Sunday, June 24, 2012

ಕೆರೆಯ ತೀರ..!!


[ ಕೆಲ ದಿನಗಳ ಹಿಂದೆ, ಸ್ನೇಹಿತರೆಲ್ಲ ಸೇರಿ ವಿಹಾರಕ್ಕೆಂದು ಹತ್ತಿರದ ಕೆರೆಗೆ ಹೋಗಿದ್ದೆವು..
ಅಲ್ಲಿನ ಆ ಆಹ್ಲಾದಕರ ವಾತಾವರಣದಲ್ಲಿ, ಗೆಳೆಯರೆಲ್ಲ ಕವನವೊಂದನ್ನು ಬರೆಯಲು ಹೇಳಿದಾಗ, ಬರೆದ ಕವನವಿದು..]


               


ನೀರತೆರೆಗಳ ಧ್ವಾನದಲ್ಲಿಯೂ, ನಿನ್ನ ಹೆಸರಿನ ಇಂಪಿದೆ..
ತಂಪು ವಾಯುವಿನೋಕುಳಿಯಲು, ಮೌನದುಸಿರಿನ ಕಂಪಿದೆ..||


ಸಾಲುಮರಗಳ ಎಲೆಯ ಮರೆಯಲಿ, ಮಂದಹಾಸದ ಹೂವಿದೆ..
ಕೆರೆಯ ತೀರದ ಶೀತಲತೆಯಲೂ, ನಿನ್ನ ನೆನಪಿನ ಕಾವಿದೆ..||


ಬಾನಿನಲಿ ಚಿತ್ತಾರ ಮೂಡಿಸಿ, ಹೊರಟ ಹಕ್ಕಿಯ ವೃಂದದಿ..
ಮೊಗದ ರೇಖಾಚಿತ್ರ ಕಂಡೆನು, ಸಂಜೆಗೆಂಪಿನ ವರ್ಣದಿ..||



ಎಳೆಯ ಹುಲ್ಲಿನ ಎಸಳು ಒಮ್ಮೆಲೇ, ತೂಗಿರಲು ವೈಯ್ಯಾರದಿ..
ಮೋಹಕುಂತಲ ಸೋಕಿ ಕೆನ್ನೆಗೆ, ಇಂದ್ರಜಾಲದ ವಾರಿಧಿ..||

ನಡೆವ ಹೆಜ್ಜೆಯೂ, ಇಣುಕಿ ನೋಡಿದೆ, ಚಡಪಡಿಸಿ ನಿನ್ನೂರಿಗೆ..
ದಡದ ಆಚೆಯೂ, ನೋಟ ಚಾಚಿದೆ, ಗಮ್ಯ ಯಾವುದು ದಾರಿಗೆ.?


ಸ್ವಪ್ನಬುತ್ತಿಯ ಹೊತ್ತು ತಂದಿಹೆ, ಹಂಚಲೋಸುಗ ನಿನ್ನಲೇ..
ಬಂದು ಬೇಗನೆ ತುತ್ತು ನೀಡುತ, ಬಾಚಿ ತಬ್ಬಿಕೋ ಕಣ್ಣಲೆ..||

Wednesday, June 20, 2012

[ ಈ ಹಾಡು, "ರೋಮಿಯೋ" ಚಿತ್ರದ, "ಆಲೋಚನೆ..ಆರಾಧನೆ..ಎಲ್ಲ ನಿಂದೇನೆ.." ಎಂಬ ಹಾಡಿನ ಧಾಟಿಯಲ್ಲಿ ಬರೆದ ಹೊಸ ಸಾಹಿತ್ಯ..]


ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ..
ಸಂವಾದದಿ ಸಂತೋಷದ ಸಂಗಮ..
ನಿನ್ನಾಸೆಯೇ ನನ್ನ ಖುಷಿ ಅಂತಿಮ..
ಬದುಕಿಗೊಂದು ಸಿಹಿಯ ಸಾಲು ತಂದು,
ಪ್ರಣಯದಲ್ಲಿ ಧನ್ಯನಾದೆ ಮಿಂದು,
ನೀನೇ ಸುಧೆಯ ಸಿಂಧು...||



ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ..



