Friday, August 31, 2012

ಪರಿಣಯ..!!

ಬೆಳಕಿನ ಬಿಂದುಗಳ
ಬಂಧದಲಿ ಹೊಂದಿಸಿದ
ಮಂದಿರದೊಳಗೆ ಇಂದುವಿನ ಪರಿಣಯ...
ಮಂಗಳಾಂಗಿನಿ ಭೃಂಗ-
-ಕುಂತಲೆ ರೋಹಿಣಿಯ
ಸಂಗದಿಂದಲಿ ಶೃಂಗರಿತವೀ ಪ್ರಣಯ..||

ಶರಧಿಯ ಗರ್ಭದಲಿ
ಅಬ್ಬರಿಸಿ ಮೇಲೆದ್ದ
ಉಬ್ಬಲೆಗಳೆಬ್ಬಿಸಿದ ಮಂತ್ರಗಾನ..
ಶೀತಲಕೀಲಾಲದಲಿ
ಸಾಲು ನೆಲೆನಿಂತಿರುವ
ನೀಲೋತ್ಪಲದಿ ರಚಿತ ಪುಷ್ಪಕವಿಮಾನ..||

ಆಗಸಾಂಗಳದೊಳಗೆ 
ನೀಳ ಬಾಳೆಲೆಯಲ್ಲಿ 
ಬೆಳದಿಂಗಳಿನ ಕಂಗೊಳಿಸುವ ಭೂಮ..
ತಲೆದೂಗುತಿಹ ತರುಗಳಾ
ಚಾಮರದಿ ಸ್ಫುರಿತ
ಹಿತಸಮೀರನ ಕೂಡಿರುವ ಸುರಭಿಪ್ರೇಮ..||


ರೂಪ್ಯಸಾರೂಪ್ಯತೆಯ
ಪ್ರಾಪ್ತ ಸುಪಯೋಧರದಿ
ಕಲ್ಪಿತವಿತಲ್ಪದಲಿ ರಾಜಿಸುತಲಿ..
ಹೂಗನಸಿನ ಹಾದಿ
ಹಾಸಿ ಹೃದಯದಿ ಹೆಣೆದ
ಹರುಷದೀ ಹೊನಲೆಂದೂ ಹೊಳೆಹೊಳೆಯುತಿರಲಿ..||


Saturday, August 25, 2012


[ "ಭಾಮಿನಿ" ಷಟ್ಪದಿಯಲ್ಲಿ ವಿರಚಿತ.]

* ಶಾರದಾ ವಂದನೆ *


ಶಾರದೇಂದುಪ್ರತಿಮಶೋಭಾ- 
ಪಾರಕಾಂತಿತದಿಕ್ಸಮೂಹತು-
ಷಾರನಿಭರದರಕ್ತಧರಯುಕ್ತಸ್ಮಿತಾನನಳೇ..
ಮೂರು ಲೋಕದ ಸುರನರಪಪರಿ-
ವಾರದಿಂ ಪ್ರತ್ಯಹದಿ ಪೂಜಿತೆ 
ಶಾರದೆಯೆ ಹಸ್ತಾವಲಂಬನವಿತ್ತು ಪಿಡಿ ಕೈಯ.||೧||

ಕಮಲೆರಮಣನ ನಾಭಿಯೊಳಗಿಹ
ಕಮಲಪೀಠದಿ ಜಾತ ವಿಧಿಕರ-
ಕಮಲ ವರಿಸಿಹ ಪಟ್ಟದರಸಿಯೆ ವಿಮಲಕೀರ್ತಿತಳೇ...
ಕಮಲಗಂಧಿಯೆ ಕೋಮಲಾಂಗಿಯೆ 
ಕಮಲನೆತ್ರಳೆ ನಿನ್ನ ಚರಣದ 
ಕಮಲಕೆರಗುವೆ ವಿಪುಲಮಂಗಳಗೈದು ಸಲಹುವುದು.||೨||


ಶ್ವೇತವರ್ಣಾಂಬರಧರೆಯೆ ಬಲು
ಪೂತಗುಣೆ ನಿಷ್ಕ್ರಾಂತಕುಸ್ವರ-
ಧೀತಸನ್ಮನರಮ್ಯನಾದಕವೀಣೆಮಂಡಿತಳೇ..
ಜಾತರೂಪಾತ್ಮಕ ರತುನಮಣಿ-
ಜಾತಹಾರಾಭಾರಣೆ ವಿದ್ಯೆನಿ-
ಕೇತನಳೆ ಪೊಡಮಡುವೆ ಪುಸ್ತಕಹಸ್ತೆ ಹಂಸರಥೆ..||೩||

ಮಡುವಿನೊಳಗಜ್ಞಾನಗಾಮಿನಿ
ಯಡ ಗಿಹೆನು ನಾ ಮಂದತನದಲಿ 
ಪೊಡವಿಯೊಳು ನಿನ್ಹೊರತು ಪೊರೆವರ ಕಾಣದಲೆ ಇಂದು..
ಬಿಡದೆ ನಿನ್ನನೆ ಧೇನಿಪೆನು ತಡ-
ವಿಡದೆ ಸುಜ್ಞಾನವನು ಪಾಲಿಸಿ
ಕಡೆಯ ಹಾಯಿಸು ನಾವೆಯಂದದಿ ವಾಣಿ ಕಲ್ಯಾಣಿ.||೪||

ಎನಿತು ಲೋಗರ ಮೊಗದಲನುದಿನ
ವಿನಿತು ನೈಕಧ ವಚನ ಹೊಮ್ಮಿಪ
ಘನತೆ ನಿನ್ನದು ದೇವಿ ನುಡಿಗಭಿಮಾನಿ ಗೀರ್ವಾಣಿ..
ತನಯ ನಾ ನಿನಗನ್ಯನಾಪೆನೆ
ಮನದ ಮಂಟಪದೊಳಗೆ ನಿಚ್ಚದಿ
ಕನಿಕರಿಸಿ ಸುಸ್ಥಿರವಿರು ಪ್ರಣತಾತ್ಮಹರಿಣಿ.||೫||

Monday, August 6, 2012

ಭೃಂಗದ ಬೆನ್ನೇರಿ..!!


ಕಂಡ ನೂರು ಕನಸಿಗೆಲ್ಲ
ರೆಕ್ಕೆ ಪುಕ್ಕ ಕಟ್ಟಿ ಹಾರಿ,
ಹಚ್ಚ ಹಸಿರ, ಸ್ವಚ್ಛ ಜಗದಿ
ವಿಹರಿಸುತ್ತ ಸುಖಿಸುತಿರಲು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ದೇವಪಾರಿಜಾತವಿರಲಿ
ದೀನಸುಮವ್ರಾತವಿರಲಿ
ಅಲ್ಲಿಗಿಲ್ಲಿಗೆಲ್ಲ ತೆರಳಿ
ಸ್ನೇಹಲೋಕ ಹೆಣೆಯಲೆಂದು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ಎರಡು ದಿನದ ಬದುಕಿನಲ್ಲಿ
ಎಲ್ಲರೊಲುಮೆ ಸಿಹಿಯ ಹೀರಿ
ಸತ್ತ ಮೇಲೂ ಮಧುವ ಬೀರಿ
ಮೆದ್ದ ಜನರ ಮನದೊಳಿರಲು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ಗೂಡಿನರಸಿ ನಾಡದೇವಿ
ಅವಳ ಆಜ್ಞೆಯಾಳು ನಾನು
ನಮ್ಮ ಬಳಗ ಮುರಿಯ ಬಂದ
ದುರುಳರನ್ನು ಸರಿಸಲೆಂದು..
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!