Tuesday, March 27, 2012



( ಈ ಹಾಡು, "ರಾಜಧಾನಿ" ಚಿತ್ರದ "ಮಿಡಿವ ನಿನ್ನ ಹೃದಯದಲ್ಲಿ, ಕೊಡಲೇ ನಾ ಹಾಜರಿ.." ಎಂಬ ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..)


ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..
ಮಿಡುಕಾಡುತಾ ನನ್ನ ಭಾವಿಸು..
ಬಡಪಾಯಿಯ ಭವ್ಯವಾಗಿಸು..
ಮೆಲ್ಲನೆ.. ಪಸರಿಸು ಬಾ ಇನ್ನು...||



ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..



ಹೇಳಲೇನೋ ನಾನು ತಡವರಿಸಿದೆ ಒಲವಿನ ಮಳೆಯಾಗಲು..
ರೋಮರೋಮದಲೂ ಬೆರಗಿನ ಕಣ, ಮನ ಹೊಸತಳಿಯಾಗಲು..
ವಿಪರೀತದಿ ಧ್ಯಾನಾಸಕ್ತ, ಸದಾ ಸದಾ ನಿನ್ನದೇ..
ವಶವೀಗಲೇ ನಿನ್ನ ಮೋಹ, ಪದೇ ಪದೇ ತಾಳದೆ..
ಕನಸೊಂದನು ಕಣ್ಣಿಗೇರಿಸು..
ಎದೆಬಾನಲಿ ಬಣ್ಣ ಪೇರಿಸು..
ಮೆಲ್ಲನೆ.. ಪಸರಿಸು ಬಾ ಇನ್ನು..||



ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..



ಒಮ್ಮೆ ಹೀಗೆ ಬಂದು ಅಡಗಿರು ನೀನು ಹೃದಯದ ಕಡಲಲ್ಲಿಯೇ..
ನೂರು ನೂರು ಸಾಲು ಬರೆದರೂ ನಿನ್ನ ಸರಿಸಮವಿಹುದೇ ಪ್ರಿಯೆ..
ಮರುಜನ್ಮವ ತಾಳಿ ಬರುವೆ, ಇದೆ ಸವಿಧಾಟಿಗೆ..
ನೆನಪಲ್ಲಿಯೇ ಹೂವಾಗಿರಲು, ಸಿಹಿ ಕಳೆ ತೋಟಕೆ,,
ಅನುಗಾಲವೂ ಸೆರೆಗೆ ನೂಕಿಸು..
ಅನುರಾಗದ ತೆರೆಯ ಸೋಕಿಸು..
ಮೆಲ್ಲನೆ.. ಪಸರಿಸು ಬಾ ಇನ್ನು...||



ಬರೆವೆ ನನ್ನ ನೋಟವನ್ನು ಮನದಲೇ ಹೊಂದಿಸು..
ಕರೆವೆ ಸಣ್ಣ ಭೇಟಿಗಿನ್ನು, ಸನಿಹದಿ ಬಂಧಿಸು..


ಮಿಡುಕಾಡುತಾ ನನ್ನ ಭಾವಿಸು..
ಬಡಪಾಯಿಯ ಭವ್ಯವಾಗಿಸು..
ಮೆಲ್ಲನೆ.. ಪಸರಿಸು ಬಾ ಇನ್ನು...||

Friday, March 16, 2012

ಸಂಪಿಗೆಯ ಕಂಪು















ಆಕೆ ಮುಡಿದಿದ್ದ 
ಸಂಪಿಗೆಯ ಕಂಪೊಂದು
ಉಳಿದುಕೊಂಡಿದೆ ಹಾಗೆಯೇ..
ಚಣಚಣವೂ ಅನುರಣಿಸಿ
ಹುಡುಕಿ ಕೆದಕುತ ಮನದಿ
ಮರುಗಿದ ಮೌನವನು ಹೀಗೆಯೇ..!!


