಸರಿಸಮರು 
                    ಚೆಲುವಿನಲಿ.. ಭುವನದೊಳು...
                    ಜಾಣ ನೀನೆ ಪ್ರತಿಯುಸಿರು , ಎಂದೂ ನನ್ನ ಜೊತೆಯಲಿರು 
                    ಜನುಮದಲಿ.. ಹಗಲಿರುಳು...
                    ಬಾನಲ್ಲಿ ತೇಲೋ ಹಕ್ಕಿ ಆಗೋಣ...
                    ಬಿಡದಂತೆ ಅಪ್ಪಿಕೊಂಡು ಹಾರಿಹೊಗೋಣ....
                          ಎದೆಯ ಬಯಲಿಗೆ ಹಸಿರಂತೆ , ನೀ ಬರುವೆ 
                          ಅಂದಕೆ ಹೆಸರಂತೆ , ನೀನಿರುವೆ 
                          ಚಂದದ ನೆನಪನ್ನ , ನೀ ತರುವೆ 
                          ನನ್ನ ಮನಕೆ ಒಮ್ಮೆಲೇ..
                          ಕನಸಿನಿಳೆಯಲಿ ಮಳೆಯಂತೆ , ನೀನಿಳಿವೆ
                          ಹುಣ್ಣಿಮೆ ಕಳೆಯಂತೆ , ನೀ ಹೊಳೆವೆ 
                          ಕಣ್ಣಲೇ ನನ್ನನ್ನ , ನೀ ಸೆಳೆವೆ 
                          ನಿನ್ನ ಮನಕೆ ಒಮ್ಮೆಲೇ..
                    ಮನಸು.. ಹೊಸದಾದಂತೆ.. ಮನಸಾಗಿದೆ...||

                    ಚೆಲುವೆಯೇ ನೀ ನನಗೆ... ಒಲಿದಿಹೆ ಈ ಘಳಿಗೆ...||

Friday, May 13, 2011

                                 
                                   ಪ್ರಣಯ ಲಹರಿ

                                     ನನ್ನ ಬಾಳಿನ ಬಾನಿನೊಳು ಚಂದ್ರನಂತೆ 
                                     ನೀನಿರಲು ಎದೆತುಂಬ ಬೆಳಕ ತೆರೆಯು..
                                     ಪ್ರೀತಿದೋಣಿಯಲಿಂದು ಜೊತೆಗಾತಿ ನೀನಿರಲು 
                                     ಜೀವನದ ಕಡಲೀಗ ಪುಟ್ಟ ತೊರೆಯು...

                                     ನಿನ್ನ ಮೃದುನಗು ಸುರಿವ, ಕಿರಣ ಸೋಕಲು ಬಿರಿವ 
                                     ತಾವರೆಯ ಹೂವಿಂದು, ನನ್ನ ಮನಸು..
                                     ದೃಷ್ಟಿಯಿರೆ ನನ್ನೆಡೆಗೆ, ಆನಂದ ಸಿರಿ ಎದೆಗೆ;
                                     ಕನಸು ಮೂಡಲು ಕ್ಷಣವೂ, ಬದುಕು ಸೊಗಸು...

                                     ಹೃದಯದಂಗಳ ತುಂಬ, ನಿನ್ನದೇ ಮೊಗಬಿಂಬ 
                                     ರಂಗೋಲಿಯಂದದಲಿ ನಿನ್ನ ಹೆಸರು..
                                     ಮನದ ಕದ ತೆರೆದಂತೆ, ನವ್ಯ ಭಾವದ ಸಂತೆ;
                                     ನಿನ್ನೊಲುಮೆ ವರ್ಷದಲಿ, ಜೀವ ಹಸಿರು...

                                     ಹರುಷಕಲ್ಲದ ಹೊರತು, ನಿನ್ನ ಕಂಬನಿ ಗುರುತು 
                                     ಇರದಂತೆ ನಾನೆಂದೂ ಕಾಪಿಡುವೆನು..
                                     ಒಲವಪಯಣದಲಿಂತು, ಮರವಾಗಿ ನಾ ನಿಂತು 
                                     ಹೆಜ್ಜೆ ಹೆಜ್ಜೆಗೂ ನೆರಳನೀದು ನಡೆಸುವೆನು...

