Thursday, December 20, 2012

ದ್ವಂದ್ವ..!!
ನಯನಗೋಚರದ ಋತವಿಷಯಗಳಿಗನೃತತ್ವ
ಕಾಣಿಸದ ಅನೃತ ಸಂಗತಿಗಳಿಗೆ ಋತವು..
ಒಬ್ಬೊಬ್ಬರೊಂದೊಂದು ದೃಷ್ಟಿ ಕಾಲಾತೀತ
ಪರ-ವಿರೋಧದ ನಡುವೆ ಸಮಾನ ಅಂತರವು..


ಧರ್ಮವನೆ ಜೀವಿಸುವ ಧರ್ಮನಿಷ್ಠನು ಅಲ್ಲಿ
ಧರ್ಮವಿಲ್ಲದೆ ದೈವದೂಷಕನೂ ಇಹನಿಲ್ಲಿ..
ನಡುಮಧ್ಯೆ ದೇವರನೆ ವ್ಯಾಪಾರ ಮಾಡುವವ
ಅದರೊಳಗೂ ಒಂದಿಷ್ಟು ಕಾಪಟ್ಯದ ವಿಶ್ವ..

ಇತಿಹಾಸವನು ಮರೆತು ಮೆದ್ದು ಮಲಗಿಹನೊಬ್ಬ
ಚರಿತೆಪುಟಗಳ ಕೆದಕಿ ಓದಿ ಬೀಗುವನೊಬ್ಬ.
ನಡುಮಧ್ಯೆ ಎಲ್ಲವನು ತಿರುಚಿ ಹೇಳುತ ನಿತ್ಯ
ಕಲಸುಮೇಲೋಗರವು ಗತ ಸತ್ಯ-ಮಿಥ್ಯ..

ದೇಶದುತ್ಥಾನದಲಿ ಉಸಿರು ಬಸಿದಿಹ ಧೀರ
ದೇಶವನೆ ಕೊಳ್ಳೆಹೊಡೆದಾತ್ಮಹೀನನು ಚೋರ..
ನಡುಮಧ್ಯೆ ದೇಶಭಾಷೆಯ ಪತಾಕೆಯ ಹೊತ್ತು
ತಮ್ಮ ಮನೆ ಸೂರಿನೊಳು ಮುಚ್ಚಿಹರು ತೂತು..

ಲೋಕದ ಉಗಿಬಂಡಿ ಸಾಗಿದೆ ನಿರಂತರವು
ಎಂದಿಗೂ ಒಂದಾಗದಿಹ ಹಳಿಯ ಮೇಲೆ..

ಅಂಕುಡೊಂಕುಗಳಾಟ ಇದ್ದರೂ ಅಲ್ಲಿಲ್ಲಿ
ಬಿದ್ದಿಲ್ಲ ಉಗಿಬಂಡಿ ; ಇದು ಯಾರ ಲೀಲೆ..?!!!!!
 


ಚಿತ್ರಕೃಪೆ - ಅಂತರ್ಜಾಲ

Wednesday, December 12, 2012

[ ಈ ಹಾಡು, "ಹುಡುಗರು" ಚಿತ್ರದ "ನೀರಲ್ಲಿ ಸಣ್ಣ ಅಲೆಯೊಂದು ಮೂಡಿ" ಗೀತೆಯ ರಾಗಕ್ಕೆ ಬರೆದ ಹೊಸ ಸಾಹಿತ್ಯ ]

ನಾ ಕಂಡ ಕಣ್ಣ ಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..
ಒಲವಾಯ್ತು ಮೌನದಿ, ಎದೆಯಲ್ಲಿ ಹಾಡುತಾ..
ಮಗದೊಮ್ಮೆ ಮೌನವೇ..ಬೇರೆಯಾಗುತಾ..||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..

ಊರೆಲ್ಲ ಪ್ರೀತಿಯನರಸಿ ನಾನಂತೂ ಅಲೆಮಾರಿ..
ಯಾರಿಲ್ಲ ಹಾದಿಯಲೀಗ ನಿನ್ನಂಥ ಸಹಚಾರಿ..
ಬಾನಿನಲ್ಲಿ ಮಿಂಚೊಂದು ಬಂದ ಹಾಗೆ ನೀನು,
ಘಳಿಗೆಯಷ್ಟೇ ಬೆಳಕಾಗಿ ಕಾಣದಾದೆ ಇನ್ನು..
ಹೊಂಗನಸ ಹೂವ ಪೋಣಿಸಿದೆ ನಿನ್ನ ಮುಡಿಗರ್ಪಿಸೋಣವೆಂದು
ಹೂವೆಲ್ಲ ಚೆಲ್ಲಿ ಈ ಹಾರ ಛಿದ್ರ, ಇದಕೆಲ್ಲಿ ತಾಣವಿಂದು..||1||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..

ತಂಗಾಳಿ ಬೀಸಿದರೂನು ಕಂಪಿಲ್ಲ ಜೀವಂತ..
ಮುಳ್ಳಂತೆ ಕಾಡಿದೆ ಈಗ ನೀನಿಲ್ಲದೇಕಾಂತ..
ಭಾವಕೊಂದು ಕಿಡಿ ಸೋಕಿ ಹೊತ್ತಿ ಉರಿದ ಬಗೆಗೆ..
ಬಿರುಕು ಮೂಡಿ ಸೇತುವಲಿ ಭಿನ್ನವಾಯ್ತೆ ಬೆಸುಗೆ..
ಧ್ವನಿ ನಿಂತರೂನು ಬರಿ ಗುನುಗುತಿಹುದು ಈ ಹೃದಯ ನಿನ್ನ ರಾಗ..
ಹೊರಹೋದರೂನು ನನ್ನಿಂದ ನೀನು, ಉಳಿದಿಹುದು ಕೂತ ಜಾಗ..||2||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..
ಒಲವಾಯ್ತು ಮೌನದಿ, ಎದೆಯಲ್ಲಿ ಹಾಡುತಾ..
ಮಗದೊಮ್ಮೆ ಮೌನವೇ..ಬೇರೆಯಾಗುತಾ..||

Sunday, December 9, 2012

ಪ್ರಸ್ಥಾನ ಗೀತೆ..!!
ಹೊರಟಿಹೆನು ನಾನಿಂದು ಭಾರ ಹೆಜ್ಜೆಯನಿಟ್ಟು
ಮರಳಿ ನನ್ನಯ ದಿಶೆಗೆ ನಿನ್ನಿಲ್ಲಿ ಬಿಟ್ಟು...||
 
ಮುಂಬಾಗಿಲಂಚಿನಲಿ ಕೊಂಚ ಮಿಂಚಾಡಿಸುವ
ರೆಪ್ಪೆ ಬಡಿಯದ ನಿನ್ನ ಕಂಗಳು ಹೊಳೆದು..
ಮತ್ತೊಮ್ಮೆ ಕರೆದಂತೆ ಭಾಸ; ಬರಲೇ? ಬಿಡಲೇ?
ಸಂದಿಗ್ಧಭಾವದಲಿ ಹೃದಯ ನಿಂತಿಹುದು..||

ಏರಿ ಕೂತಿಹ ಬಂಡಿ, ಓಡುತಿದೆ ಊರಿನೆಡೆ
ಬರಲೊಪ್ಪದೆನ್ನ ಮನವೆಳೆದು ಸೆಳೆದು..
ಹಾದಿಯ ಇಕ್ಕೆಲದಿ ನಿಂತ ಹಸುರಿನ ಚೆಲುವು
ನನ್ನ ಏಕಾಂತ ತಣಿಸದಲೇ ಸೋತಿಹುದು..|| 

ನಿನ್ನ ನಗುವಿರದೆ ಆರಂಭವಾಗುವ ಬೆಳಗು
ನಿನ್ನ ಮಾಂತ್ರಿಕಸ್ಪರ್ಷವಿರದಡಿಗೆ ಘಮವು..
ನಿನ್ನ ಹೂಬಂಧದಲಿ ಕರಗಿಹೋಗದ ರಾತ್ರಿ
ನೆನೆದೆ ಬರಿ ಪರಿತಪಿಸುತಿಹೆ ನಾನು ಕ್ಷಣವೂ..||

ತವರಿನಂಗಳದಲ್ಲಿ ನಿನಗೆ ಬಾಲ್ಯದ ನೆನಪು
ನನಗಾದರೋ ವಿರಹದುರಿಯೇ ನೂರೊಂದು..
ದಿನವು ಕಳೆಯಲು ಗೀಚುವೆ ದಿನಾಂಕದ ಗುರುತು
ಸಂತೈಸಲಾವರಿಸು ಬಳಿ ಬೇಗ ಬಂದು..|| ಚಿತ್ರಕೃಪೆ - ಅಂತರ್ಜಾಲ

Tuesday, November 27, 2012

ಕಲಿಕೆ..!!ಅಲ್ಲೊಂದು ಹಕ್ಕಿ ತಾರುಣ್ಯ ಸಂಭ್ರಮದಲ್ಲಿ
ಉಲಿದು ಚಿಲಿಪಿಲಿಯ ಸ್ವರತಾನಸಂಗತಿಯ,
ಗರಿಗೆದರಿ ದೂರದ ದಿಗಂತಕ್ಕೆ ಹಾರಿರಲು
ಕಲಿತಿಹೆನು ಬದುಕಿನ ಸ್ವಾವಲಂಬನೆಯ..||1||