ನನ್ನ ವಿರಹದ ಉರಿಯೇ
ಅವಳ ತಂಪುಕೊಳವಿರಲು 
ಬೇಡವೆನ್ನಲಿ ಏಕೆ, ಸೌಖ್ಯಹೇತು..!!
ಒಳಗೆ ಬೆಚ್ಚಗೆ ಇದ್ದ
ಹಕ್ಕಿ ಹಾರಲು ದೂರ
ಹರಸದೆ ಬೇರೇನು ಗೂಡು ಮಾಡೀತು.??!


ಎದುರು ಚೆಲ್ಲಿದೆ ಸಾಲು
ಮಲ್ಲೆಹೂವಿನ ರಾಶಿ
ಅವಳ ಸುಮಸಮಘಮವು ಬಂದೀತೆ ಇಲ್ಲಿ..!?
ನೀರ ಮೇಲಿನ ಬರಹ
ತೆರೆಯೊಳಗೆ ಹುದುಗೀತು.
ನನ್ನ ಕನಸಿನ ಚಿತ್ರ ಕಲ್ಲಿನಲ್ಲಿ..!!!


ಗೋರಿ ಕಟ್ಟಿದರೂನು,
ಪ್ರವಾಸೀ ಸ್ಥಳದಂತೆ 
ನಿತ್ಯ ಯೋಚನೆ ನೂರು ಭೇಟಿಯಿಡುತಿಹವು..
ಬರಿದಾದ ಕಣ್ಣಿನಲೂ
ಹನಿಯ ಧಾರೆಯು ಜಿನುಗಿ
ಮನದ ತಾಪಕೆ ಶೀಘ್ರ ಆವಿಯಾಗಿಹವು..!! 



ಆಕೆ ಮುಡಿದಿದ್ದ 
ಸಂಪಿಗೆಯ ಕಂಪೊಂದು
ಉಳಿದುಕೊಂಡಿದೆ ಹಾಗೆಯೇ..
ಚಣಚಣವೂ ಅನುರಣಿಸಿ
ಹುಡುಕಿ ಕೆದಕುತ ಮನದಿ
ಮರುಗಿದ ಮೌನವನು ಹೀಗೆಯೇ..!!


Tuesday, March 6, 2012

ಹೃದಯವಾಣಿ

ಎನ್ನೊಡಲ ಪರಿವಿಡಿಯ ಸೂಚಕವೇ ನಿನ್ನುಸಿರು
ಎದೆಯ ರಂಗಿನ ಪುಟದಿ ರತ್ನರೂಪ..
ನೆನಪ ದಿನಗೂಲಿಯಲಿ, ಕನಸಿನಿಟ್ಟಿಗೆಯಿಂದ
ನಿರ್ಮಿಸಲು ಬಾ ಬೇಗ ಪ್ರೇಮದ್ವೀಪ...||


ಇರುವ ಸ್ಥಿತಿಯಲೇ ಎಲ್ಲೋ ಮೆರೆವಂತೆ ಮೋಹಿಸುವ 
ಹೂಪರಾಗದ ಸೊಬಗಿಗೆ ಪರಾಕು..
ನನ್ನ ಓಲೆಯ ವಸಂತವ ಪರಾಂಬರಿಸುತಲಿ
ಮೌನಿಸದೆ ಒಲವ ಸಿಂಗರಿಸು ಸಾಕು..||


ಹೃದಯ ಮಿಡಿಯುವ ಧ್ವನಿಯು, ಜೀವತಾಳುತಲಿಂದು
ದಿಗ್ಭ್ರಮೆಯ ಸಂಭ್ರಮವೇ ವ್ಯಾಪಿಸಿಹುದು..
ನಿನ್ನ ಪಾದದ ರೇಖೆ ಕಣಕಣದಿ ಒಡಮೂಡಿ
ಬಾಳ ಹೊಸ ಸಂಚಿಕೆಯು ಛಾಪಿಸಿಹುದು..!||