ಚಿತ್ರಕೃಪೆ-- dovezoepo.blogspot.com

Thursday, May 5, 2011

               
                                       ಮಲೆನಾಡು 

                                     ರುದ್ರ-ರಮಣೀಯತೆಯ ಪಶ್ಚಿಮದ ಘಟ್ಟ,
                                     ದಟ್ಟ ಹಸಿರನು ಉಟ್ಟ ಮಲೆನಾಡ ಬೆಟ್ಟ.
                                     ಸುರಲೋಕ ಧರೆಗಿಳಿದು ಬಂದಂಥ ಭಾವ,
                                     ಪ್ರತಿನೋಟದಲೂ ಪುಳಕಗೊಂಡಿಹುದು ಜೀವ...

                                     ನಿತ್ಯ-ನಿರ್ಮಲ-ರಮ್ಯ ಝರಿ-ತೊರೆಯ ಬಳುಕು,
                                     ಪ್ರತಿಹೊದರಿನಲೂ ಪಕ್ಷಿ ಚಿಲಿಪಿಲಿಯ ಪಲಕು.
                                     ಬಗೆಬಗೆಯ ಮೃಗ-ಮಿಗ-ವಿಹಂಗಗಳ ಸೊಬಗು,
                                     ಪ್ರಕೃತಿಮಾತೆಯ ಸೃಷ್ಟಿ ಕಲೆಯ ಹೊಮ್ಮೆರಗು...

                                     ಸತತ ಸೋನೆಯ ರಾಗ ಹಾಡುತಿಹ ಜಡಿ-ಮಳೆ,
                                     ಲಯದಿ ಹನಿಗಳು ಇಳಿಯೆ ಗಂಧ ಸೂಸಿದೆ ಇಳೆ.
                                     ತಂಗಾಳಿ ಬೀಸಿರಲು ಮರದೆಲೆಗಳ ತಾಳ,
                                     ನೆರೆದಿಹುದು ಇಲ್ಲೊಂದು ಸಂಗೀತ ಮೇಳ...

                                     ಸೂಜಿಗಲ್ಲಿನ ತೆರದಿ ಸೆಳೆಯುತಿದೆ ಮನವ,
                                     ಚಿಮ್ಮಿಸುತಲಿದೆ ತನುವಿನೊಳಗೆ ಹೊಸತನವ.
                                     ವೃಕ್ಷಗಳು ಚಾಚಿರುವ ರೆಂಬೆಗಳು ಇಂದು,
                                     ಕರೆಯುತಿವೆ ಪಯಣಿಗನ ಮತ್ತೆ ಬಾ ಎಂದು... 

ಚಿತ್ರಕೃಪೆ--skyscrapercity.com

Wednesday, May 4, 2011

( ಈ ಹಾಡು " ಮನಸಾರೆ " ಚಿತ್ರದ , " ಎಲ್ಲೋ ಮಳೆಯಾಗಿದೆ ಎಂದು " ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ )


            ನಿಂದೇ ನವಿರಾಗಿಹ ಕನಸು ಬಲವಾಗಿ ಕಾಡುತಿದೆ..
            ಇಂದೇ ಸವಿಯಾಗಿಹ ಮನಸು ಒಲವಾಗಿ ಹಾಡುತಿದೆ...|
            ಹೊಸ ರಂಗನು ಬದುಕಿನ ಭಿತ್ತಿಯಲಿ, ಚೆಲ್ಲುತ ನೀ ಸೆಳೆದೆ
            ನಿನ್ನ ಗುಂಗಿನಲಿರುವ ವೃತ್ತಿಯಲಿ , ಮೆಲ್ಲಗೆ ನಾನಿಳಿದೆ.....||

            ನಿನ್ನನು ನೋಡಿದ ರಸಘಳಿಗೆ, 
            ತೇಲಿದೆ ನಾ ಮುಗಿಲಿನಲಿ..
            ನೀಡಿದೆ ನೀನು ಅರಿವಳಿಕೆ, 
            ಹೂಮೊಗದ ನಗುವಿನಲಿ ......
               ಅಪಹಾರವ ಮಾಡಿದೆ ಕ್ಷಣದೊಳಗೆ,
                        ಹೃದಯವ ಸುಳಿವಿಡದೆ..
               ಪರಿಹಾರವ ನೀಡಲೇಬೇಕೆನಗೆ,
                         ಸನಿಹವೇ ಇರು ಬಿಡದೆ...|| ೧ ||

             ನಿಂದೇ ನವಿರಾಗಿಹ ಕನಸು ಬಲವಾಗಿ ಕಾಡುತಿದೆ..
             ಇಂದೇ ಸವಿಯಾಗಿಹ ಮನಸು ಒಲವಾಗಿ ಹಾಡುತಿದೆ...