ಇರಲಿ ಇರದಿರಲಿ ಮುಡಿವವರು ಮೆಚ್ಚುವ ಜನರು
ಗಂಧ-ಸೌಂದರ್ಯತೆಗೆ ಹಾಡಿ ಹೊಗಳಿಕೆಯ..
ರವಿಯುದಯವಾದ ಚಣ ಬಿರಿವ ಸುಮತತಿಯಿಂದ
ಕಲಿತಿಹೆನು ಅನವರತ ಕರ್ತವ್ಯಮತಿಯ..||2||

ನೋಟ ಹಾಯಿಸದರೆಲ್ಲೆಡೆ ಎಲ್ಲೆ ಮೀರಿರುವ
ಜಲರಾಶಿಯಲಿ ಹುದುಗಿಸುತ ಜೀವಕುಲವ..
ತೆರೆಗಳುದ್ಘೋಷದಲಿ ಮೆರೆವ ಕಡಲಾಟದಿ
ಕಲಿತಿಹೆನು ನಾನಿಂದು ಗಾಂಭೀರ್ಯತನವ..||3||

ತನ್ನ ಬಸಿರೊಳಗಿಂದ ಚೈತನ್ಯವೀಯುತಲಿ
ಭೂಮಿ ತಾ ಪೊರೆದಿಹಳು ಬಗೆಬಗೆಯ ಪ್ರಾಣ..
ದ್ರೋಹವೆಸಗಿದರೂನು ಮತ್ತೆ ಮಮತೆಯ ತೋರೆ,
ಕಲಿತಿಹೆನು ಕ್ಷಮಾ-ಸಹನೆಯ ಸುಗುಣ..||4||

ದಟ್ಟಡವಿಯನೆ ಆಹುತಿಯನಾಗಿಸೆ ವಹ್ನಿ
ದುಷ್ಟತನವನು ಪೂರ್ಣ ಭಸ್ಮಿಸುವ ಕಲೆಯ..
ಕೆಳಮುಖದಿ ಹೂತ್ತಿಸೆ ಪುನರ್ಜ್ವಾಲೆ ಪುಟಿದಿರಲು
ಕಲಿತಿಹೆನು ಎಂದಿಗೂ ಊರ್ಧ್ವದೆಡೆ ಗತಿಯ..||5||

ಜೊತೆಬಂದ ಪರಿಮಳವ ಕೂಡಿ ಸಹಿಸುತ ಮುಂದೆ
ಎದುರಿಸುತ ಎದುರಿನ ಪರ್ವತದ ತಡೆಯ..
ಜನರ ಶ್ವಾಸೋಚ್ಛ್ವಾಸಹೇತುವಿಹ ಪವನದಿಂ
ಕಲಿತಿಹೆನು ನಿತ್ಯವೂ ಚಲನಶೀಲತೆಯ..||6||

ಬ್ರಹ್ಮಾಂಡ ವ್ಯಾಪಿಸಿದನಂತತೆಯ ಆಕಾಶ
ಭಿನ್ನವಿದ್ದರು ಪೂರ್ವ-ಪಶ್ಚಿಮಗಳೆಂದು..
ಅವರು-ಇವರೆನ್ನದಲೇ ಸೂರಾಗೆ ಸರ್ವರಿಗೂ
ಕಲಿತೆ ಸಮತೆಯೇ ಏಕತೆಯ ಮೂಲವೆಂದು..||7||

ಇನಿತು ವೈಚಿತ್ರ್ಯಗಳ ಒಡಲೊಳಗೆ ಕಾಪಿಟ್ಟು
ಸತತ ಬೋಧಿಸುತಿಹಳು ಪ್ರಕೃತಿಯ ಮಾತೆ..
ಬರಿ ಬುದ್ಧಿಯೊಳು ಬರದೆ, ಕಾರ್ಯದೊಳು ಕಲಿಕೆಯಿರೆ
ನಮ್ಮ ಜೀವನವೆಲ್ಲ ಮಹಾಯಶೋಗಾಥೆ..||8||ಚಿತ್ರಕೃಪೆ-ಅಂತರ್ಜಾಲ

Wednesday, November 21, 2012

[ ನಾನು ಬರೆದ 25ನೇ ಚಿತ್ರಗೀತೆ..!!!!
'ಸಂಧ್ಯಾರಾಗ' ಚಿತ್ರದ, 'ಪೂರಿಯಾ  ಕಲ್ಯಾಣ' ರಾಗದಲ್ಲಿರುವ, 'ನಂಬಿದೆ ನಿನ್ನ ನಾದದೇವತೆಯೇ' ಹಾಡಿನ ಧಾಟಿಗೆ ಬರೆದ ನೂತನ ಗೀತೆ.. ಶಿವನ ಸ್ತೋತ್ರ ರೂಪದಲ್ಲಿ...]ಪಾಲಿಸು ದೇವ ಪಾರ್ವತೀಧಣಿಯೆ..
ಲಯತಾಳದೊಡನೆ ಕುಣಿವ ನಟಮಣಿಯೆ..|
ಉರಗಭಸ್ಮಭೂಷಿತ ಶರೀರಿಯೇ..
ಡಮರುಶೂಲಧರ ಕೈಲಾಸದೊರೆಯೇ..||


ಪಾಲಿಸು ದೇವ ಪಾರ್ವತೀಧಣಿಯೆ..|

ನಂದಿಗಮನ ಪದ ಪೊಂದಿದೆ ಛಂದದಿ,
ಅಂಧವ ನಂದಿಸೋ ಇಂದುವಿನಂದದಿ..
ಕುಂದು..ನೂರೆಂಟಿದೆ..
ಒಂದೂ..ಗಣಿಸದೆ..
ದೇವ..ದೇವ..ಕಾರುಣ್ಯದಾಂಬುಧೇ..
ಬಂಧು ಕಾಣೆ ನೀನಲ್ಲದೆ...
ತಂದೆಯಂತೆ ಪೊರೆ ಹಿಂಗದೆ...||  

Thursday, November 15, 2012

ಮತ್ತೆ ಚಿಗುರಿತು ಮರ..!!


ಪೊಡವಿಯೊಡಲಿನ ತುಸು ಬೆಚ್ಚಗಿನ ಕಾವು
ಹಿಡಿದಿಟ್ಟ ಮಣ್ಣಿನೊಳು ಊರಿಸುತ ಠಾವು..
ಮೊಳಕೆಯೊಡೆದರಳಿಹುದು ವೃಕ್ಷದ ಚಿಗುರು
ಪ್ರೀತಿಸುತ ತಾ ನಿಂತ ನೆಲವ ಹಗಲಿರುಳು..

ಯಾರೋ ನೀರೆರೆದಿಹರು ವಾತ್ಸಲ್ಯ ಸಿಂಧು
ಬೇಲಿಯೊಳಗಿಂಬಿಟ್ಟು ಪೊರೆವನ್ಯ ಬಂಧು..
ಮಗದೊಬ್ಬ ಶಕ್ತಿರಸ ನೀಡಿ ಬೆಳೆಸಿಹನು,
ಪ್ರತಿಹೆಜ್ಜೆಯಲು ಪರಿಸರದ ಋಣದಿ ತಾನು..

ಹೊಸದೇನೋ ಸಾಧಿಸುವ ಬಯಕೆ ತುಂಬಿರಲು
ಸುತ್ತಮುತ್ತಲು ಬರೀ ಕಳೆಗಳದೆ ಸಾಲು..
ಸ್ವಾರ್ಥ-ಅಸೂಯೆಗಳ ಗೆದ್ದಲಿನ ಹುಳುಗಳು
ಕೊರೆದು ಬರಿದಾಗಿಸಿವೆ ಮರದ ಒಳತಿರುಳು..

ಕ್ಷೀಣವಾಗಿಹುದಿಲ್ಲಿ ಇನಿದನಿಯ ಹುರುಪು,
ನಿಸ್ತೇಜವಾಗಿಹುದು ಹೂ-ಎಲೆಯ ಹೊಳಪು..
ಆದರೂ ನವಚೈತ್ರದಾಪೇಕ್ಷೆಯಲಿ ನಿರತ
ಅನ್ಯದಿಶೆ ಹೊಂಗಿರಣದರಸುವಿಕೆ ನಿರುತ...

ಮರಳುಗಾಡಲಿ ದೊರೆವ ಜಲದ ಸಿಹಿಸೆಲೆಯಂತೆ
ಅಲ್ಲೊಂದು ಇಲ್ಲೊಂದು ಸ್ಫೂರ್ತಿಗಳ ಸಂತೆ..
ಭರವಸೆಯ ಹೊಮ್ಮಿಸಲು ಸಾಕು ನೆಲೆಯೊಂದು
ಹೊಸಕನಸಿನಲಿ ಮತ್ತೆ ಮರ ಚಿಗುರಿತಿಂದು..||

Friday, August 31, 2012

ಪರಿಣಯ..!!

