Tuesday, November 19, 2013

ಕಾಲೇಜು ದಿನಗಳು...!! [ಭಾಗ-೪]

ಮೊದಲನೇ ದವನದಲ್ಲಿ ನನಗೆ ೨ ಪ್ರಶಸ್ತಿಗಳು ಬಂದಿದ್ದವು. ಪ್ರಶಸ್ತಿ ಪ್ರದಾನವು ಸಂಜೆ ನಡೆಯೋದಿತ್ತು. ಅದಕ್ಕಾಗಿ ಭವ್ಯ ವೇದಿಕೆ, ಬೃಹತ್ತಾದ ಸೌಂಡ್ ಸಿಸ್ಟಮ್ ಎಲ್ಲವೂ ತಯಾರಾಗಿತ್ತು.ಇಡೀ ಕಾಲೇಜು ವಿದ್ಯುದ್ದೀಪಗಳಿಂದ ಸಿಂಗರಿತವಾಗಿ, ಮದುವಣಗಿತ್ತಿಯಂತೆ ಹೊಳೆಯುತ್ತಿತ್ತು.! ಅದೇನೋ ಹಬ್ಬದ ವಾತಾವರಣ ಮನಸ್ಸಿನಲ್ಲೇ ಸೃಷ್ಟಿಯಾಗಿತ್ತು.. ಆ ಹೊತ್ತಿಗಾಗಲೇ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು ಎಲ್ಲರೂ ಬಂದು ಕುಳಿತಿದ್ದರು.

ಅವತ್ತಿನ ಮುಖ್ಯ ಆಕರ್ಷಣೆ ಅಂದ್ರೆ, ಅಂದು ಬರಲಿದ್ದ ಮುಖ್ಯ ಅತಿಥಿ. ಮುಂಗಾರು ಮಳೆಯ ಯಶಸ್ಸಿಗೆ ಮುಖ್ಯ ಕಾರಣಕರ್ತರುಗಳಲ್ಲಿ ಒಬ್ಬರಾದ, ಮನೋಜ್ಞ ಕವಿತೆಗಳನ್ನು ಕನ್ನಡಿಗರಿಗಾಗಿ ಬರೆದು ನೂತನ ಯುಗವನ್ನು ಸೃಷ್ಟಿಸಿದ ಶ್ರೀ ಜಯಂತ ಕಾಯ್ಕಿಣಿ..!! ನಾನೂ ಬಹಳಷ್ಟು ಉತ್ಸುಕನಾಗಿದ್ದೆ.. ದವನದ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿ ಸ್ವೀಕರಿಸುವೆನೆಂಬ ಹೆಮ್ಮೆಯೂ ಒಂದು ಕಡೆ.!

ಅವತ್ತು ಸಂಜೆ ಬಹುಶಃ ೬, ೬-೩೦ ಕ್ಕೆ ಕಾರ್ಯಕ್ರಮ ಆರಂಭವಾಯಿತು.. ಪ್ರಾರ್ಥನೆಯ ನಂತರ, ನಮ್ಮ ಕೃಷ್ಣನೇ ಸ್ವಾಗತ ಭಾಷಣ ಮಾಡಿದ. ಅಚ್ಚ ಕನ್ನಡದ ಅವನ ಸ್ವಾಗತ ಮನಸೂರೆಗೊಂಡಿತು.. ತದನಂತರ ಜಯಂತ ಕಾಯ್ಕಿಣಿಯವರ "ಅನಿಸುತಿದೆ ಯಾಕೋ ಇಂದು" ಹಾಡನ್ನು ವೇದಿಕೆಯ ಮೇಲೆ ನನ್ನ ಸ್ನೇಹಿತ ವಿಶ್ವೇಶ್ವರ ಮಧುರವಾಗಿ ಹಾಡಿದ. ಅವನಿಗೆ ಗೌತಮ್ ಮತ್ತು ಭರತೇಶ್ ಇಬ್ಬರೂ ಕೀಬೋರ್ಡ್ ನ ಸಹಾಯ ನೀಡಿದರು.. ಆಮೇಲೆ ಕಾಯ್ಕಿಣಿಯವರು ತಮ್ಮ ಅತಿಥಿ ಭಾಷಣವನ್ನು ಮಾಡಿದರು. ನಾಡಿನ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಯುವಕರು ಮುನ್ನುಗ್ಗಬೇಕು ಎಂಬುದನ್ನು ರಸವತ್ತಾಗಿ ಹೇಳಿದರು.. 

ಎಲ್ಲರ ಭಾಷಣ ಮುಗಿದ ಮೇಲೆ, ಬಹುಮಾನ ವಿತರಣೆ ಆಗುವುದಿತ್ತು. ಎಲ್ಲರ ತರಹವೇ ನಾನೂ ಉತ್ಸಾಹದಿಂದ ವೇದಿಕೆಯ ಹತ್ತಿರ ನಿಂತಿದ್ದೆ. ಉಪನ್ಯಾಸಕರೊಬ್ಬರು ಒಂದೊಂದಾಗಿ ಎಲ್ಲ ಸ್ಪರ್ಧೆಗಳ ವಿಜೇತರುಗಳ ಪಟ್ಟಿಯನ್ನು ಓದುತ್ತ ಹೋದರು.. ನಾನೂ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಅದೊಂಥರಾ ಖುಷಿಯ ಸಂದರ್ಭ. ಸಾವಿರಾರು ಸ್ನೇಹಿತರ ಎದುರು ವೇದಿಕೆಯ ಮೇಲೆ ಬಹುಮಾನ ಹಿಡಿದುಕೊಳ್ಳುವುದು..!! ಆ ವರ್ಷ ನಗದು ಬಹುಮಾನವನ್ನು ಕೊಟ್ಟಿದ್ರು. ಮೊದಲನೇ ಸ್ಥಾನಕ್ಕೆ ೨೫೦, ಎರಡನೆಯದಕ್ಕೆ ೨೦೦, ಮತ್ತು ಮೂರನೆಯ ಬಹುಮಾನಕ್ಕೆ ೧೫೦ ರೂಗಳು. ನನಗೆ ಎರಡು ದ್ವಿತೀಯ ಬಹುಮಾನ ಬಂದಿದ್ರಿಂದ, ಒಟ್ಟು ೪೦೦ ರೂಗಳು ಸಿಕ್ಕಿದವು..!!