ಕಣ್ಣಿನಲ್ಲಿ ನಿನ್ನ ರೂಪ ಅಗಣಿತ
ನಿಂತ ಮೇಲೆ ನನ್ನ ಭಾವ ವಿಚಲಿತ..
ಬಿಡದಲೇ ನೋಡಿ, ಕರಗಿಸು ನನ್ನೀ ಮನ
ನಿನ್ನ ಮಂದಹಾಸ ಕಾಂತಿ ನೆನೆಯುತ
ಮೌನದೊಂದು ಭಾಷೆಯನ್ನು ಕಲಿಯುತ..
ಅನುಭವಕೀಗ, ಅರಿಯದ ರೋಮಾಂಚನ..||
ಕೇಳು.. ಒಮ್ಮೆ,, ಈ ಗೀತೆಯ..
ಹೇಳು.. ಮತ್ತೆ.. ಈ ಪ್ರೀತಿಯ..||1||



ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ..



ಸಣ್ಣದಾದ ಮಾತು ಕೂಡ ಸುಮಧುರ
ಬೇಗ ಹಂಚಬೇಕು ಎಂಬ ಅವಸರ
ಪ್ರತಿದಿನ ಹೀಗೆ, ಒಲವಲಿ ಮಾಮೂಲಿಯೇ..
ನಿನ್ನ ಗುಂಗಿನಲ್ಲಿ ಇಂದು ಪ್ರತಿಸ್ವರ
ಹಾಡಿದಂತೆ ಭಾಸವೆಲ್ಲ ಪರಿಸರ
ಹೃದಯದ ದಾರಿ.. ಬೆರೆತಿದೆ ನಿನ್ನಲ್ಲಿಯೇ..
ಏನೋ..ನವ್ಯ.. ಈ ಉತ್ಸವ..
ಎಷ್ಟು..ಭವ್ಯ..ಈ ವೈಭವ...||2||



ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ  ಈ ಕಾತರ ಕಂಡೆ ನಿನ್ನಿಂದ....

Monday, June 11, 2012

ದಿವ್ಯಬಿಂದು..!!




ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು
ಭೋರ್ಗರೆದು ಚಿಮ್ಮಿಸುತ ಮಂಗಳದ ಹಾಡು..
ಉಕ್ಕುವ ರಭಸದಲಿ ತೊಳೆದು ಕೊಳೆಗಳ ಕಾಡು
ಸೆಳೆದು ಝೇಂಕರಿಸುತಲಿ ಜನರೆದೆಯ ಗೂಡು..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ಕನ್ನಡಾಂಬೆಯ ಪಾದಪದ್ಮದಿಂ ಉದ್ಭವಿಸಿ
ರಾಜರಾಜೇಶ್ವರರ ಮುಕುಟ ಸಿಂಗರಿಸಿ..
ರನ್ನ ಪಂಪರ ಚಿನ್ನಲೇಖನಿಯ ಸಂದಣಿಸಿ
ದಶದಿಶೆಗೂ ಸಂಸ್ಕೃತಿಯ ಗಂಧ ಸೂಸಿ..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು...


ಸ್ವರ್ಗಕನ್ಯೆಯರಿಳಿದು ಶಿಲ್ಪವಾಗಿಹ ಮೋದ
ಹಸಿರುಮಾತೆಯ ಕರದೊಳರಳಿದ ಪ್ರಭೇದ.
ನಿತ್ಯ ಸಂಗೀತರಸರುಚ್ಛ್ರಾಯದ ನಾದ.,
ವಚನಕೀರ್ತನಗಣದಿ ಪಸರಿಸುತ ಸ್ವಾದ..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ನಡೆದ ಕಡೆ ಎಲ್ಲರೊಡನೊಡನಾಡುವ ನಲುಮೆ
ಸ್ವರ್ಣಯುಗದೊಳು ಮೆರೆದ ಚರಿತೆಯ ಗರಿಮೆ..
ಮೊಗೆದಷ್ಟು ಪುಟಿದೇಳ್ವ ಜ್ಞಾನಸಲಿಲದ ಚಿಲುಮೆ
ಪದಗಳಲ್ಲಿಡಬಹುದೇ, ಕೊನೆಯಿರದ ಮಹಿಮೆ..?!!


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ಧನ್ಯರಾದವರೆಷ್ಟೋ, ಈ ಧಾರೆಯಲಿ ಮಿಂದು
ಬೇಡಿ ಬಂದವರಿಗೊಲಿದಮೃತಸಿಂಧು..
ಗಂಗೆಗಿಂತಲೂ ಅಧಿಕ ಪಾವನತರಂಗವಿದು
ಎಲ್ಲ ಜನ್ಮಕೂ ದೊರಕಲೀ ದಿವ್ಯಬಿಂದು..!!