ಬೆಳಕಿನ ಬಿಂದುಗಳ
ಬಂಧದಲಿ ಹೊಂದಿಸಿದ
ಮಂದಿರದೊಳಗೆ ಇಂದುವಿನ ಪರಿಣಯ...
ಮಂಗಳಾಂಗಿನಿ ಭೃಂಗ-
-ಕುಂತಲೆ ರೋಹಿಣಿಯ
ಸಂಗದಿಂದಲಿ ಶೃಂಗರಿತವೀ ಪ್ರಣಯ..||

ಶರಧಿಯ ಗರ್ಭದಲಿ
ಅಬ್ಬರಿಸಿ ಮೇಲೆದ್ದ
ಉಬ್ಬಲೆಗಳೆಬ್ಬಿಸಿದ ಮಂತ್ರಗಾನ..
ಶೀತಲಕೀಲಾಲದಲಿ
ಸಾಲು ನೆಲೆನಿಂತಿರುವ
ನೀಲೋತ್ಪಲದಿ ರಚಿತ ಪುಷ್ಪಕವಿಮಾನ..||

ಆಗಸಾಂಗಳದೊಳಗೆ 
ನೀಳ ಬಾಳೆಲೆಯಲ್ಲಿ 
ಬೆಳದಿಂಗಳಿನ ಕಂಗೊಳಿಸುವ ಭೂಮ..
ತಲೆದೂಗುತಿಹ ತರುಗಳಾ
ಚಾಮರದಿ ಸ್ಫುರಿತ
ಹಿತಸಮೀರನ ಕೂಡಿರುವ ಸುರಭಿಪ್ರೇಮ..||


ರೂಪ್ಯಸಾರೂಪ್ಯತೆಯ
ಪ್ರಾಪ್ತ ಸುಪಯೋಧರದಿ
ಕಲ್ಪಿತವಿತಲ್ಪದಲಿ ರಾಜಿಸುತಲಿ..
ಹೂಗನಸಿನ ಹಾದಿ
ಹಾಸಿ ಹೃದಯದಿ ಹೆಣೆದ
ಹರುಷದೀ ಹೊನಲೆಂದೂ ಹೊಳೆಹೊಳೆಯುತಿರಲಿ..||


Saturday, August 25, 2012


[ "ಭಾಮಿನಿ" ಷಟ್ಪದಿಯಲ್ಲಿ ವಿರಚಿತ.]

* ಶಾರದಾ ವಂದನೆ *


ಶಾರದೇಂದುಪ್ರತಿಮಶೋಭಾ- 
ಪಾರಕಾಂತಿತದಿಕ್ಸಮೂಹತು-
ಷಾರನಿಭರದರಕ್ತಧರಯುಕ್ತಸ್ಮಿತಾನನಳೇ..
ಮೂರು ಲೋಕದ ಸುರನರಪಪರಿ-
ವಾರದಿಂ ಪ್ರತ್ಯಹದಿ ಪೂಜಿತೆ 
ಶಾರದೆಯೆ ಹಸ್ತಾವಲಂಬನವಿತ್ತು ಪಿಡಿ ಕೈಯ.||೧||

ಕಮಲೆರಮಣನ ನಾಭಿಯೊಳಗಿಹ
ಕಮಲಪೀಠದಿ ಜಾತ ವಿಧಿಕರ-
ಕಮಲ ವರಿಸಿಹ ಪಟ್ಟದರಸಿಯೆ ವಿಮಲಕೀರ್ತಿತಳೇ...
ಕಮಲಗಂಧಿಯೆ ಕೋಮಲಾಂಗಿಯೆ 
ಕಮಲನೆತ್ರಳೆ ನಿನ್ನ ಚರಣದ 
ಕಮಲಕೆರಗುವೆ ವಿಪುಲಮಂಗಳಗೈದು ಸಲಹುವುದು.||೨||


ಶ್ವೇತವರ್ಣಾಂಬರಧರೆಯೆ ಬಲು
ಪೂತಗುಣೆ ನಿಷ್ಕ್ರಾಂತಕುಸ್ವರ-
ಧೀತಸನ್ಮನರಮ್ಯನಾದಕವೀಣೆಮಂಡಿತಳೇ..
ಜಾತರೂಪಾತ್ಮಕ ರತುನಮಣಿ-
ಜಾತಹಾರಾಭಾರಣೆ ವಿದ್ಯೆನಿ-
ಕೇತನಳೆ ಪೊಡಮಡುವೆ ಪುಸ್ತಕಹಸ್ತೆ ಹಂಸರಥೆ..||೩||

ಮಡುವಿನೊಳಗಜ್ಞಾನಗಾಮಿನಿ
ಯಡ ಗಿಹೆನು ನಾ ಮಂದತನದಲಿ 
ಪೊಡವಿಯೊಳು ನಿನ್ಹೊರತು ಪೊರೆವರ ಕಾಣದಲೆ ಇಂದು..
ಬಿಡದೆ ನಿನ್ನನೆ ಧೇನಿಪೆನು ತಡ-
ವಿಡದೆ ಸುಜ್ಞಾನವನು ಪಾಲಿಸಿ
ಕಡೆಯ ಹಾಯಿಸು ನಾವೆಯಂದದಿ ವಾಣಿ ಕಲ್ಯಾಣಿ.||೪||

ಎನಿತು ಲೋಗರ ಮೊಗದಲನುದಿನ
ವಿನಿತು ನೈಕಧ ವಚನ ಹೊಮ್ಮಿಪ
ಘನತೆ ನಿನ್ನದು ದೇವಿ ನುಡಿಗಭಿಮಾನಿ ಗೀರ್ವಾಣಿ..
ತನಯ ನಾ ನಿನಗನ್ಯನಾಪೆನೆ
ಮನದ ಮಂಟಪದೊಳಗೆ ನಿಚ್ಚದಿ
ಕನಿಕರಿಸಿ ಸುಸ್ಥಿರವಿರು ಪ್ರಣತಾತ್ಮಹರಿಣಿ.||೫||

Monday, August 6, 2012

ಭೃಂಗದ ಬೆನ್ನೇರಿ..!!


ಕಂಡ ನೂರು ಕನಸಿಗೆಲ್ಲ
ರೆಕ್ಕೆ ಪುಕ್ಕ ಕಟ್ಟಿ ಹಾರಿ,
ಹಚ್ಚ ಹಸಿರ, ಸ್ವಚ್ಛ ಜಗದಿ
ವಿಹರಿಸುತ್ತ ಸುಖಿಸುತಿರಲು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ದೇವಪಾರಿಜಾತವಿರಲಿ
ದೀನಸುಮವ್ರಾತವಿರಲಿ
ಅಲ್ಲಿಗಿಲ್ಲಿಗೆಲ್ಲ ತೆರಳಿ
ಸ್ನೇಹಲೋಕ ಹೆಣೆಯಲೆಂದು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ಎರಡು ದಿನದ ಬದುಕಿನಲ್ಲಿ
ಎಲ್ಲರೊಲುಮೆ ಸಿಹಿಯ ಹೀರಿ
ಸತ್ತ ಮೇಲೂ ಮಧುವ ಬೀರಿ
ಮೆದ್ದ ಜನರ ಮನದೊಳಿರಲು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ಗೂಡಿನರಸಿ ನಾಡದೇವಿ
ಅವಳ ಆಜ್ಞೆಯಾಳು ನಾನು
ನಮ್ಮ ಬಳಗ ಮುರಿಯ ಬಂದ
ದುರುಳರನ್ನು ಸರಿಸಲೆಂದು..
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!


Friday, July 6, 2012

ಮೋಡದ ಗುಮ್ಮ.. [ಶಿಶುಗೀತೆ]


ಅಮ್ಮ ನೋಡಾಗಸದಿ ಮೋಡದ
ಗುಮ್ಮ ಗರ್ಜಿಸಿ ಬರುವನು..
ಧುಮ್ಮನಿತ್ತೆಡೆ ಬರಲು ಅಂಜಿಕೆ
ಸುಮ್ಮನಿಲ್ಲಿಯೆ ಇರುವೆನು..||


ಹೊರಗೆ ಹೋಗಲು ಮಳೆಯ ನೀರನು
ಸುರಿಸಿ ತೊಂದರೆ ನೀಡುವ..
ಮರಳಿ ಎಲ್ಲೆಡೆ ಕೆಸರಿನೋಕುಳಿ
ಎರಚುತಲಿ ನೆಗೆದಾಡುವ..||


ಬೆಳಗದಲೆ ರವಿಮಾಮ ಮೇಘದ
ಒಳಗೆ ಅಡಗಿಹ ಹೆದರುತಾ..
ಚಳಿಗೆ ಮೈ ಗಡ ನಡುಗುತಿಹುದು 
ಬಳಿಯೇ ನೀನಿರು ರಮಿಸುತಾ..||


ದಾಳಿ ನಡೆಸುವ ಗುಡುಗು-ಮಿಂಚಲಿ
ಧೂಳನೆಬ್ಬಿಸಿ ಗಾಳಿಗೆ
ತಾಳಲಾರೆನು ಗುಮ್ಮನಾರ್ಭಟ
ನಾಳೆ ಹೋಗುವೆ ಶಾಲೆಗೆ..||

Sunday, June 24, 2012

ಕೆರೆಯ ತೀರ..!!


[ ಕೆಲ ದಿನಗಳ ಹಿಂದೆ, ಸ್ನೇಹಿತರೆಲ್ಲ ಸೇರಿ ವಿಹಾರಕ್ಕೆಂದು ಹತ್ತಿರದ ಕೆರೆಗೆ ಹೋಗಿದ್ದೆವು..
ಅಲ್ಲಿನ ಆ ಆಹ್ಲಾದಕರ ವಾತಾವರಣದಲ್ಲಿ, ಗೆಳೆಯರೆಲ್ಲ ಕವನವೊಂದನ್ನು ಬರೆಯಲು ಹೇಳಿದಾಗ, ಬರೆದ ಕವನವಿದು..]