             ಹೊಮ್ಮಿದೆ ಸುಂದರ ಸೂಚನೆಯು,
             ಕಣ್ಣೊಳಗೆ ಪ್ರೀತಿಯದೇ..
             ತುಂಬಿದೆ ಬಂಧುರ ಭಾವನೆಯು, 
             ನನ್ನೊಳಗೆ ನಿನ್ನಯದೇ ......
                ನಿನ್ನ ನಾಮವ ಜಪಿಸುತ ಹರ್ಷದಲಿ,
                           ನನ್ನೆದೆ ಕುಣಿಯುತಿದೆ ..
                ಈ ಪ್ರೇಮದ ಅಲೆಗಳ ಸ್ಪರ್ಶದಲಿ,
                            ಜೀವವು ತಣಿಯುತಿದೆ ...  || ೨ ||


            ನಿಂದೇ ನವಿರಾಗಿಹ ಕನಸು ಬಲವಾಗಿ ಕಾಡುತಿದೆ..
            ಇಂದೇ ಸವಿಯಾಗಿಹ ಮನಸು ಒಲವಾಗಿ ಹಾಡುತಿದೆ...|
            ಹೊಸ ರಂಗನು ಬದುಕಿನ ಭಿತ್ತಿಯಲಿ, ಚೆಲ್ಲುತ ನೀ ಸೆಳೆದೆ
            ನಿನ್ನ ಗುಂಗಿನಲಿರುವ ವೃತ್ತಿಯಲಿ , ಮೆಲ್ಲಗೆ ನಾನಿಳಿದೆ....||

( ಈ ಹಾಡು " ಮುಂಗಾರು ಮಳೆ " ಚಿತ್ರದ, " ಅನಿಸುತಿದೆ ಯಾಕೋ ಇಂದು " ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ )

                 ಕರೆಯುತಿದೆ ನನ್ನ ನಯನ,
                 ಹೃದಯ ಮಂದಿರಕೆ ನಿನ್ನ..
                 ಪ್ರೇಮದ ಈ ಸಿಹಿ ಪಯಣ,
                 ನಡೆವೆಯಾ, ಜೊತೆಯಲಿ ನನ್ನ..
                    ನಿನ್ನ..ಕುರಿತೇ ಎಲ್ಲ ಯೋಚನೆ...
                  ಕ್ಷಣಕೂ ನವ್ಯ ಭಾವನೆ ತರುವ..
                        ಪ್ರೀತಿ ಹೀಗೇನೇ.....||

                 ಕರೆಯುತಿದೆ ನನ್ನ ನಯನ.....

                 ಸುಮಗಳ ಎಸಳಿನ ತುಟಿಯಲಿ, ನಿಲ್ಲದ ನಗುವಿದೆ..
                 ರವಿಸಮ ಮೊಗದಲಿ ಮುಗಿಯದ ಕಾಂತಿಯ ಸೊಗಸಿದೆ..
                 ಗಗನದಿ ಕಾಣದ ತಾರೆಯೊಂದ ಭುವಿಯಲಿ ಹಗಲೇ ಕಂಡಿರುವೆ..
                    ನೀನೇ ಮನದಿ ನಿಂತ ಕಲ್ಪನೆ..
                 ನಿನ್ನ ಒಲವ ಧಾರೆಗೆ ತುಡಿವ..
                        ಪ್ರೀತಿ ಹೀಗೇನೇ...|| ೧ ||

                 ಕರೆಯುತಿದೆ ನನ್ನ ನಯನ......

                 ಸುಮಧುರ ಕನಸಿನ ಎಳೆಯಲಿ ಬದುಕನೇ ನೇದಿಹೆ..
                 ಎದೆಯಾಳದಿ ಹೊಳೆವ ದೀಪದಿ ನಿನ್ನನೇ ನೋಡಿಹೆ..
                 ಸಾವಿರ ಜನ್ಮಕೂ ನೀನೆ ನನ್ನ ಹೃದಯವನಾಳಲು ಬಯಸಿರುವೆ..
                       ಇದೇ ವಿಧಿಗೂ ಮನದ ಯಾಚನೆ..
                    ನಿನ್ನನಗಲಿ ಇರುವುದನರಿಯೇ..
                           ಪ್ರೀತಿ ಹೀಗೇನೇ...|| ೨ ||