ಉಳಿದೆಲ್ಲ ಸ್ಪರ್ಧಾಕೂಟಗಳಲ್ಲಿ ಇರುವಂತೆ, ನಮ್ಮ ದವನದಲ್ಲೂ, ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗೆ ವಿಶೇಷವಾಗಿ "ದವನಶ್ರೀ" ಎಂಬ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗುತ್ತಿತ್ತು.. ದವನಕ್ಕೆ ಬರುವ ಬಹುತೇಕ ಎಲ್ಲರಿಗೂ, ಇಂಜಿನಿಯರಿಂಗ್ ನ ೪ ವರ್ಷಗಳಲ್ಲಿ ಒಮ್ಮೆಯಾದರೂ ಆ ದವನಶ್ರೀಯನ್ನು ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಇರ್ತಿತ್ತು.. ಅದಕ್ಕಾಗಿ ಬಹಳಷ್ಟು ಕಸರತ್ತನ್ನೂ ನಡೆಸುತ್ತಿದ್ದರು.. ಈ ಮೊದಲನೇ ದವನದಲ್ಲಿ ಶಿವಮೊಗ್ಗದ JNNC ಕಾಲೇಜಿನ 'ಶೂನ್ಯಶ್ರೀ' ಎಂಬ ವಿದ್ಯಾರ್ಥಿನಿಗೆ ಆ ಪ್ರಶಸ್ತಿ ಲಭಿಸಿತ್ತು. ಆಕೆ ಅದ್ಭುತ ಚಿತ್ರಕಲಾ ಪ್ರವೀಣೆ. ಪೇಂಟಿಂಗ್,ರಂಗೋಲಿ,ಕೊಲಾಜ್, ಕಾರ್ಟೂನಿಂಗ್ ಇಲ್ಲೆಲ್ಲಾ ಉತ್ತಮ ಕಲಾಕೃತಿಗಳನ್ನು ರಚಿಸಿದ್ದರಿಂದ ಅವಳಿಗೆ ಆ ಯಶಸ್ಸು ದಕ್ಕಿತ್ತು..
ಇದರ ಜೊತೆಗೆ, ಅತೀ ಹೆಚ್ಚು ಬಹುಮಾನಗಳನ್ನು ಪಡೆದ ಕಾಲೇಜಿಗೂ "ಚಾಂಪಿಯನ್ ಪ್ರಶಸ್ತಿ"ಯನ್ನು ಕೊಡಲಾಗುತ್ತಿತ್ತು. ಅವತ್ತು ಬಳ್ಳಾರಿಯ RYMSC ಕಾಲೇಜು ಅತಿಹೆಚ್ಚು ಬಹುಮಾನಗಳನ್ನು ಗೆದ್ದು ಚಾಂಪಿಯನ್ ಆಗಿ ಆಯ್ಕೆಯಾಗಿತ್ತು.. ಆ ಕಾಲೇಜಿನ ಉಪನ್ಯಾಸಕರು, ಕೆಲವು ವಿದ್ಯಾರ್ಥಿಗಳು ವೇದಿಕೆಯ ಮೇಲೇರಿ ಪ್ರಶಸ್ತಿ ಸ್ವೀಕರಿಸುತ್ತಿದ್ದರೆ, ವೇದಿಕೆಯ ಕೆಳಗೆ ನಿಂತ ಆ ಕಾಲೇಜಿನ ಉಳಿದ ಹುಡುಗರು "RYMSC..RYMSC.." ಎಂದು ಸಂಭ್ರಮದಿಂದ ಕೇಕೆ ಹಾಕುತ್ತಿದ್ದರು..

ಹೀಗೆ ಔಪಚಾರಿಕ ಸಮಾರಂಭ ಮುಗಿದ ಮೇಲೆ, ನಿಜವಾದ ದವನದ ರಂಗು ಮೇಲೇರುವುದಿತ್ತು. ಹಾಡು, ನೃತ್ಯ, ನಾಟಕ ಹೀಗೆ ಹಲವಾರು ಕಾರ್ಯಕ್ರಮಗಳು ವೇದಿಕೆಯ ಮೇಲೆ ನಡೆಯೋದಿತ್ತು. ಆದರೆ ಅಷ್ಟು ಹೊತ್ತಿಗಾಗಲೇ, ನನ್ನ ತಲೆನೋವು ಮಿತಿಮೀರಿತ್ತು. ನಿಲ್ಲುವುದಕ್ಕೂ ಆಗದ ಪರಿಸ್ಥಿತಿ. ಹೀಗಾಗಿ ಮನೆಗೆ ಹೊರಡಲು ನಿರ್ಧರಿಸಿದೆ. ಕೃಷ್ಣನಿಗೆ ತಿಳಿಸಿ, ನಾನು ಬಸ್ ಹತ್ತಿ ಮನೆಗೆ ವಾಪಸ್ಸಾದೆ.ಮನೆಗೆ ಬಂದವನೇ, ಬಂದಿದ್ದ ಬಹುಮಾನಗಳನ್ನು ಅಪ್ಪ-ಅಮ್ಮನಿಗೆ ತೋರಿಸಿದೆ. ಅವರೂ ಮನಸಾ ಖುಷಿ ಪಟ್ಟರು.. ತಲೆನೋವು ಎಷ್ಟೇ ಇದ್ದರೂ, ಮನಸ್ಸು ಮಾತ್ರ ಕುಣಿದಾಡುತ್ತಿತ್ತು..!!