               


ನೀರತೆರೆಗಳ ಧ್ವಾನದಲ್ಲಿಯೂ, ನಿನ್ನ ಹೆಸರಿನ ಇಂಪಿದೆ..
ತಂಪು ವಾಯುವಿನೋಕುಳಿಯಲು, ಮೌನದುಸಿರಿನ ಕಂಪಿದೆ..||


ಸಾಲುಮರಗಳ ಎಲೆಯ ಮರೆಯಲಿ, ಮಂದಹಾಸದ ಹೂವಿದೆ..
ಕೆರೆಯ ತೀರದ ಶೀತಲತೆಯಲೂ, ನಿನ್ನ ನೆನಪಿನ ಕಾವಿದೆ..||


ಬಾನಿನಲಿ ಚಿತ್ತಾರ ಮೂಡಿಸಿ, ಹೊರಟ ಹಕ್ಕಿಯ ವೃಂದದಿ..
ಮೊಗದ ರೇಖಾಚಿತ್ರ ಕಂಡೆನು, ಸಂಜೆಗೆಂಪಿನ ವರ್ಣದಿ..||ಎಳೆಯ ಹುಲ್ಲಿನ ಎಸಳು ಒಮ್ಮೆಲೇ, ತೂಗಿರಲು ವೈಯ್ಯಾರದಿ..
ಮೋಹಕುಂತಲ ಸೋಕಿ ಕೆನ್ನೆಗೆ, ಇಂದ್ರಜಾಲದ ವಾರಿಧಿ..||

ನಡೆವ ಹೆಜ್ಜೆಯೂ, ಇಣುಕಿ ನೋಡಿದೆ, ಚಡಪಡಿಸಿ ನಿನ್ನೂರಿಗೆ..
ದಡದ ಆಚೆಯೂ, ನೋಟ ಚಾಚಿದೆ, ಗಮ್ಯ ಯಾವುದು ದಾರಿಗೆ.?


ಸ್ವಪ್ನಬುತ್ತಿಯ ಹೊತ್ತು ತಂದಿಹೆ, ಹಂಚಲೋಸುಗ ನಿನ್ನಲೇ..
ಬಂದು ಬೇಗನೆ ತುತ್ತು ನೀಡುತ, ಬಾಚಿ ತಬ್ಬಿಕೋ ಕಣ್ಣಲೆ..||

Wednesday, June 20, 2012

[ ಈ ಹಾಡು, "ರೋಮಿಯೋ" ಚಿತ್ರದ, "ಆಲೋಚನೆ..ಆರಾಧನೆ..ಎಲ್ಲ ನಿಂದೇನೆ.." ಎಂಬ ಹಾಡಿನ ಧಾಟಿಯಲ್ಲಿ ಬರೆದ ಹೊಸ ಸಾಹಿತ್ಯ..]


ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ..
ಸಂವಾದದಿ ಸಂತೋಷದ ಸಂಗಮ..
ನಿನ್ನಾಸೆಯೇ ನನ್ನ ಖುಷಿ ಅಂತಿಮ..
ಬದುಕಿಗೊಂದು ಸಿಹಿಯ ಸಾಲು ತಂದು,
ಪ್ರಣಯದಲ್ಲಿ ಧನ್ಯನಾದೆ ಮಿಂದು,
ನೀನೇ ಸುಧೆಯ ಸಿಂಧು...||ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ..ಕಣ್ಣಿನಲ್ಲಿ ನಿನ್ನ ರೂಪ ಅಗಣಿತ
ನಿಂತ ಮೇಲೆ ನನ್ನ ಭಾವ ವಿಚಲಿತ..
ಬಿಡದಲೇ ನೋಡಿ, ಕರಗಿಸು ನನ್ನೀ ಮನ
ನಿನ್ನ ಮಂದಹಾಸ ಕಾಂತಿ ನೆನೆಯುತ
ಮೌನದೊಂದು ಭಾಷೆಯನ್ನು ಕಲಿಯುತ..
ಅನುಭವಕೀಗ, ಅರಿಯದ ರೋಮಾಂಚನ..||
ಕೇಳು.. ಒಮ್ಮೆ,, ಈ ಗೀತೆಯ..
ಹೇಳು.. ಮತ್ತೆ.. ಈ ಪ್ರೀತಿಯ..||1||ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ..ಸಣ್ಣದಾದ ಮಾತು ಕೂಡ ಸುಮಧುರ
ಬೇಗ ಹಂಚಬೇಕು ಎಂಬ ಅವಸರ
ಪ್ರತಿದಿನ ಹೀಗೆ, ಒಲವಲಿ ಮಾಮೂಲಿಯೇ..
ನಿನ್ನ ಗುಂಗಿನಲ್ಲಿ ಇಂದು ಪ್ರತಿಸ್ವರ
ಹಾಡಿದಂತೆ ಭಾಸವೆಲ್ಲ ಪರಿಸರ
ಹೃದಯದ ದಾರಿ.. ಬೆರೆತಿದೆ ನಿನ್ನಲ್ಲಿಯೇ..
ಏನೋ..ನವ್ಯ.. ಈ ಉತ್ಸವ..
ಎಷ್ಟು..ಭವ್ಯ..ಈ ವೈಭವ...||2||ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ....

Monday, June 11, 2012

ದಿವ್ಯಬಿಂದು..!!ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು
ಭೋರ್ಗರೆದು ಚಿಮ್ಮಿಸುತ ಮಂಗಳದ ಹಾಡು..
ಉಕ್ಕುವ ರಭಸದಲಿ ತೊಳೆದು ಕೊಳೆಗಳ ಕಾಡು
ಸೆಳೆದು ಝೇಂಕರಿಸುತಲಿ ಜನರೆದೆಯ ಗೂಡು..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ಕನ್ನಡಾಂಬೆಯ ಪಾದಪದ್ಮದಿಂ ಉದ್ಭವಿಸಿ
ರಾಜರಾಜೇಶ್ವರರ ಮುಕುಟ ಸಿಂಗರಿಸಿ..
ರನ್ನ ಪಂಪರ ಚಿನ್ನಲೇಖನಿಯ ಸಂದಣಿಸಿ
ದಶದಿಶೆಗೂ ಸಂಸ್ಕೃತಿಯ ಗಂಧ ಸೂಸಿ..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು...


ಸ್ವರ್ಗಕನ್ಯೆಯರಿಳಿದು ಶಿಲ್ಪವಾಗಿಹ ಮೋದ
ಹಸಿರುಮಾತೆಯ ಕರದೊಳರಳಿದ ಪ್ರಭೇದ.
ನಿತ್ಯ ಸಂಗೀತರಸರುಚ್ಛ್ರಾಯದ ನಾದ.,
ವಚನಕೀರ್ತನಗಣದಿ ಪಸರಿಸುತ ಸ್ವಾದ..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ನಡೆದ ಕಡೆ ಎಲ್ಲರೊಡನೊಡನಾಡುವ ನಲುಮೆ
ಸ್ವರ್ಣಯುಗದೊಳು ಮೆರೆದ ಚರಿತೆಯ ಗರಿಮೆ..
ಮೊಗೆದಷ್ಟು ಪುಟಿದೇಳ್ವ ಜ್ಞಾನಸಲಿಲದ ಚಿಲುಮೆ
ಪದಗಳಲ್ಲಿಡಬಹುದೇ, ಕೊನೆಯಿರದ ಮಹಿಮೆ..?!!


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ಧನ್ಯರಾದವರೆಷ್ಟೋ, ಈ ಧಾರೆಯಲಿ ಮಿಂದು
ಬೇಡಿ ಬಂದವರಿಗೊಲಿದಮೃತಸಿಂಧು..
ಗಂಗೆಗಿಂತಲೂ ಅಧಿಕ ಪಾವನತರಂಗವಿದು
ಎಲ್ಲ ಜನ್ಮಕೂ ದೊರಕಲೀ ದಿವ್ಯಬಿಂದು..!!

Monday, April 23, 2012


( ಈ ಹಾಡು, "ಗೆಳೆಯ" ಚಿತ್ರದ "ಈ ಸಂಜೆ ಯಾಕಾಗಿದೆ.." ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ..)


ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..

ನೋವಲ್ಲಿಯೇ ಬೆರೆತಾಗಿದೆ..
ಈಗೆಲ್ಲವೂ ಬರಿದಾಗಿದೆ..
ಹೂವಂತೆ ಕಂಪಿಲ್ಲದೇ...  ಹೂವಂತೆ ಕಂಪಿಲ್ಲದೇ...||
ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...


ಬೇಜಾರಿನ ತುಸುತಾಪಕೆ ಎದೆಯಾಳದಿ ರೂಪಾಂತರ..
ಕನಸಲ್ಲಿಯೇ ಒಂದಾದರೂ ಇನ್ನೇತಕೆ ಈ ಅಂತರ..
ಉಸಿರಾಡದೆ ಮಿಡಿವ ಮನ..
ಹೊರಳಾಡಿದೆ ಬಡಜೀವನ..
ಮೀನಂತೆ ನೀರಿಲ್ಲದೆ.. ಮೀನಂತೆ ನೀರಿಲ್ಲದೆ..||೧||


ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..