                  ಕರೆಯುತಿದೆ ನನ್ನ ನಯನ,
                  ಹೃದಯ ಮಂದಿರಕೆ ನಿನ್ನ..
                  ಪ್ರೇಮದ ಈ ಸಿಹಿ ಪಯಣ,
                  ನಡೆವೆಯಾ, ಜೊತೆಯಲಿ ನನ್ನ..
                      ನಿನ್ನ..ಕುರಿತೇ ಎಲ್ಲ ಯೋಚನೆ...
                    ಕ್ಷಣಕೂ ನವ್ಯ ಭಾವನೆ ತರುವ..
                        ಪ್ರೀತಿ ಹೀಗೇನೇ.....||

Tuesday, May 3, 2011

  ( ಈ  ಹಾಡು  " ಸಂಗಮ " ಚಿತ್ರದ  " ಮಧುಮಾಸ ಅವಳಿಗೆ ಖಾಸ " ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ )            


                          ಬದುಕಲ್ಲಿ ನೂತನ ಭಾಸ 
                          ತನುವಲ್ಲಿ ರಮ್ಯ ವಿಲಾಸ
                          ಮನದಲ್ಲಿ ಪ್ರೇಮ ವಿಕಾಸ 
                          ಆಕೆ ನೆನಪಲ್ಲಿ .....

                          ಬೆಳದಿಂಗಳೇ ಅವಳ ಹಾಸ 
                          ನಡಿಗೆಯಲಿ ಬೆಳ್ಳನೆ ಹಂಸ 
                          ಕಳಿಬೇಕು ನೂರು ತಾಸ
                          ಆಕೆ ನೆನಪಲ್ಲಿ...

                          ನಿಂತರೆ ..ಬೇಲೂರು ಶಿಲ್ಪ ಉರುಳಬೇಕು..
                          ಸುತ್ತಲೂ.. ಹತ್ತಾರು ದುಂಬಿ ಹೊರಳಬೇಕು ..
                          ಅವಳನ್ನೇ ನೋಡುತ್ತಾ ಕವಿಗಳೇ ದಣಿಬೇಕು...

                          ನನ್ನವಳು..sss 
                          ನನ್ನವಳು.. ಬರೆಯದ ಸೌಂದರ್ಯದ ಸಾಲು 
                          ನನ್ನವಳು.. ಜೊತೆಯಾಗೆ ಸ್ವರ್ಗಕೂ ಸೋಲು ||

              ಕಂಗಳ ಹೊಳಪು ನೋಡಿಯೇ ತಾವರೆ ಬರಿ ನಾಚಿ ನಾಚಿ ಮುದುಡಲುಬೇಕು ..
              ಕೆನ್ನೆಗೆ ಸಿಹಿ ಮುತ್ತಿಕ್ಕಲು..ಗಾಳಿಯೂ ಓಡಿ ಓಡಿ ಹಿಂಬರಲುಬೇಕು ...
                               ಚೆಲು ಚೆಲು ಚೆಲು ಚೆಲುವಿನ ಬಳ್ಳಿ 
                               ಚಿಲಿ ಪಿಲಿ ಚಿಲಿ ಕಲರವದಲ್ಲಿ 
                               ಕುಲು ಕುಲು ಕುಲು ನಗೆಯ ಚೆಲ್ಲಿ 
                                  ಮನವ.. ಸೆಳೆದು ..ಬಿಡಬೇಕು ...
                               ಹಿಮ ಹಿಮ ಹಿಮ ತುಸು ಮಂಜಲ್ಲಿ 
                               ಚುಮು ಚುಮು ಚುಮು ನಸುಬೆಳಕಲ್ಲಿ
                               ಘಮ ಘಮ ಘಮ ಎಸಳಿನ ಮಲ್ಲಿ 
                                  ಅರಳೋ.. ಹಾಗೆ ಇರಬೇಕು.. ಅವಳು .......||೧||

                          ನನ್ನವಳು ..ಬರೆಯದ ಸೌಂದರ್ಯದ ಸಾಲು..
                          ನನ್ನವಳು ..ಜೊತೆಯಾಗೆ ಸ್ವರ್ಗಕೂ ಸೋಲು ..||

