Wednesday, February 29, 2012


( "ಲಕ್ಕಿ" ಚಿತ್ರದ "ಹೂವಿನ ಸಂತೆಗೆ ಬಂದಿರೋ ಗಾಳಿಗೆ.." ಹಾಡಿನ ರಾಗಕ್ಕೆ ಹೊಸ ಸಾಲುಗಳು..) 


ಸಾವಿರ ಕಂಗಳ ಮಾಯದ ಹಕ್ಕಿಗೆ, ಮೀರಿದ ಹೋಲಿಕೆ.. ಮೋಹದ ಕನ್ನಿಕೆ...
ಸುಂದರ ಭಾವದ ನೂತನ ದಾರಿಗೆ, ಮೂಡಿದ ವರ್ಣಕೆ.. ಪ್ರೇಮದ ವೇದಿಕೆ..||


ಕನಸು ತೆರೆದ ಶರಧಿಯಲ್ಲಿ, ಉದಿಸಿ ನಿಂದ ಹವಳ ಈಕೆ..
ಎದೆಯ ಸೋಕಿ ಮಧುರಗೊಳಿಪ, ಮೃದುಲವಾದ ಕುಸುಮ ರೇಖೆ..
ಆಳದ ತಾಳಕೆ ನೀನೇ ರಾಗಮಾಲಿಕೆ..!!


ಹಗಲು ಇರುಳು ಹಿಡಿದು ಬೆರಳು, ಕಥೆಯ ನೂರು  ಬರೆಯಬೇಕೇ.?! 
ಮುಗಿಲ ಮೇಲೂ ಹೊಳೆವ ತೇರು, ನಿಂದೇ ಹೆಸರ ಇಡುವೆ ಸಾಕೇ.?!
ನೋಟದ ನಾಟ್ಯಕೆ ನೀನೇ ರಂಗಭೂಮಿಕೆ..!!!


ಸಾವಿರ ಕಂಗಳ ಮಾಯದ ಹಕ್ಕಿಗೆ, ಮೀರಿದ ಹೋಲಿಕೆ.. ಮೋಹದ ಕನ್ನಿಕೆ...
ಸುಂದರ ಭಾವದ ನೂತನ ದಾರಿಗೆ, ಮೂಡಿದ ವರ್ಣಕೆ.. ಪ್ರೇಮದ ವೇದಿಕೆ..||

Saturday, February 25, 2012

ಸಾರ್ಥಕ್ಯ

ಗಿರಿಯ ಮಡಿಲಲಿ ಹರಿವ
ಝರಿಯಾಗುವ ಬಯಕೆ..
ಕರುಣಿಸೀಗಲೇ ವಿಧಿಯೇ
ಹರಸೆನ್ನ ಮನಕೆ..!!


ಬಳಲಿದ್ದ ತರುಮೃಗಾ-
ವಳಿಗೆ ತಂಪೆರೆದು ಒಡ-
ಲೊಳಗಿನ ಜೀವತತಿಗಮೃತಗರೆದು..
ಸೆಳೆದು ಸಹಗಾಮಿಗಳ 
ಬೆಳೆದು ಒಂದಾಗಿ ಮಹ-
ಹೊಳೆಯ ಸೇರ್ಪೆನು ಉತ್ತಮತೆಯನ್ನು ಪಡೆದು...||


ಮೇದಿನಿಯ ಮೇಲೆಲ್ಲ
ಹಾದಿ ದುರ್ಗಮವಿರಲಿ 
ಭೇದಿಸುತ ಅಡೆತಡೆಯ ಮುನ್ನಡೆವೆ ಹೀಗೆ..
ಖೇದ ತಾಳದೆ ಇನಿತು
ಮೋದವೀಯುತ ಜಗಕೆ 
ಸಾಧನೆಯ ಪಯಣದೀ ಸಾರ್ಥಕತೆ ಸಾಕೆನಗೆ..||



Sunday, February 19, 2012

ಮಳೆಯ ರಾತ್ರಿ....

( "ಜಿಂದಗೀ ಭರ್ ನಹೀ ಭೂಲೇಗಿ ಓ ಬರಸಾತ್ ಕಿ ರಾತ್" ಅಂತ ಒಂದು ಹಿಂದಿ ಹಿಟ್ ಹಾಡನ್ನು ನೀವೆಲ್ಲ ಕೇಳಿರ್ತೀರಿ..
ಅದನ್ನ ಯಥಾವತ್ತಾಗಿ ಅನುವಾದಿಸಿದ ಯತ್ನವಿದು..)


ಮರೆಯಲಾರೆನು ನಾ ಬದುಕಿಡೀ ಆ ಮಳೆಯ ರಾತ್ರಿಯನು..
ಅಪರಿಚಿತದೊಂದು ತರುಣಿಯೊಂದಿಗೆ ಸಿಹಿ ಭೇಟಿಯನು..||


ಮರೆಯಲಾರೆನು ನಾ ಬದುಕಿಡೀ....