ದಣಿವಾರಿಸೋ ಸುಧೆಯಂತೆ ನೀ, ಬಳಿಸಾರುತಾ ತೂಳಲ್ಲಿಯೇ..
ಭಣಗುಟ್ಟಿದೆ ಜಗವೆಲ್ಲವೂ ಕ್ಷಣಕಾಯುತಾ ನಿಂಗಾಗಿಯೇ..
ನಗುವಿಲ್ಲದೇ ಬರಿಕತ್ತಲು..
ಕಳೆಗುಂದಿದೆ ಭುವಿ ಸುತ್ತಲೂ
ಬಾನಂತೆ ಬೆಳಕಿಲ್ಲದೆ.... ಬಾನಂತೆ ಬೆಳಕಿಲ್ಲದೆ...||೨||
ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..

ನೋವಲ್ಲಿಯೇ ಬೆರೆತಾಗಿದೆ..
ಈಗೆಲ್ಲವೂ ಬರಿದಾಗಿದೆ..
ಹೂವಂತೆ ಕಂಪಿಲ್ಲದೇ...  ಹೂವಂತೆ ಕಂಪಿಲ್ಲದೇ...||Monday, April 16, 2012

( "ಅಣ್ಣಾ ಬಾಂಡ್" ಚಿತ್ರದ, "ಏನೆಂದು ಹೆಸರಿಡಲಿ.." ಹಾಡಿನ ರಾಗಕ್ಕೆ ನನ್ನ ಸಾಲುಗಳ ಸ್ಪರ್ಶ..!!!!!)


ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..
ಈ ನೋಟದ ಆಂತರ್ಯ ನಿಂದಾಗಿದೆ
ಹೂಮೇಳದ ಸೌಂದರ್ಯ ಬಂದಾಗಿದೆ..||ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..ಏನಿಂಥ ಧಾವಂತ ಈ ಪ್ರೀತಿ ಸೆಳೆಯಲು..
ನಾನಂತೂ ಜೀವಂತ ನೀನೊಮ್ಮೆ ಸುಳಿಯಲು..
ಹೊಸ ನೌಕೆ ಹೊತ್ತು ಬಯಕೆ, ಕಣ್ಣಲ್ಲೇ ನಿಂತಾಯ್ತು..
ರುಜು ಹಾಕು ನಿನ್ನ ಹೆಸರ ಎದೆಯಲಿ ಕೂತು..
ತಲ್ಲೀನದ  ಈ ಚರ್ಯೆ ಚಂದಾಗಿದೆ..
ಎಂದಿಲ್ಲದ ಆಶ್ಚರ್ಯ ನಂದಾಗಿದೆ..||1||ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..
ಬೇರೆಲ್ಲೂ ಯಾರಿಲ್ಲ ನಿನ್ನಂತೆ ನಗೆಯಲಿ..
ನಿನ್ನೆಲ್ಲ ಮಾತಿಲ್ಲಿ ನೀರಂತೆ ಧಗೆಯಲಿ..
ಹಸಿಯಾದ ಪ್ರಣಯಕ್ಕಿಂದು ಬೇಕೊಂದು ಕಾದಾಟ..
ಮೃದುವಾಗಿ ಅರಳೋ ಹಾಗೆ ಕನಸಿನ ತೋಟ..
ಆಲಾಪದ ಮಾಧುರ್ಯ ತಂದಾಗಿದೆ..
ಮುದ್ದಾಡುವ ಔದಾರ್ಯ ನಿಂದಾಗದೆ.??!! ||2||ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..
ಈ ನೋಟದ ಆಂತರ್ಯ ನಿಂದಾಗಿದೆ
ಹೂಮೇಳದ ಸೌಂದರ್ಯ ಬಂದಾಗಿದೆ..||

Tuesday, March 27, 2012( ಈ ಹಾಡು, "ರಾಜಧಾನಿ" ಚಿತ್ರದ "ಮಿಡಿವ ನಿನ್ನ ಹೃದಯದಲ್ಲಿ, ಕೊಡಲೇ ನಾ ಹಾಜರಿ.." ಎಂಬ ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..)


ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..
ಮಿಡುಕಾಡುತಾ ನನ್ನ ಭಾವಿಸು..
ಬಡಪಾಯಿಯ ಭವ್ಯವಾಗಿಸು..
ಮೆಲ್ಲನೆ.. ಪಸರಿಸು ಬಾ ಇನ್ನು...||ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..ಹೇಳಲೇನೋ ನಾನು ತಡವರಿಸಿದೆ ಒಲವಿನ ಮಳೆಯಾಗಲು..
ರೋಮರೋಮದಲೂ ಬೆರಗಿನ ಕಣ, ಮನ ಹೊಸತಳಿಯಾಗಲು..
ವಿಪರೀತದಿ ಧ್ಯಾನಾಸಕ್ತ, ಸದಾ ಸದಾ ನಿನ್ನದೇ..
ವಶವೀಗಲೇ ನಿನ್ನ ಮೋಹ, ಪದೇ ಪದೇ ತಾಳದೆ..
ಕನಸೊಂದನು ಕಣ್ಣಿಗೇರಿಸು..
ಎದೆಬಾನಲಿ ಬಣ್ಣ ಪೇರಿಸು..
ಮೆಲ್ಲನೆ.. ಪಸರಿಸು ಬಾ ಇನ್ನು..||ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..ಒಮ್ಮೆ ಹೀಗೆ ಬಂದು ಅಡಗಿರು ನೀನು ಹೃದಯದ ಕಡಲಲ್ಲಿಯೇ..
ನೂರು ನೂರು ಸಾಲು ಬರೆದರೂ ನಿನ್ನ ಸರಿಸಮವಿಹುದೇ ಪ್ರಿಯೆ..
ಮರುಜನ್ಮವ ತಾಳಿ ಬರುವೆ, ಇದೆ ಸವಿಧಾಟಿಗೆ..
ನೆನಪಲ್ಲಿಯೇ ಹೂವಾಗಿರಲು, ಸಿಹಿ ಕಳೆ ತೋಟಕೆ,,
ಅನುಗಾಲವೂ ಸೆರೆಗೆ ನೂಕಿಸು..
ಅನುರಾಗದ ತೆರೆಯ ಸೋಕಿಸು..
ಮೆಲ್ಲನೆ.. ಪಸರಿಸು ಬಾ ಇನ್ನು...||ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..


ಮಿಡುಕಾಡುತಾ ನನ್ನ ಭಾವಿಸು..
ಬಡಪಾಯಿಯ ಭವ್ಯವಾಗಿಸು..
ಮೆಲ್ಲನೆ.. ಪಸರಿಸು ಬಾ ಇನ್ನು...||

Friday, March 16, 2012

ಸಂಪಿಗೆಯ ಕಂಪುಆಕೆ ಮುಡಿದಿದ್ದ 
ಸಂಪಿಗೆಯ ಕಂಪೊಂದು
ಉಳಿದುಕೊಂಡಿದೆ ಹಾಗೆಯೇ..
ಚಣಚಣವೂ ಅನುರಣಿಸಿ
ಹುಡುಕಿ ಕೆದಕುತ ಮನದಿ
ಮರುಗಿದ ಮೌನವನು ಹೀಗೆಯೇ..!!


ನನ್ನ ವಿರಹದ ಉರಿಯೇ
ಅವಳ ತಂಪುಕೊಳವಿರಲು 
ಬೇಡವೆನ್ನಲಿ ಏಕೆ, ಸೌಖ್ಯಹೇತು..!!
ಒಳಗೆ ಬೆಚ್ಚಗೆ ಇದ್ದ
ಹಕ್ಕಿ ಹಾರಲು ದೂರ
ಹರಸದೆ ಬೇರೇನು ಗೂಡು ಮಾಡೀತು.??!


ಎದುರು ಚೆಲ್ಲಿದೆ ಸಾಲು
ಮಲ್ಲೆಹೂವಿನ ರಾಶಿ
ಅವಳ ಸುಮಸಮಘಮವು ಬಂದೀತೆ ಇಲ್ಲಿ..!?
ನೀರ ಮೇಲಿನ ಬರಹ
ತೆರೆಯೊಳಗೆ ಹುದುಗೀತು.
ನನ್ನ ಕನಸಿನ ಚಿತ್ರ ಕಲ್ಲಿನಲ್ಲಿ..!!!


ಗೋರಿ ಕಟ್ಟಿದರೂನು,
ಪ್ರವಾಸೀ ಸ್ಥಳದಂತೆ 
ನಿತ್ಯ ಯೋಚನೆ ನೂರು ಭೇಟಿಯಿಡುತಿಹವು..
ಬರಿದಾದ ಕಣ್ಣಿನಲೂ
ಹನಿಯ ಧಾರೆಯು ಜಿನುಗಿ
ಮನದ ತಾಪಕೆ ಶೀಘ್ರ ಆವಿಯಾಗಿಹವು..!! ಆಕೆ ಮುಡಿದಿದ್ದ 
ಸಂಪಿಗೆಯ ಕಂಪೊಂದು
ಉಳಿದುಕೊಂಡಿದೆ ಹಾಗೆಯೇ..
ಚಣಚಣವೂ ಅನುರಣಿಸಿ
ಹುಡುಕಿ ಕೆದಕುತ ಮನದಿ
ಮರುಗಿದ ಮೌನವನು ಹೀಗೆಯೇ..!!