              ಸುಂದರ ಭವ್ಯ ತೇರೋಳು ಆಕೆಯು ಬಾನೊಳಗೆ ಹಾರಿ ವಿಹರಿಸಬೇಕು ..
              ಕಾಣದ ಸುರರ ಲೋಕದಿ ಹೂಗಳು ಅವಳಡಿಗೆ ಎರಗಿ ವಿರಮಿಸಬೇಕು ...
                               ಸರ ಸರ ಸರ ಸರಿಯೋ ಮೇಘ 
                               ಭರ ಭರ ಭರ ಸುರಿಯೋ ಜೋಗ 
                               ಗರ ಗರ ತಿರುಗೋ ಭೂಭಾಗ 
                                  ನಿಲಿಸೋ.. ಚೆಲುವೆ.. ಇರಬೇಕು...
                               ಥಳ ಥಳ ಥಳ ಥಳಿಸೋ ರನ್ನ 
                               ಫಳ ಫಳ ಫಳ ಹೊಳೆಯೋ ಚಿನ್ನ 
                               ತಳ ಮಳ ತಳ ಮಳಿಸೋ ನನ್ನ 
                                   ಒಲಿಸಿ.. ತಣಿಸೋ ಬೆಡಗಿ.. ಇರಬೇಕು.....||೨||
   
                          ನನ್ನವಳು.. ಬರೆಯದ ಸೌಂದರ್ಯದ ಸಾಲು..
                          ನನ್ನವಳು.. ಜೊತೆಯಾಗೆ ಸ್ವರ್ಗಕೂ ಸೋಲು .....||

Monday, May 2, 2011

         
                                      ಬೆಳದಿಂಗಳು 

                                           ಎಂತು ವರ್ಣಿಸಲಿ ಚಂದ್ರಿಕೆಯ ಚೆಲುವು.
                                           ಸುಂದರದ ರಾತ್ರಿಯಲಿ ಚಂದ್ರಮನ ಒಲವು.

                                           ಚುಕ್ಕಿಗಳ ತೋರಣವು ಗಾಢಕೃಷ್ಣತೆಯಲ್ಲಿ,
                                                ಮುಸುಕಿ ಮರೆಯಾಗುತಿಹ ಮೇಘಗಳ ಮಾಯೆ.
                                           ಶುಭ್ರ ಬೆಳದಿಂಗಳ ಬೆಳಕ ವಿಸ್ತರಣೆಯಲಿ,
                                                ಮೂಡಿಹುದು ಬಾನೊಳಗೆ ಉತ್ಸವದ ಛಾಯೆ..

                                           ಸೂರ್ಯನಿರುವಿಕೆಯಲ್ಲಿ ಬಳಲಿ ಹೋಗಿವೆ ಬೇಗ,
                                                ಕುಮುದಸಂಚಯವು ಝಳ-ತಾಪದಲಿ ಬೆಂದು.
                                           ಮಂದ ಶೀತಲ ಶಶಿಯು ನಗುತ ಉದಿಸಲು ಈಗ 
                                                ಎಲ್ಲೆಡೆಗೂ ಕಂಪೆಸೆದು ನಿಂತಿಹವು ಬಿರಿದು..

                                           ದಿನವಿಡೀ ಚಡಪಡಿಸಿ ಪ್ರಿಯಕರನ ಸನಿಹಕ್ಕೆ,
                                                ಈ ಚಕೋರಗಳು ಕಾದು ಕುಳಿತಿಹವು.
                                           ಆಗಸದಿ ಸೌಮ್ಯಭೇಶನ ಪ್ರಭೆಯ ಸಂಭ್ರಮಕೆ,
                                                ಹರ್ಷನಿರ್ಭರವಾಗಿ ಕುಣಿದಾಡುತಿಹವು..

                                           ತಿಳಿನೀರಿನಲಿ ಚಂದ್ರ ಬಿಂಬವನು ಕಂಡಿಲ್ಲಿ,
                                                ಹಿಡಿಯಲು ಮೇಲೇರಿ ಆಡುತಿವೆ ಮೀನು.
                                           ದಿನವೆಲ್ಲ ದಣಿದು, ಈ ರಮ್ಯ ನೀರವತೆಯಲಿ,
                                                ಹೊಂಗನಸಿನೊಳು ಸುಪ್ತ, ಜಗವು ತಾನು..

                                            ಯಾರು ಕೊಟ್ಟಿಹರು?! ಆಕಾಶದೊಡೆಯಗೆ ಇಂಥ 
                                                 ರಜತ ಕಾಣಿಕೆಯನ್ನು ಸದ್ದಿಲ್ಲದಂತೆ..
                                            ಮಧುರ ಬೆಳಕನು ಈವ ವೃತ್ತಬೊಂಬೆಯು ಸ್ವಂತ 
                                                 ಸೃಷ್ಟಿಕರ್ತನ ಭವ್ಯ ಕಲೆಯ ಸಂತೆ ..

ಚಿತ್ರಕೃಪೆ--arch0708.goldtent.net