ದವನ ಮುಗಿದ ಮೇಲೂ, ಎಷ್ಟೋ ದಿನ ಅದರ ಗುಂಗಿನಲ್ಲೇ ಇದ್ದೆ. ಪರಿಚಯವಾದ ಹೊಸ ಗೆಳೆಯರು, ಹೊಸ ಪ್ರತಿಭೆಗಳು ಇವುಗಳ ನೆನಪೇ ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಈ ಗುಂಗಿನಿಂದ ಹೊರ ಬರುವಷ್ಟರಲ್ಲಿ, ಎರಡನೇ ಸೆಮಿಸ್ಟರ್ ನ ಪರೀಕ್ಷೆಗಳು ಆರಂಭವಾಗಿಯೇ ಬಿಟ್ಟವು.. ಕೆಮಿಸ್ಟ್ರಿ,ಗಣಿತ ಹೊರತುಪಡಿಸಿದರೆ ಉಳಿದವೆಲ್ಲವೂ ನನಗೆ ಹೊಸ ವಿಷಯಗಳೇ. ಆದರೂ ಹೇಗೋ ಹಗಲು ರಾತ್ರಿ ಓದಿ ಪರೀಕ್ಷೆ ಬರೆದೆ..ಅಂತೂ ಎಲ್ಲ ನಿರಾಳವಾಗಿ ಮುಗಿಯಿತು. ಮುಂದಿನ ಸೆಮಿಸ್ಟರ್ ನಲ್ಲಿ ನಮ್ಮ ನಮ್ಮ ವಿಭಾಗಗಳಿಗೆ ಹೋಗಬೇಕಾಗಿತ್ತು. ಕಂಪ್ಯೂಟರ್ ಸೈನ್ಸ್ ಅನ್ನು, ಇನ್ನೂ ೩ ವರ್ಷ ಹೇಗೆ ಓದಿ ಪಾರುಮಾಡುವುದೆಂಬ ಒಂದು ಸಣ್ಣ ಅಳುಕು ಯಾವಾಗಲೂ ನನ್ನ ಮನದ ಮೂಲೆಯಲ್ಲಿ ಇದ್ದೆ ಇತ್ತು. ಆದರೂ, ರಜೆ ಪ್ರಾರಂಭವಾಗಿದ್ದರಿಂದ, ಎಲ್ಲ ಮರೆತು ಹಾಯಾಗಿರಲು ನಿರ್ಧರಿಸಿದೆ. ಗೆಳೆಯರನ್ನೆಲ್ಲ ಬೀಳ್ಕೊಟ್ಟು ರಜೆಯ ಮಜಾಕ್ಕೆ ಹೊರಡಲು ಅಣಿಯಾದೆ..!!


[ ಮುಂದುವರೆಯುವುದು... !! ]

Monday, November 11, 2013

ಕಾಲೇಜು ದಿನಗಳು...!! [ಭಾಗ-೩]

"ದವನ" ಅಂದಾಕ್ಷಣ ಈಗಲೂ ನನ್ನ ಕಣ್ಣುಗಳು ಅರಳಿತ್ತವೆ.. ಆ ಒಂದು ತಿಂಗಳ ತಯಾರಿ,ಓಡಾಟ, ಸದಾ ಹಾಸ್ಟೆಲ್ ನ ರೂಮುಗಳಲ್ಲಿ ಚರ್ಚೆ ಇವಾವುದನ್ನೂ ಮರೆಯಲು ಸಾಧ್ಯವೇ ಇಲ್ಲ..
"ದವನ", ನಮ್ಮ ಬಾಪೂಜಿ ಕಾಲೇಜಿನಲ್ಲಿ ನಡೆಯುವ ಅಂತರ್ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಹಬ್ಬ.. ಸಂಗೀತ,ನೃತ್ಯ,ಸಾಹಿತ್ಯ,ಅಭಿನಯ ಹೀಗೆ ಅನೇಕ ವಿಭಾಗಗಳಲ್ಲಿ ಹತ್ತಾರು ಸ್ಪರ್ಧೆಗಳು.. ಅದಕ್ಕಾಗಿ JNNC ಕಾಲೇಜು, RYMSC ಕಾಲೇಜು, UBDT ಕಾಲೇಜು, GMIT ಕಾಲೇಜು, AIT ಕಾಲೇಜು ಹೀಗೆ ರಾಜ್ಯದ ವಿವಿಧೆಡೆಯ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳೂ ಬರುತ್ತಿದ್ದರು.