Tuesday, March 6, 2012

ಹೃದಯವಾಣಿ

ಎನ್ನೊಡಲ ಪರಿವಿಡಿಯ ಸೂಚಕವೇ ನಿನ್ನುಸಿರು
ಎದೆಯ ರಂಗಿನ ಪುಟದಿ ರತ್ನರೂಪ..
ನೆನಪ ದಿನಗೂಲಿಯಲಿ, ಕನಸಿನಿಟ್ಟಿಗೆಯಿಂದ
ನಿರ್ಮಿಸಲು ಬಾ ಬೇಗ ಪ್ರೇಮದ್ವೀಪ...||


ಇರುವ ಸ್ಥಿತಿಯಲೇ ಎಲ್ಲೋ ಮೆರೆವಂತೆ ಮೋಹಿಸುವ 
ಹೂಪರಾಗದ ಸೊಬಗಿಗೆ ಪರಾಕು..
ನನ್ನ ಓಲೆಯ ವಸಂತವ ಪರಾಂಬರಿಸುತಲಿ
ಮೌನಿಸದೆ ಒಲವ ಸಿಂಗರಿಸು ಸಾಕು..||


ಹೃದಯ ಮಿಡಿಯುವ ಧ್ವನಿಯು, ಜೀವತಾಳುತಲಿಂದು
ದಿಗ್ಭ್ರಮೆಯ ಸಂಭ್ರಮವೇ ವ್ಯಾಪಿಸಿಹುದು..
ನಿನ್ನ ಪಾದದ ರೇಖೆ ಕಣಕಣದಿ ಒಡಮೂಡಿ
ಬಾಳ ಹೊಸ ಸಂಚಿಕೆಯು ಛಾಪಿಸಿಹುದು..!||


Wednesday, February 29, 2012


( "ಲಕ್ಕಿ" ಚಿತ್ರದ "ಹೂವಿನ ಸಂತೆಗೆ ಬಂದಿರೋ ಗಾಳಿಗೆ.." ಹಾಡಿನ ರಾಗಕ್ಕೆ ಹೊಸ ಸಾಲುಗಳು..) 


ಸಾವಿರ ಕಂಗಳ ಮಾಯದ ಹಕ್ಕಿಗೆ, ಮೀರಿದ ಹೋಲಿಕೆ.. ಮೋಹದ ಕನ್ನಿಕೆ...
ಸುಂದರ ಭಾವದ ನೂತನ ದಾರಿಗೆ, ಮೂಡಿದ ವರ್ಣಕೆ.. ಪ್ರೇಮದ ವೇದಿಕೆ..||


ಕನಸು ತೆರೆದ ಶರಧಿಯಲ್ಲಿ, ಉದಿಸಿ ನಿಂದ ಹವಳ ಈಕೆ..
ಎದೆಯ ಸೋಕಿ ಮಧುರಗೊಳಿಪ, ಮೃದುಲವಾದ ಕುಸುಮ ರೇಖೆ..
ಆಳದ ತಾಳಕೆ ನೀನೇ ರಾಗಮಾಲಿಕೆ..!!


ಹಗಲು ಇರುಳು ಹಿಡಿದು ಬೆರಳು, ಕಥೆಯ ನೂರು  ಬರೆಯಬೇಕೇ.?! 
ಮುಗಿಲ ಮೇಲೂ ಹೊಳೆವ ತೇರು, ನಿಂದೇ ಹೆಸರ ಇಡುವೆ ಸಾಕೇ.?!
ನೋಟದ ನಾಟ್ಯಕೆ ನೀನೇ ರಂಗಭೂಮಿಕೆ..!!!


ಸಾವಿರ ಕಂಗಳ ಮಾಯದ ಹಕ್ಕಿಗೆ, ಮೀರಿದ ಹೋಲಿಕೆ.. ಮೋಹದ ಕನ್ನಿಕೆ...
ಸುಂದರ ಭಾವದ ನೂತನ ದಾರಿಗೆ, ಮೂಡಿದ ವರ್ಣಕೆ.. ಪ್ರೇಮದ ವೇದಿಕೆ..||

Saturday, February 25, 2012

ಸಾರ್ಥಕ್ಯ

ಗಿರಿಯ ಮಡಿಲಲಿ ಹರಿವ
ಝರಿಯಾಗುವ ಬಯಕೆ..
ಕರುಣಿಸೀಗಲೇ ವಿಧಿಯೇ
ಹರಸೆನ್ನ ಮನಕೆ..!!


ಬಳಲಿದ್ದ ತರುಮೃಗಾ-
ವಳಿಗೆ ತಂಪೆರೆದು ಒಡ-
ಲೊಳಗಿನ ಜೀವತತಿಗಮೃತಗರೆದು..
ಸೆಳೆದು ಸಹಗಾಮಿಗಳ 
ಬೆಳೆದು ಒಂದಾಗಿ ಮಹ-
ಹೊಳೆಯ ಸೇರ್ಪೆನು ಉತ್ತಮತೆಯನ್ನು ಪಡೆದು...||


ಮೇದಿನಿಯ ಮೇಲೆಲ್ಲ
ಹಾದಿ ದುರ್ಗಮವಿರಲಿ 
ಭೇದಿಸುತ ಅಡೆತಡೆಯ ಮುನ್ನಡೆವೆ ಹೀಗೆ..
ಖೇದ ತಾಳದೆ ಇನಿತು
ಮೋದವೀಯುತ ಜಗಕೆ 
ಸಾಧನೆಯ ಪಯಣದೀ ಸಾರ್ಥಕತೆ ಸಾಕೆನಗೆ..||Sunday, February 19, 2012

ಮಳೆಯ ರಾತ್ರಿ....

( "ಜಿಂದಗೀ ಭರ್ ನಹೀ ಭೂಲೇಗಿ ಓ ಬರಸಾತ್ ಕಿ ರಾತ್" ಅಂತ ಒಂದು ಹಿಂದಿ ಹಿಟ್ ಹಾಡನ್ನು ನೀವೆಲ್ಲ ಕೇಳಿರ್ತೀರಿ..
ಅದನ್ನ ಯಥಾವತ್ತಾಗಿ ಅನುವಾದಿಸಿದ ಯತ್ನವಿದು..)


ಮರೆಯಲಾರೆನು ನಾ ಬದುಕಿಡೀ ಆ ಮಳೆಯ ರಾತ್ರಿಯನು..
ಅಪರಿಚಿತದೊಂದು ತರುಣಿಯೊಂದಿಗೆ ಸಿಹಿ ಭೇಟಿಯನು..||


ಮರೆಯಲಾರೆನು ನಾ ಬದುಕಿಡೀ....


ಹಾ..ಆ ರೇಶಿಮೆ ಮುಂಗುರುಳಿಂ ಜಿನುಗಿದ ಹನಿಯು..
ಹೂ ತೊರೆದು ಕೆನ್ನೆಯ ಚುಂಬಿಸಲು, ತವಕಿಸಿದ ಹನಿಯು..
ಮನದಿ ಸವಿಭಾವದ ಬಿರುಗಾಳಿ.. ಬೀಸಿದ ರಾತ್ರಿಯನು..||೧||


ಮರೆಯಲಾರೆನು ನಾ ಬದುಕಿಡೀ ..


ಒಮ್ಮೆಲೇ ಜಿಗಿದ ಸಿಡಿಲರವಕೆ ಕಂಪಿಸುತಲಿ ಅವಳು..
ನಾಚುತಾ ಧಾರೆಯಾಗಲು ಮತ್ತೆ, ಹೊಸತು ರೂಪಗಳು..
ಎಂದೂ ದರ್ಶಿಸದ ಶ್ರಾವಿಸದ.. ರೋಚಕ ರಾತ್ರಿಯನು..||೨||


ಮರೆಯಲಾರೆನು ನಾ ಬದುಕಿಡೀ.. 


ಸೆರಗಿನಂಚಿಂದಲಿ ಮುಂಬರುವ ಪುಳಕದ ಮಾಲೆ..
ಎದೆಗೆ ಸುಡುಬಾಣವ ಹೂಡಿರಲು ಬೆಳಕಿನ ಬಾಲೆ..
ಸುರಿವ ನೀರಲ್ಲಿಯೂ ಕಿಡಿಯೊಂದು..ಸೋಕಿದ ರಾತ್ರಿಯನು..||೩||


ಮರೆಯಲಾರೆನು ನಾ ಬದುಕಿಡೀ..


ಕಣ್ಣಪೆಟ್ಟಿಗೆಯ ಒಳಗೆ ಕಂಡ ಚಿತ್ರಪಟದ ರೇಖೆ..
ಯೌವನದ ಈ ಸ್ವಪ್ನಕೋಟೆಯನು ತೆರೆದ ಚಾವಿ ಆಕೆ..
ಆಗಸದಿ ನೇರ ಧರೆಗಿಳಿದಂಥ.. ಮಾಯದ ರಾತ್ರಿಯನು..||೪||


ಮರೆಯಲಾರೆನು ನಾ ಬದುಕಿಡೀ ಆ ಮಳೆಯ ರಾತ್ರಿಯನು....

Sunday, February 12, 2012

                           ( "ಶಾರ್ದೂಲವಿಕ್ರೀಡಿತ" ವೃತ್ತದಲ್ಲಿ ವಿರಚಿತವಾದ..)