ಹಾ..ಆ ರೇಶಿಮೆ ಮುಂಗುರುಳಿಂ ಜಿನುಗಿದ ಹನಿಯು..
ಹೂ ತೊರೆದು ಕೆನ್ನೆಯ ಚುಂಬಿಸಲು, ತವಕಿಸಿದ ಹನಿಯು..
ಮನದಿ ಸವಿಭಾವದ ಬಿರುಗಾಳಿ.. ಬೀಸಿದ ರಾತ್ರಿಯನು..||೧||


ಮರೆಯಲಾರೆನು ನಾ ಬದುಕಿಡೀ ..


ಒಮ್ಮೆಲೇ ಜಿಗಿದ ಸಿಡಿಲರವಕೆ ಕಂಪಿಸುತಲಿ ಅವಳು..
ನಾಚುತಾ ಧಾರೆಯಾಗಲು ಮತ್ತೆ, ಹೊಸತು ರೂಪಗಳು..
ಎಂದೂ ದರ್ಶಿಸದ ಶ್ರಾವಿಸದ.. ರೋಚಕ ರಾತ್ರಿಯನು..||೨||


ಮರೆಯಲಾರೆನು ನಾ ಬದುಕಿಡೀ.. 


ಸೆರಗಿನಂಚಿಂದಲಿ ಮುಂಬರುವ ಪುಳಕದ ಮಾಲೆ..
ಎದೆಗೆ ಸುಡುಬಾಣವ ಹೂಡಿರಲು ಬೆಳಕಿನ ಬಾಲೆ..
ಸುರಿವ ನೀರಲ್ಲಿಯೂ ಕಿಡಿಯೊಂದು..ಸೋಕಿದ ರಾತ್ರಿಯನು..||೩||


ಮರೆಯಲಾರೆನು ನಾ ಬದುಕಿಡೀ..


ಕಣ್ಣಪೆಟ್ಟಿಗೆಯ ಒಳಗೆ ಕಂಡ ಚಿತ್ರಪಟದ ರೇಖೆ..
ಯೌವನದ ಈ ಸ್ವಪ್ನಕೋಟೆಯನು ತೆರೆದ ಚಾವಿ ಆಕೆ..
ಆಗಸದಿ ನೇರ ಧರೆಗಿಳಿದಂಥ.. ಮಾಯದ ರಾತ್ರಿಯನು..||೪||


ಮರೆಯಲಾರೆನು ನಾ ಬದುಕಿಡೀ ಆ ಮಳೆಯ ರಾತ್ರಿಯನು....

Sunday, February 12, 2012

                           ( "ಶಾರ್ದೂಲವಿಕ್ರೀಡಿತ" ವೃತ್ತದಲ್ಲಿ ವಿರಚಿತವಾದ..)

                                                    ಶಿವಸ್ತುತಿ


                      

                    ಶ್ರೀಹೈಮಾತ್ಮಜಳಾಮನಪ್ರಣಯಪುಷ್ಪಾಂತರ್ಯಮಾಧುರ್ಯತಾ 
                ಗ್ರಾಹಿಭ್ರಾಮರವೃತ್ತಿಮಾನಸವಿಭೋ ಕೈಲಾಸಲೋಕೇಶ್ವರ..|
                ಮೋಹಾಕಾರ ವಿಪಾಟನೋತ್ಕಟಪಟೋ ಭಸ್ಮಾತಿಲಿಪ್ತಾಂಗನೇ
                ಹಾಹಾಕಾರವಿರಾಜಭೂತಗಣದಾ ನೇತಾರನೇ ವಂದಿಪೆ.||೧||

                ರುಂಡಸ್ತೋಮವ ಪೋಣಿಸಿರ್ಪ ವಿಲಸನ್ಮಾಲಾದಿ ಸನ್ಮಂಡಿತಮ್
                ತುಂಡಶ್ರೀಜಿತಭಾಸ್ಕರಾಭ ಧರಿಪಂ ಗಂಗಾಜಲಂ ಮಂಡೆಯೋಳ್.|
                ಗಾಂಡೀವಾಶ್ರಯಗಸ್ತ್ರದಾಯಕ ಮಹತ್ ಗಂಡಾಂತರಾಖಂಡನಮ್
                ಚಂಡಾಗ್ನಿಸ್ಥಿತನೇತ್ರನಂ ಭಜಿಸುವೆ ತ್ರೈಶೂಲದಂಡಾಯುಧಂ..||೨||