ಈ "ದವನ" ಅನ್ನೋ ಹೆಸರು ಇದಕ್ಕೆ ಹೇಗೆ ಬಂತು ಅನ್ನೋದನ್ನ ಮೊದಲಿಗೆ ಹೇಳಲೇಬೇಕು. ಅನೇಕ ಜನರಿಗೆ,[ನನ್ನ ಕಾಲೇಜಿನ ಬಹಳಷ್ಟು ಮಂದಿಗೂ ಕೂಡ] ಅದರ ಮಾಹಿತಿ ಇರಲಿಲ್ಲ.
ನಮ್ಮ ದಾವಣಗೆರೆ ಗೆ, ದೇವನಗರಿ ಎಂಬ ಪ್ರಾಚೀನ ಹೆಸರಿದ್ದಿದ್ದು ಅನೇಕರಿಗೆ ಗೊತ್ತು. ಹಾಗೆಯೇ ಅದರ ಜೊತೆ "ದವನಗಿರಿ" ಎಂಬ ಹೆಸರೂ ಇತ್ತು. ಅಲ್ಲಿ ಹುಲುಸಾಗಿ ದವನದ ಸಸ್ಯ ಬೆಳೆಯುತ್ತಿದ್ದಿದ್ದು ಅದಕ್ಕೆ ಕಾರಣ. ದವನ ಒಂದು ಸುವಾಸಿತವಾದ ಸಸ್ಯಪ್ರಬೇಧ. (ಮರುಗದ ಎಲೆ ಗೊತ್ತಲ, ಅದೇ ಥರ). ಹೂವಿನ ಮಾಲೆಯ ನಡುವೆ, ಈ ದವನದ ಎಲೆಗಳನ್ನೂ ಜೋಡಿಸುತ್ತಾರೆ. ಸಾಮಾನ್ಯ ಸಸ್ಯಗಳಲ್ಲಿ ಹೂವು ಮಾತ್ರ ಸುಗಂಧಿತವಾಗಿದ್ದರೆ, ದವನದಲ್ಲಿ ಇಡೀ ಸಸ್ಯವೇ, ಕಾಂಡ ,ಎಲೆ ಎಲ್ಲವೂ ಸುವಾಸಿತ.. ಹೀಗಾಗಿ ಅದನ್ನೊಂದು ಸೂಚ್ಯವಾಗಿಟ್ಟುಕೊಂಡು, ಹೇಗೆ ದವನದ ಸಸ್ಯ ಸಂಪೂರ್ಣವಾಗಿ ಸುಗಂಧಿತವಾಗಿರುತ್ತದೆಯೋ, ಹಾಗೆಯೇ ವಿದ್ಯಾರ್ಥಿಗಳೂ ಕೂಡ ಕೇವಲ ತಾಂತ್ರಿಕವಾಗಿ ಅಲ್ಲದೆ, ಸಾಮಾಜಿಕ,ಸಾಂಸ್ಕೃತಿಕ ವಿಷಯಗಳಲ್ಲೂ ಪ್ರಬುದ್ಧರಾಗಿ ಪರಿಪೂರ್ಣವಾಗಿ ಬೆಳೆಯಬೇಕೆಂಬ ಆಶಯದಲ್ಲಿ ನಮ್ಮ ಕಾಲೇಜಿನ "ದವನ" ಮೂಡಿಬಂದಿತ್ತು.

ದಶಕದ ಹಿಂದೆ, ದವನದ ಕೀರ್ತಿ ಬಹಳವಾಗಿತ್ತು. ಆಗ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದ ಕೆಲವೇ  'ರಾಜ್ಯಮಟ್ಟದ' ಕಾರ್ಯಕ್ರಮಗಳಲ್ಲಿ ಇದೂ ಒಂದು. ಆ ನಂತರ ಕಾಲಕ್ರಮೇಣ, ಹೊಸ ಹೊಸ ಕಾಲೇಜುಗಳು ಪ್ರಾರಂಭವಾಗಿ, ಎಲ್ಲರೂ ತಮ್ಮ ತಮ್ಮ ಕಾಲೇಜಿನಲ್ಲಿಯೇ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಶುರುವಾದಾಗಿನಿಂದ, ಹೊರ ಊರುಗಳಿಂದ ಬರುವ ಸ್ಪರ್ಧಿಗಳ ಸಂಖ್ಯೆ ಸ್ವಲ್ಪ ಕಮ್ಮಿಯಾಗಿತ್ತು. ಆದರೂ ದವನದ ಛಾಪು ಹಾಗೆಯೇ ಇತ್ತು.

ಇಂತಹ ದವನಕ್ಕೆ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳೆಲ್ಲ ಬರುತ್ತಿದ್ದುದರಿಂದ, ನಮ್ಮ ಕಾಲೇಜಿನಲ್ಲಿಯೂ ತಯಾರಿ ಜೋರಾಗಿಯೇ ಇರುತಿತ್ತು. ಹಾಗೆ ನೋಡೋದಾದ್ರೆ ಮೊದಲನೇ ವರ್ಷ ನಾನು ಈ ದವನದಲ್ಲಿ ಪೂರ್ಣವಾಗಿ ಭಾಗವಹಿಸಿರಲಿಲ್ಲ. ಪ್ರತಿನಿತ್ಯ ಹರಿಹರದಿಂದ ದಾವಣಗೆರೆಗೆ ಓಡಾಡುವುದರಲ್ಲಿಯೇ ದಣಿದು ಹೋಗುತ್ತಿದ್ದ ಕಾರಣ, ಮತ್ತೆ ಇದಕ್ಕಾಗಿ ಸಮಯ ಮೀಸಲಿಡುವುದು ಸಾಧ್ಯವಿರಲಿಲ್ಲ.. ಆದರೆ ಮನಸ್ಸು ಕೇಳಬೇಕಲ್ಲ.. ಹಾಡು,ಭಾಷಣ,ನಾಟಕಗಳಲ್ಲಿ ಅಪಾರ ಆಸಕ್ತಿಯಿದ್ದವನು ನಾನು.. ಹೀಗಾಗಿ ಭಾಷಣದ ಸ್ಪರ್ಧೆಗಳಲ್ಲಷ್ಟು ಭಾಗವಹಿಸಲು ತೀರ್ಮಾನಿಸಿದೆ.