                                                    ಶಿವಸ್ತುತಿ


                      

                    ಶ್ರೀಹೈಮಾತ್ಮಜಳಾಮನಪ್ರಣಯಪುಷ್ಪಾಂತರ್ಯಮಾಧುರ್ಯತಾ 
                ಗ್ರಾಹಿಭ್ರಾಮರವೃತ್ತಿಮಾನಸವಿಭೋ ಕೈಲಾಸಲೋಕೇಶ್ವರ..|
                ಮೋಹಾಕಾರ ವಿಪಾಟನೋತ್ಕಟಪಟೋ ಭಸ್ಮಾತಿಲಿಪ್ತಾಂಗನೇ
                ಹಾಹಾಕಾರವಿರಾಜಭೂತಗಣದಾ ನೇತಾರನೇ ವಂದಿಪೆ.||೧||

                ರುಂಡಸ್ತೋಮವ ಪೋಣಿಸಿರ್ಪ ವಿಲಸನ್ಮಾಲಾದಿ ಸನ್ಮಂಡಿತಮ್
                ತುಂಡಶ್ರೀಜಿತಭಾಸ್ಕರಾಭ ಧರಿಪಂ ಗಂಗಾಜಲಂ ಮಂಡೆಯೋಳ್.|
                ಗಾಂಡೀವಾಶ್ರಯಗಸ್ತ್ರದಾಯಕ ಮಹತ್ ಗಂಡಾಂತರಾಖಂಡನಮ್
                ಚಂಡಾಗ್ನಿಸ್ಥಿತನೇತ್ರನಂ ಭಜಿಸುವೆ ತ್ರೈಶೂಲದಂಡಾಯುಧಂ..||೨||

                ನಾಕಾಧೀಶರು ದೈತ್ಯರೆಲ್ಲ ಭರದಿಂ ಕ್ಷೀರಾಂಬುಧಿಸ್ಥಾಮೃತಂ
                ಬೇಕೆಂದು ಶ್ರಮದಿಂದ ಪರ್ವತವರಂ ಸರ್ಪೇಶನಿಂ ಬಂಧಿಸಿ.|
                ನೂಕಾಡಲ್ ಹೊರಹೊಮ್ಮಿದಾ ಗರಳವಂ ಲೋಕಾವನಕ್ಕಾಗಿಯೇ 
                ಸ್ವೀಕಾರಂ ಕೃತನಂ ನಮಸ್ಕರಿಪೆ ನಾ ಶ್ರೀನೀಲಕಂಠೇಶ್ವರಂ..||೩||

                ಈಶಾನತ್ರಿಪುರಾರಿನಂದಿಚಲನೇ ಸೋಮಾಂಕಭೂಷಾಜಟಾ
                ಪ್ತಾಶಾಮಂಡಲನೇ ಕಪಾಲಧರನೇ ನಾಗೋತ್ತಮಾಲಂಕೃತ.|
                ಶ್ರೀಶೈಲಾದಿದಶಾಧಿಕದ್ವಿಪುರದಿ ಜ್ಯೋತಿರ್ಮಯೋತ್ತುಂಗನೇ
                ಕ್ಲೇಶಾಘಂ ಪರಿಹಾರಿಸೋ ವಿಜಯವಂ ತಂದೈದಿಸೋ ಶೀಘ್ರದಿ..||೪|| 

Thursday, February 2, 2012

ಮೊದಲನೆ ಬಾರಿಯೇ...

( "ಪರಮಾತ್ಮ" ಚಿತ್ರದ, "ಪರವಶನಾದೆನು.. ಅರಿಯುವ ಮುನ್ನವೇ.." ಎಂಬ ಹಾಡಿನ ರಾಗದಲ್ಲಿ ಬರೆದ ನವೀನ ಭಾವ..)


ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ..
ತಲ್ಲೀನನಾಗಿ ತೆರಳಿ..ಸಲ್ಲಾಪವೊಂದು ಅರಳಿ..
ಕೈಹಿಡಿಯುತಾ ಕಣ್ಣಂಚಿನ ಈ ಮಾದರಿ... ಬರೆಯುವೆ ಶಾಯರಿ...||ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ..


ಭಾರಿ ಪುಣ್ಯವಂತ ನಾನು, ನಿನ್ನ ಮುಂದೆ ಸೋತರೂ..
ಹಾರಿದಂತೆ ಭಾಸವಿನ್ನು.. ಸುಮ್ಮನೆಲ್ಲಿ ಕೂತರೂ..
ಈ.. ಪ್ರಣಯದ ಬಾನಲಿ..ನವ್ಯಕುಸುಮದ ವೃಷ್ಟಿ ಯೋಗ..
ಎಲ್ಲಾ ನಿನ್ನಂದದಲ್ಲೇ..ಬಚ್ಚಿಕೊಂಡಿದೆ ದೃಷ್ಟಿಯು ಬೇಗ..
ಸವಿಯಾದ ರಶ್ಮಿ ಕರಗಿ.. ಪರಿಪಾಕಗೊಂಡು ಮಿರುಗಿ..
ಮನದಾಳದ ಬೋಕ್ಕಸದಲಿ ತುಂಬಿಹ ಸಿರಿ.. ನಗುವಿನ ವೈಖರಿ..||೧||ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ..ಜಪಿಸುತ ಸಂತನಾಗಿರುವೆನು, ನಿನ್ನಯ ಕಾಂತಿಯ..
ಕೃಪೆಯನು ಮಾಡಿ ಹಿಂತಿರುಗಿಸು.. ಮನಸಿನ ಶಾಂತಿಯ..
ತೇಲಿ ರಿಂಗಣ ಮತ್ತೊಮ್ಮೆ ಪ್ರೀತಿ ಹಾಡು..
ಉಡುಗೊರೆ ನೀನೇ ಹೀಗೆ..ಕೈಯಾರೆ ನೀಡು..
ನೀನಿರದ ಘಳಿಗೆ ನರಳಿ.. ಜೊತೆಯಾಗೆ ಖುಷಿಯು ಮರಳಿ..
ಹೊಂಗನಸಲೂ ಮಾತಾಡು ಬಾ ಕುಶಲೋಪರಿ.. ನುಡಿಸುತ ಕಿನ್ನರಿ...||೨||ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ......


Friday, January 27, 2012

( "ಗಾಳಿಪಟ" ಚಿತ್ರದ, "ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ.." ಎಂಬ ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..) 

ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು
ದಾಹದ ಕರೆಗೆ ಬಂದು ಒಲಿದ ಸುಧೆಯ ಹನಿ ನೀನು
ನೀನಿರದೆ ಇರದು ಬೇರೇನೂ...||


ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು....ನೀ ಜೀವನೌಕೆಗೆ ಕಡಲದೀಪವು..
ನಿನ್ನ ಪ್ರೀತಿಬೆಳಕಲೇ ನನ್ನೀ ಯಾನವು..
ಈ ಕ್ಷಣದಿ ಮೂಡಿದೆ ಪ್ರಣಯಚಿತ್ರವು..
ನಿನ್ನ ನೆನಪು ಸೋಕಲು, ನೂರು ವರ್ಣವು..
ಕನಸಿನ ರೂಪಸಿ....ಕಾಡದೆ ಕಾಯಿಸಿ.....
ಸಹಿಯ ನೀಡು, ಮನಕೆ ಬರಲು, ನಗೆಯ ಹಾಸಿ.....||1||ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು...ನಿನ್ನ ಹೃದಯ ಮಿಡಿದು ಉಲಿವ ಪ್ರೀತಿಪಿಸುಮಾತು ಮುರಳಿ..
ನನ್ನ ಕಡೆಗೆ ಬೀಸಿಬಂತು, ಒಲವಿನ ಹಸಿಕಂಪು ಅರಳಿ..
ಕದಲಿಸಿ ಕಣ್ಣನೆ......ಕದಡಿದೆ ಭಾವನೆ.......
ಬಿಗಿದು ತಬ್ಬಿ, ಬಿಡದೆ ನನ್ನ ರಮಿಸು ನೀನೇ.....||೨||ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು
ದಾಹದ ಕರೆಗೆ ಬಂದು ಒಲಿದ ಸುಧೆಯ ಹನಿ ನೀನು
ನೀನಿರದೆ ಇರದು ಬೇರೇನೂ...||

Tuesday, January 24, 2012

        ಧನ್ಯತೆ 

ನಿನ್ನ ಮೊಗಮಲ್ಲಿಗೆಯ, ದಳದ ಬಿಂದುವಿನಲ್ಲಿ
ಎನ್ನ ನಗೆ ಕಾಣಿಸಲು ಧನ್ಯನಾದೆ..
ಬಾಳಿನಾಟದಿ ನಿತ್ಯ, ಅರಸಿ ನಿನ್ನಯ ಪ್ರೀತಿ
ಪಾರಿತೋಷಕ ಸಿಗಲು ಮಾನ್ಯನಾದೆ..!

ಬಾಚುತಲಿ ತೋಳಿನ ವೀಚಿಯೊಳು ಹೃನ್ಮನವು
ನಲಿವಂತೆ ಮಂಜಿನ ನಲ್ಮೆ ಉಷೆಗೆ..
ಲಹರಿಗಳ ಹಾಳೆಯಲಿ, ಸ್ವಪ್ನಗಳ ಗೀಚಿಡುವೆ
ವ್ಯಾಖ್ಯಾನ ಬರೆದಿರಿಸು ನನ್ನ ವಶಕೆ..!