                ನಾಕಾಧೀಶರು ದೈತ್ಯರೆಲ್ಲ ಭರದಿಂ ಕ್ಷೀರಾಂಬುಧಿಸ್ಥಾಮೃತಂ
                ಬೇಕೆಂದು ಶ್ರಮದಿಂದ ಪರ್ವತವರಂ ಸರ್ಪೇಶನಿಂ ಬಂಧಿಸಿ.|
                ನೂಕಾಡಲ್ ಹೊರಹೊಮ್ಮಿದಾ ಗರಳವಂ ಲೋಕಾವನಕ್ಕಾಗಿಯೇ 
                ಸ್ವೀಕಾರಂ ಕೃತನಂ ನಮಸ್ಕರಿಪೆ ನಾ ಶ್ರೀನೀಲಕಂಠೇಶ್ವರಂ..||೩||

                ಈಶಾನತ್ರಿಪುರಾರಿನಂದಿಚಲನೇ ಸೋಮಾಂಕಭೂಷಾಜಟಾ
                ಪ್ತಾಶಾಮಂಡಲನೇ ಕಪಾಲಧರನೇ ನಾಗೋತ್ತಮಾಲಂಕೃತ.|
                ಶ್ರೀಶೈಲಾದಿದಶಾಧಿಕದ್ವಿಪುರದಿ ಜ್ಯೋತಿರ್ಮಯೋತ್ತುಂಗನೇ
                ಕ್ಲೇಶಾಘಂ ಪರಿಹಾರಿಸೋ ವಿಜಯವಂ ತಂದೈದಿಸೋ ಶೀಘ್ರದಿ..||೪|| 

Thursday, February 2, 2012

ಮೊದಲನೆ ಬಾರಿಯೇ...

( "ಪರಮಾತ್ಮ" ಚಿತ್ರದ, "ಪರವಶನಾದೆನು.. ಅರಿಯುವ ಮುನ್ನವೇ.." ಎಂಬ ಹಾಡಿನ ರಾಗದಲ್ಲಿ ಬರೆದ ನವೀನ ಭಾವ..)


ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ..
ತಲ್ಲೀನನಾಗಿ ತೆರಳಿ..ಸಲ್ಲಾಪವೊಂದು ಅರಳಿ..
ಕೈಹಿಡಿಯುತಾ ಕಣ್ಣಂಚಿನ ಈ ಮಾದರಿ... ಬರೆಯುವೆ ಶಾಯರಿ...||



ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ..


ಭಾರಿ ಪುಣ್ಯವಂತ ನಾನು, ನಿನ್ನ ಮುಂದೆ ಸೋತರೂ..
ಹಾರಿದಂತೆ ಭಾಸವಿನ್ನು.. ಸುಮ್ಮನೆಲ್ಲಿ ಕೂತರೂ..
ಈ.. ಪ್ರಣಯದ ಬಾನಲಿ..ನವ್ಯಕುಸುಮದ ವೃಷ್ಟಿ ಯೋಗ..
ಎಲ್ಲಾ ನಿನ್ನಂದದಲ್ಲೇ..ಬಚ್ಚಿಕೊಂಡಿದೆ ದೃಷ್ಟಿಯು ಬೇಗ..
ಸವಿಯಾದ ರಶ್ಮಿ ಕರಗಿ.. ಪರಿಪಾಕಗೊಂಡು ಮಿರುಗಿ..
ಮನದಾಳದ ಬೋಕ್ಕಸದಲಿ ತುಂಬಿಹ ಸಿರಿ.. ನಗುವಿನ ವೈಖರಿ..||೧||



ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ..



ಜಪಿಸುತ ಸಂತನಾಗಿರುವೆನು, ನಿನ್ನಯ ಕಾಂತಿಯ..
ಕೃಪೆಯನು ಮಾಡಿ ಹಿಂತಿರುಗಿಸು.. ಮನಸಿನ ಶಾಂತಿಯ..
ತೇಲಿ ರಿಂಗಣ ಮತ್ತೊಮ್ಮೆ ಪ್ರೀತಿ ಹಾಡು..
ಉಡುಗೊರೆ ನೀನೇ ಹೀಗೆ..ಕೈಯಾರೆ ನೀಡು..
ನೀನಿರದ ಘಳಿಗೆ ನರಳಿ.. ಜೊತೆಯಾಗೆ ಖುಷಿಯು ಮರಳಿ..
ಹೊಂಗನಸಲೂ ಮಾತಾಡು ಬಾ ಕುಶಲೋಪರಿ.. ನುಡಿಸುತ ಕಿನ್ನರಿ...||೨||



ಮೊದಲನೆ ಬಾರಿಯೇ, ಸೆಳೆದಿಹ ಭಾಸುರಿ
ಹೃದಯದ ಬೇಗೆಯ ಮರೆಸಿ..ಒಲವನು ಬಾ ಸುರಿ......