ದವನದ ಸ್ಪರ್ಧೆಗೂ ಮುಂಚೆ, ನಮ್ಮ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಗೆ ಆಡಿಶನ್ ನಡೆಸಲಾಗುತ್ತಿತ್ತು. ಅದರಲ್ಲಿ ಆಯ್ಕೆಯಾದವರನ್ನು ಮುಖ್ಯ ಸ್ಪರ್ಧೆಗೆ ಕಳಿಸುತ್ತಿದ್ದರು..ನನ್ನ ಮೊದಲನೇ ವರ್ಷದಲ್ಲಿಯೂ ಹೀಗೆ ಆಡಿಶನ್ ನಡೆಯಿತು.. ಬಹುಶಃ ಮೆಕ್ಯಾನಿಕಲ್ ಸೆಮಿನಾರ್ ಹಾಲ್ ನಲ್ಲಿ ಅಂತ ನೆನಪು.
ಡಾ.ಮುರುಗೇಶ್ ಬಾಬು ಸರ್, ಡಾ.ನಿರ್ಮಲಾ ಸಿ.ಆರ್ ಮೇಡಂ, ಚಿದಾನಂದಪ್ಪ ಸರ್, ಪ್ರಸನ್ನ ಸರ್, ಡಾ.ಸುಬ್ರಮಣ್ಯ ಸ್ವಾಮಿ ಸರ್ ಇಂತಹ ಅನೇಕ ಘಟಾನುಘಟಿಗಳ ಸಮ್ಮುಖದಲ್ಲಿ ನಾವು ಆಡಿಶನ್ ನೀಡುವುದಿತ್ತು.. 
ಮೊದಲಿಗೆ ಭಾವಗೀತೆ,ಜನಪದಗೀತೆ,ಚಲನಚಿತ್ರಗೀತೆ ಇವುಗಳ ಆಡಿಶನ್ ನಡೆಯಿತು. ನಾನೂ ಭಾಗವಹಿಸಿದ್ದೆ. ನಾನು ಸಂಗೀತವನ್ನೇನು ಅಭ್ಯಾಸ ಮಾಡಿಲ್ಲವಾದರೂ, ತಕ್ಕ ಮಟ್ಟಿಗೆ ಹಾಡುವ ರೂಢಿ ಇದೆ. ಆದರೆ ನನ್ನ ಸ್ನೇಹಿತರನೇಕರು ಸಂಗೀತಪರಿಣತರಿದ್ದರು.. ನನ್ನ ಆಯ್ಕೆಯಾಗುವುದಿಲ್ಲವೆಂದು ಗೊತ್ತಿದ್ದರೂ ಭಾಗವಹಿಸಿದ್ದೆ. ಶಾಸ್ತ್ರೀಯ ಸಂಗೀತದಲ್ಲಿ ನನ್ನ ಗೆಳೆಯ 'ವಿಶ್ವೇಶ್ವರ' ಆಯ್ಕೆಯಾದ.Instrumental Music ವಿಭಾಗದಲ್ಲಿ 'ಗೌತಮ್' ಆಯ್ಕೆಯಾದ. ಬೇರೆ ಗಾಯನ ಸ್ಪರ್ಧೆಗಳಲ್ಲಿ ಇನ್ನೂ ಕೆಲವರು ಆಯ್ಕೆಯಾದರು.ನಾನು ಪ್ರತ್ಯೇಕವಾದ ಗಾಯನದಲ್ಲಿ ಅಯ್ಕೆಯಾಗದಿದ್ದರೂ, ಸಮೂಹಗಾಯನದಲ್ಲಿ ಅಯ್ಕೆಯಾಗಿದ್ದೆ..!!

ಆನಂತರ ಕನ್ನಡ ಚರ್ಚಾ ಸ್ಪರ್ಧೆಯ ಆಡಿಶನ್ ಇತ್ತು. ನಾನು, ಕೃಷ್ಣ ಇನ್ನೂ ಅನೆಕರೂ ಬಂದಿದ್ರು. "ರಾಜಕೀಯದಲ್ಲಿ ಮಠಾಧೀಶರ ತೊಡಗುವಿಕೆ ಸರಿಯೋ ತಪ್ಪೋ" ಎಂಬ ವಿಷಯ ಕೊಡಲಾಗಿತ್ತು.ನಾನು ಪರವಾಗಿ ಮಾತನಾಡಿದೆ.ನಾನು ಮತ್ತು ಕೃಷ್ಣ ಅಂತಿಮವಾಗಿ ಆಯ್ಕೆಯಾದೆವು. ಕೃಷ್ಣ ಅದಾಗಲೇ ನಾಟಕ,ಮುಂತಾದವುಗಳ ತಯಾರಿಯನ್ನೂ ನಡೆಸಿದ್ದ.. ಆದರೆ ಮೊದಲನೇ ವರ್ಷ ಅವನ ತಂಡದೊಂದಿಗೆ ಸೇರಲು ನನಗೆ ಸಾಧ್ಯವಾಗಲಿಲ್ಲ.

ಇದರ ಜೊತೆ,ಇನ್ನೊಂದು ಸ್ಪರ್ಧೆಯೂ ಇತ್ತು. ಅದು 'ಕನ್ನಡ ಪುಸ್ತಕ ವಿಮರ್ಶೆ'.ಕನ್ನಡದ ಪ್ರಸಿದ್ಧ ಬರಹಗಾರರ ಪ್ರಸಿದ್ಧ ಕೃತಿಗಳನ್ನು ವಿಮರ್ಶಾತ್ಮಕವಾಗಿ ನಿರೂಪಿಸುವ ಸ್ಪರ್ಧೆ ಅದು. ದವನದ ಅನೇಕ ಅಪರೂಪದ ಸ್ಪರ್ಧೆಗಳಲ್ಲಿ ಇದೂ ಒಂದು.[VTU ನಡೆಸುವ ರಾಜ್ಯಮಟ್ಟದ 'Youth Fest'ನಲ್ಲಿ ಕೂಡ ಈ ಸ್ಪರ್ಧೆ ಇರೋದಿಲ್ಲ ]. ಆ ವರ್ಷ ನನ್ನ ನೆಚ್ಚಿನ ಭೈರಪ್ಪನವರ 'ಆವರಣ' ಕಾದಂಬರಿ, ಹಾಗು ಚಂದ್ರಶೇಖರ ಕಂಬಾರರ 'ಸೂರ್ಯಶಿಕಾರಿ' ಕೃತಿಗಳನ್ನು ವಿಮರ್ಶೆಗೆ ಇಡಲಾಗಿತ್ತು. ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾದಬಹುದಿತ್ತದರೂ, ನಾನು ಆವರಣವನ್ನು ಅದಾಗಲೇ ಓದಿದ್ದರಿಂದ ಅದನ್ನೇ ಆಯ್ದುಕೊಂಡೆ. ಈ ಸ್ಪರ್ಧೆಯಲ್ಲಿಯೂ ನಾನು ಆಯ್ಕೆಯಾದೆ.!!