ಭವಿತವ್ಯ ಬಾಂದಳದಿ ಧ್ರುವದಂತೆ ಸ್ಫುಟವಾಗಿ
ನಯನದೊಳಿರೆ ಗಮ್ಯ ಪಯಣ ನಿರುತ
ಸುಕ್ಕುಗಟ್ಟದೇ ಕ್ರಮದಿ, ಯೌವನದ ಹಾದಿಯಲೇ
ಸ್ಫುರಿಸಿರಲಿ ಈ ನಮ್ಮ ಪ್ರಣಯಸ್ರೋತ..!

Sunday, January 22, 2012

(ಈ ಹಾಡು, "ಹಾಗೆ ಸುಮ್ಮನೆ" ಚಿತ್ರದ, "ಓಡಿ ಬಂದೆನು ನಿನ್ನ ನೋಡಲು.." ಎಂಬ ಹಾಡಿನ ಧಾಟಿಯಲ್ಲಿ ಬರೆದ ನೂತನ ಸಾಹಿತ್ಯ..)

ದೂರ ಹೋದೆ ನೀ, ಕೊಡದೆ ಕಾರಣ..
ದಾರಿ ಕಾಣದಂತೆ, ಪ್ರಣಯದಂಗಣ..
ಸುತ್ತ ಸುಪ್ತನೀರಲಿ ಒಂಟಿ ನಾವಿಕ... ಈಗ ಭಾವುಕ.....
ನಿನ್ನ ನೋಡದೇ, ಅಂಧ ಈ ಮನ..
ಇನ್ನು ಗುಂಗಿನಲ್ಲೇ, ನನ್ನ ಬಂಧನ..
ಮತ್ತೆ ತೀರದಂಚನು ಕಾದ ನಾವಿಕ... ಈಗ ಭಾವುಕ.....||ಪ||


ಎದೆಯಲ್ಲಿ ಪ್ರೀತಿಶಶಿಯು, ಹೊರತಂದ ಚಂದ್ರಿಕೆ
ಅರಳಿಸದಲೇ, ಈ ನೈದಿಲೆ, ಲೀನಿಸಿತು ಏತಕೆ..?!!
ಹೊಸದೊಂದು ರೀತಿಖುಷಿಯು, ಚಿಗುರೊಡೆವ ವೇಳೆಗೆ
ಒಲವುಣಿಸದೆ ನೀ ಹೋಗಲು ಬಾಡಿಹುದು ಮೆಲ್ಲಗೆ..||೧||


ನಿನ್ನ ನೋಡದೇ, ಅಂಧ ಈ ಮನ..
ಇನ್ನು ಗುಂಗಿನಲ್ಲೇ, ನನ್ನ ಬಂಧನ..
ಮತ್ತೆ ತೀರದಂಚನು ಕಾದ ನಾವಿಕ... ಈಗ ಭಾವುಕ....

ಹಂಬಲಿಸಿ ನಿಂತೆ, ಮುಗಿಲ ಮಳೆಹನಿಯ ಸಾಲನು
ಮರೆಯಾಗಿಹೆ ಪಿಸುಗುಡದಲೇ, ಒಂದಿನಿತು ಮಾತನು..
ಕಂಬನಿಯ ಧಾರೆ ತುಳುಕಿ, ನರಳುತಿರೆ ಜೀವವು,
ಒಡಮೂಡಿದ ಕನಸೆಲ್ಲವೂ, ಒಣಗಿ ಚೂರಾದವು..||೨||


ದೂರ ಹೋದೆ ನೀ, ಕೊಡದೆ ಕಾರಣ..
ದಾರಿ ಕಾಣದಂತೆ, ಪ್ರಣಯದಂಗಣ..
ಸುತ್ತ ಸುಪ್ತನೀರಲಿ ಒಂಟಿ ನಾವಿಕ... ಈಗ ಭಾವುಕ.....

Saturday, January 21, 2012

ಓಲೈಕೆಏಕೆ ಸಖಿ ನಿನ್ನ, ಮುಖದಿ ಇಂಥ ರಂಗು..?!
ಕಡುಸಿಡುಕಿನ ಸೂರ್ಯ, ಕುಣಿದಿಹನೆ ಹಾಂಗೂ..!!

ಸುಮಬಾಣವ ಅರೆನೋಟದಿ ಸರಿನೇರ ಹೂಡಿ ನೀನು..
ಕೆನೆಹಾಲಿನ ಆಂತರ್ಯವ ಮಳೆಗರೆಯುತಿದ್ದ ಕಣ್ಣು..
ಏಕೋ ಕಾಣೆ, ಬೀಸುತಿಹುದು ಮುನಿಸಿ ಉಲ್ಕೆಯನ್ನು..!!

ಕರೆದೊಯ್ಯಲೇ ಹೂದೇರಲಿ ವೈಭವದ ವನವಿಹಾರ..
ಸಿಂಗರಿಸುತಾ ಈ ಕೊರಳನು, ಕಂಗೊಳಿಪ ರತ್ನಹಾರ..
ದಾರಿಯೇನು.? ಹೇಳು ಇನ್ನು.; ಹೆಣೆಯೆ ದೂರತೀರ..!!

ಸವಿಪ್ರೀತಿಯ ಸಂಭಾವನೆ ನೀಡಿದರೂ ಉಳಿದ ತಾಪ..
ಒಲೈಕೆಗೂ ಇನ್ನೆಷ್ಟು ನಾ, ಕೊಡಬಹುದು ಓಲೆರೂಪ..
ಹಿಂದಿನಂತೆ ಕ್ಷಮಿಸಿ ಇಂದೂ, ಸರಿಸು ಕೋಪಶಾಪ..!!!!


ಚಿತ್ರಕೃಪೆ-ಅಂತರ್ಜಾಲ 

Thursday, January 19, 2012


( "ಸಂಚಾರಿ" ಚಿತ್ರದ, "ಗಾಳಿಯೇ ನೋಡು ಬಾ ದೀಪದ ನರ್ತನ.." ಎಂಬ ಹಾಡಿನ ಧಾಟಿಗೆ ನೂತನ ಸಾಹಿತ್ಯ..)


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..
ನೀನೀಗ ನಿಂತಲ್ಲೇ ನೂರಾರು ಗಾನ..
ಬಾನಿಂದ ಜಾರುತ್ತ ತಾರೇನು ಮೌನ..
ನವಿರಾಗಿಸು ಚೇತನ..!!!


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..


ಸವಿಗನಸಲ್ಲಿಯ ವಾಹಿನಿಯಲ್ಲಿಯೇ ಬರಿ ನಿನ್ನಂದದ ವಾರ್ತೆಯು..
ಪ್ರತಿಚಣದಲ್ಲಿಯೂ ಕಣ್ಣೆವೆಯಲ್ಲಿಯೂ ಸಿರಿ ಶೃಂಗಾರದ ಮೂರ್ತಿಯು..
......................
ಸೆಳೆತ ಹೆಚ್ಚಾಗಿದೆ.. ಉಳಿಸಿಬಿಡು ನನ್ನ..
ನವಿರಾಗಿಸು ಚೇತನ....||1||


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..


ನಸುನಗೆಯ ಹನಿ, ಇಳಿವಾಗ ಎದೆ ಹಸಿರಾದಂತೆ ಚೆಲುವಾಗಿದೆ..
ಪಿಸುಮಾತಾಡುತ ಜೊತೆಗೂಡಿ ಮನ, ಹೊಸದಾದಂಥ ಒಲವಾಗಿದೆ..
...................
ನೆರಳು ಒಂದಾಗಿದೆ.. ಬೆಳಕು ಹಿಡಿಯೋಣ..
ನವಿರಾಗಿಸು ಚೇತನ... ||2||


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..

Friday, January 6, 2012

                    ಕನವರಿಕೆ 

                    ರಮಿಸು ಕುಳಿತು ಬಳಿಗೆ..
                    ಕುಡಿಯಲ್ಲೇ ಹೊಳೆವ ದೀವಿಗೆ..!!

                    ಮುಂಗುರುಳ ಚಾಮರದಲಿ ತಂಗಾಳಿಯ,
                    ಬೀಸಿರಲು ಚಂದ್ರ ತಂದ ಮಧುಪ್ರೀತಿಯ..
                    ತಾರೆಗಳ ಮೀರಿ ಮುತ್ತು ಮಣಿಮಾಲೆಯ,
                    ಹೆಣೆದಿಡುತಲಿ ಧರಿಸಿದೆ ಸುಹೃದಯ..!!

                     ಕನಸೂರ ರಾಜಕುವರಿ ಈ ಪ್ರೇಯಸಿ..
                     ಕನ್ನಡಿಯೂ ಹಾತೊರೆಯುವ ಅತಿರೂಪಸಿ,
                     ನಲ್ನುಡಿಯ ಹೂವಿನಿಂದ ಕ್ಷಣ ಮೋಹಿಸಿ,
                     ಬಾನಾಡಿ ನೀ ನನ್ನೆದೆ ತೇಲಿಸಿ..!!

                     ಹೊಂಬಿಸಿಲ ಸೌಮ್ಯತನದ ಅನುಭಾವವ
                     ಮೀರಿಸುವ ನಿನ್ನ ಬೆರಳ ಈ ಮಾರ್ದವ..
                     ಸ್ಪರ್ಶಿಸಲು ನೂತ್ನ ಉದಯ, ಋತುವೈಭವ
                     ಕನವರಿಕೆಗೂ ತುಂಬಿಸು ಜೀವವ..!!