ದವನ ಒಟ್ಟು ಮೂರು ದಿನದ ಕಾರ್ಯಕ್ರಮ. ಮೊದಲನೇ ದಿನ "ರೋಸ್ ಡೇ" ಅಂತ ಮಾಡ್ತಿದ್ರು.. ಅನೇಕರು ಒಂದೊಂದು ಬಗೆಯ ಶಾಪ್ ಗಳನ್ನು ತೆರೆದು ಮಾರಾಟ ಮಾಡುತ್ತಿದ್ದರು. ಅದೆಲ್ಲದಕ್ಕಿಂತ ಅವತ್ತಿನ ಆಕರ್ಷಣೆ ಅಂದ್ರೆ ರೋಸ್ ಸ್ಟಾಲ್. ಯಾರು ಬೇಕಾದರೂ, ಎಷ್ಟಾದರೂ ಹಣ ಕೊಟ್ಟು ಗುಲಾಬಿ ಖರೀದಿಸಿ, ಯಾರಿಗಾದರೂ ಕೊಡುವ ಪ್ರಕ್ರಿಯೆ ಅದು. ಇಡೀ ಕಾಲೇಜಿನ ಹುಡುಗರೆಲ್ಲಾ ಅಲ್ಲೇ ಇರ್ತಿದ್ರು. ಬಿಸಿ ಬಿಸಿ ಸುದ್ದಿಯ ಕುತೂಹಲದಲ್ಲಿ.!! ವೈಯಕ್ತಿವಾಗಿ ನನಗೆ ಇಂತಹ ಪ್ರಬುದ್ಧವಲ್ಲದ ನಡತೆಗಳು ಇಷ್ಟವಿಲ್ಲದಿದ್ದರೂ, ಮೊದಲನೇ ವರ್ಷ ಏನಿರಬಹುದೆಂದು ನೋಡಲು ಹೋಗಿದ್ದೆ. ಯಾರೋ ಒಬ್ಬಾತ ಸಾವಿರಾರು ರೂ ಕೊಟ್ಟು ಗುಲಾಬಿ ಖರೀದಿಸಿ, ಒಂದು ಹುಡುಗಿಗೆ ಕೊಟ್ಟ.. ಮತ್ತೊಬ್ಬ ತನ್ನ ಪ್ರೆಯಸಿಗೆಂದು ಯಾವುದೋ ಹಿಂದಿ ಹಾಡನ್ನು ಅರ್ಪಣೆ ಮಾಡಿದ್ದ..ಇಂತಹವು ಇನ್ನೂ ಹಲವಿದ್ದವು.. ಆನಂತರ ನಾನು ಮನೆಗೆ ವಾಪಸ್ಸಾದೆ..


ಮಾರನೆ ದಿನವೇ, ಎಲ್ಲ ಸ್ಪರ್ಧೆಗಳೂ ಪ್ರಾರಂಭವಾಗಲಿದ್ದವು..ಅವತ್ತು ನನ್ನ ಸ್ಪರ್ಧೆಗಳಾವುವೂ ಇರಲಿಲ್ಲ.. ಸಂಗೀತ ಸ್ಪರ್ಧೆಗಳು, ನಾಟಕ, ರಸಪ್ರಶ್ನೆ, ನೃತ್ಯ ಮುಂತಾದ ಸ್ಪರ್ಧೆಗಳಿದ್ದವು.. ಅವತ್ತಿನ ಏಕಪಾತ್ರಾಭಿನಯದಲ್ಲಿ ಒಬ್ಬ ಹುಡುಗ ನನ್ನ ದೃಷ್ಟಿ ಸೆಳೆದ. ಹೆಸರು "ಧೀಮಂತ". ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡಿದ್ದ. ಅವನ ರಭಸ ಸಂಭಾಷಣೆ,ವಾಕ್ಪ್ರವಾಹ ಎಲ್ಲವೂ ಉತ್ತಮವಾಗಿತ್ತು.. ಸ್ಪರ್ಧೆಯ ನಂತರ ನಾನೇ ಹೋಗಿ ಮಾತನಾಡಿಸಿದೆ. ಶಿವಮೊಗ್ಗದ JNNC ಕಾಲೇಜಿನ ವಿದ್ಯಾರ್ಥಿ.ಸ್ವಲ್ಪ ಸಂಭಾಷಣೆಯಲ್ಲಿಯೇ ಅವನೂ ಒಬ್ಬ ರಾಷ್ಟ್ರೀಯತೆಯ ಚಿಂತಕ ಅನ್ನೋದು ತಿಳಿಯಿತು. ನನಗಂತೂ ಅಷ್ಟು ಸಾಕಾಗಿತ್ತು ಅವನ ಸಖ್ಯಕ್ಕೆ. ಅವತ್ತು ಆರಂಭವಾದ ಆ ಸ್ನೇಹ ಇನ್ನೂ ದೃಢವಾಗಿದೆ. ವರ್ಷಕ್ಕೊಮ್ಮೆ ಅಷ್ಟೇ ನಾವು ಭೇಟಿಯಗುತ್ತಿದ್ದರೂ ಸ್ನೇಹದ ಪ್ರಖರತೆ ಮಾತ್ರ ನಿರಂತರವಾಗಿದೆ..!!

ಮರುದಿನ ನನ್ನ ಭಾಷಣ ಸ್ಪರ್ಧೆಗಳಿದ್ದವು.ಬೆಳಿಗ್ಗೆ ಚರ್ಚಾ ಸ್ಪರ್ಧೆ ಇತ್ತು.. ಆಗ ಆರ್ಥಿಕ ಹಿಂಜರಿತ ಜೋರಾಗಿದ್ದಿದ್ದರಿಂದ, ಅದರ ವಿಷಯವಾಗಿಯೇ ಇತ್ತು. ಧೀಮಂತನೂ ಸ್ಪರ್ಧಿಯಾಗಿ ಬಂದಿದ್ದ..ಸ್ಪರ್ಧೆಯ ಕೊನೆಗೆ ಧೀಮಂತನಿಗೆ ಮೊದಲ ಬಹುಮಾನ, ನನಗೆ ದ್ವಿತೀಯ ಬಹುಮಾನ ಬಂದಿತ್ತು. ಅದಾದ ನಂತರ ಪುಸ್ತಕ ವಿಮರ್ಶೆಯ ಸ್ಪರ್ಧೆಯಿತ್ತು.. ಇಲ್ಲಿ ಇನ್ನೊಬ್ಬ ಅದ್ಭುತ ಗೆಳೆಯ ದೊರಕಿದ. ಹೆಸರು "ಗಣೇಶ ಕೊಪ್ಪಳತೋಟ".ದಾವಣಗೆರೆಯ UBDT ಕಾಲೇಜಿನ ವಿದ್ಯಾರ್ಥಿ. ಅದ್ಭುತ ಕನ್ನಡ ಪಂಡಿತ. ಛಂದೋಬದ್ಧವಾದ ಪದ್ಯಗಳನ್ನು ಬರೆಯುವುದರಲ್ಲಿ ನಿಸ್ಸೀಮ. ಅವಧಾನ ಕಳೆಯಲ್ಲಿಯೂ ಜ್ಞಾನ ಉಳ್ಳ ವ್ಯಕ್ತಿ.ಅವನ ಭೇಟಿಯ ನಂತರವೇ ನಾನೂ ಷಟ್ಪದಿಯಂತಹ ಛಂದೋಬದ್ಧ ಪ್ರಯೋಗಗಳನ್ನು ಶುರು ಮಾಡಿದ್ದು. ಆ ಸ್ಪರ್ಧೆಯಲ್ಲಿ ಗಣೇಶನಿಗೆ ಮೊದಲ ಬಹುಮಾನ, ನನಗೆ ದ್ವಿತೀಯ ಮತ್ತು ಧೀಮಂತನಿಗೆ ತೃತೀಯ ಬಹುಮಾನ ಲಭಿಸಿತ್ತು..

ಬಹುಮಾನಗಳ ವಿತರಣೆ, ಆ ದಿನ ಸಂಜೆಗೆ ನಡೆಯೋದಿತ್ತು.. ಎರಡು ದಿನಗಳ ತಿರುಗಾಟದಿಂದ ವಿಪರೀತ ತಲೆನೋವು ಬೇರೆ. ಗ್ರಂಥಾಲಯದ ಓದುವ ಕೋಣೆಯಲ್ಲಿ ನಾನು ತಲೆಯೂರಿ ಮಲಗಿದ್ದೆ. ಪಕ್ಕದಲ್ಲಿದ್ದ ದೊಡ್ಡ ಮೈದಾನದಲ್ಲಿ ಸಂಜೆಯ ವರ್ಣರಂಜಿತ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿತ್ತು..


[ ಮುಂದುವರೆಯುವುದು....]

Tuesday, August 13, 2013

ಕಾಲೇಜು ದಿನಗಳು...! [ಭಾಗ ೨]

ಎರಡನೇ ಸೆಮಿಸ್ಟರ್ ನಲ್ಲಿ ಕೊಠಡಿಗಳು ಬದಲಾಗಿದ್ದವು. ಬಯೋಮೆಡಿಕಲ್ ವಿಭಾಗದ, ಅಥವಾ ಸಿವಿಲ್ ವಿಭಾಗದ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಇದು ಕೆಮಿಸ್ಟ್ರಿ ಸೈಕಲ್ ಆಗಿದ್ದರಿಂದ, ಈ ಸೆಮಿಸ್ಟರ್ ನಲ್ಲಿ ಕಂಪ್ಯೂಟರ್ ಸೈನ್ಸ್ ನ ವಿಷಯವೂ ಇತ್ತು.
ಸತ್ಯವಾಗಲೂ, ನನಗೆ ಕಂಪ್ಯೂಟರ್ ನ ಬಗ್ಗೆ ಗಂಧ-ಗಾಳಿಯೂ ಗೊತ್ತಿರಲಿಲ್ಲ. ಬಹುಶಃ ಅನೇಕರು ನಗಬಹುದು, ನಾನು ಇಂಜಿನಿಯರಿಂಗ್ ಸೇರಿದಾಗ, ನನಗೆ ಕಂಪ್ಯೂಟರ್ ಅನ್ನು ಆನ್ ಮಾಡೋದು ಹೇಗೆ ಅನ್ನೋದು ಕೂಡ ಗೊತ್ತಿರಲಿಲ್ಲ. ಆದರೂ ಸಿ.ಇ.ಟಿ ನಲ್ಲಿ ಅದ್ಹೇಗೆ "ಕಂಪ್ಯೂಟರ್ ಸೈನ್ಸ್" ಆಯ್ಕೆ ಮಾಡಿದ್ದೇನೋ ಗೊತ್ತಿಲ್ಲ..

ಮೊತ್ತಮೊದಲ ಗಣಕಯಂತ್ರದ ಲ್ಯಾಬ್ ನಲ್ಲಿ, ಒಂದು ಸಣ್ಣ "word document" ತಯಾರಿಸಲು ಹೇಳಿದರು. ನನ್ನ ಜೊತೆಗಿದ್ದವರು ಪಟಪಟನೆ ಕೀಪ್ಯಾಡ್ ಕುಟ್ಟುತ್ತಿದ್ದರೆ, ನನಗೆ ಏನೂ ಮಾಡಲು ತೋಚದೆ ಸುಮ್ಮನೆ ಕುಳಿತಿದ್ದೆ.. ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಆತ್ಮೀಯ ಗೆಳೆಯ "ಹರ್ಷ", ಅದನ್ನು ಆನ್ ಮಾಡಿಕೊಟ್ಟು, ಹೇಗೆ ಡಾಕ್ಯುಮೆಂಟ್ ಮಾಡೋದು ಅಂತ ಹೇಳಿಕೊಟ್ಟ. ಆದರೂ ಅಂಬೆಗಾಲಿಡುವ ಮಗುವಿನಂತೆ ಒಂದೊಂದೇ ಅಕ್ಷರಗಳನ್ನು ಒತ್ತುತ್ತಾ ಹೇಗೋ ಮುಗಿಸಿದೆ. ಆದರೆ ಅವತ್ತೇ ಭಯ ಆವರಿಸಿತು. ಏನೂ ಗೊತ್ತಿಲ್ಲದ ಈ ಕಂಪ್ಯೂಟರ್ ವಿಷಯದಲ್ಲೇ ಇನ್ನು ಮುಂದಿನ ೩ ವರ್ಷ ಕಳೆಯಬೇಕಲ್ಲ..ಇದು ನನ್ನಿಂದ ಸಾಧ್ಯವೇ, ಎಂಬ ದಿಗಿಲು. ಅವತ್ತು ಮನೆಗೆ ಹೋಗಿ ಮಂಕಾಗಿ ಕೂತಿದ್ದೆ. ಅಕ್ಷರಶಃ ಕಣ್ಣು ತುಂಬಾ ನೀರಿತ್ತು.. ಆದರೆ ಸ್ನೇಹಿತರೆಲ್ಲರ ಧೈರ್ಯದ ಮಾತುಗಳಿಂದ ಸ್ವಲ್ಪ ಸಮಾಧಾನವಾಗಿತ್ತು..
ಆದರೆ, ನಾನು ಕಂಪ್ಯೂಟರ್ ಅನ್ನು ಹೆಚ್ಚು ಅಭ್ಯಾಸ ಮಾಡಬೇಕಾದ್ದು ಅನಿವಾರ್ಯವಾಗಿತ್ತು. ಆ ಮೊದಲನೇ ಇಂಟರ್ನಲ್ ನಲ್ಲಿ ಕಂಪ್ಯೂಟರ್ ವಿಷಯದಲ್ಲಿ ನನಗೆ ಬಂದ ಅಂಕಗಳು ೮.. ತರಗತಿಯ ಟಾಪರ್ ಆಗಿ, ಇಂಥಾ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲ. ಅವತ್ತೇ ಕಂಪ್ಯೂಟರ್ ಒಂದನ್ನು ಖರೀದಿಸಲು ತೀರ್ಮಾನಿಸಿದೆ..
ಡೆಸ್ಕ್ಟಾಪ್ ತೊಗೊಂಡ್ರೆ ಮನೆತುಂಬಾ ಜಾಗ ಹಿಡಿಯುತ್ತೆ ಅಂತ, ಲ್ಯಾಪ್-ಟಾಪ್ ಅಂತ ನಿರ್ಧರಿಸಿದೆ. ಬೆಂಗಳೂರಿನಲ್ಲಿರುವ ನನ್ನ ಭಾವ [ ಶ್ರೀ.ಜಯತೀರ್ಥ ಕಟ್ಟಿ ], ಆ ವಿಷಯವಾಗಿ ಬಹಳ ಸಹಕರಿಸಿದರು. ಕೊನೆಗೂ ಅವರ ಸಹಾಯದಿಂದ "DELL Vostro" ಲ್ಯಾಪ್-ಟಾಪ್ ತೊಗೊಂಡು ಮನೆಗೆ ಬಂದೆ. 120 GB, 1 GB ನಷ್ಟು configuration  ಇದ್ದ ಆ ಗಣಕಯಂತ್ರ, ಆಗ ನನ್ನ ಪಾಲಿನ ಸಕಲವೂ ಅದೇ ಆಗಿತ್ತು.. ಆಗ ಕೇವಲ ತರಗತಿಯಲ್ಲಿ ಹೇಳಿಕೊಟ್ಟ ಪ್ರೊಗ್ರಾಮ್ ಗಳನ್ನು ಕಲಿಯಲು ಪ್ರಾರಂಭಿಸಿದೆ..
ಆಗ, ಕಂಪ್ಯೂಟರ್ ವಿಷಯವನ್ನು ಚೆನ್ನಾಗಿ ಹೇಳಿಕೊಟ್ಟವನು, "ಸಂದೀಪ ಎಸ್.ಎಚ್"..ಅವನಿಗೆ ಆ ವಿಷಯದ ಒಳಹೊರಗು ಬಹುತೇಕ ಗೊತ್ತಿತ್ತು..ಕಾಲೇಜಿನಲ್ಲಿ ಸಮಯ ಸಿಕ್ಕಾಗಗಲೆಲ್ಲ ನನಗೆ ಪ್ರೊಗ್ರಾಮ್ ಗಳನ್ನೂ ಅರ್ಥ ಮಾಡಿಸುತ್ತಿದ್ದ.. ಅವನ ಆ ಬೋಧನೆ ಬಹಳಷ್ಟು ಮನದಟ್ಟು ಮಾಡಿತು..!!

ಈ ಸಂದರ್ಭದಲ್ಲಿ ನಾನು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೇಳಲೇಬೇಕು..
"ಕೃಷ್ಣ ಹುಯಿಲಗೋಳ್"-ನಾನೆಂದೂ ಮರೆಯಲಾಗದ ವ್ಯಕ್ತಿಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಕೃಷ್ಣ ಅರ್ಜುನನ ಸಾರಥಿಯಾದಂತೆ, ನನ್ನ ಇಂಜಿನಿಯರಿಂಗ್ ಬದುಕಿನಲ್ಲಿ ಈ ಕೃಷ್ಣ ನನ್ನ ಮಾರ್ಗದರ್ಶಕನಾಗಿದ್ದ.. ಹಾಗೆ ನೋಡೋದಾದ್ರೆ, ಇವನು ನನಗೆ ದೂರದ ಸಂಬಂಧಿಯಾಗಿದ್ದರೂ, ಒಂದೇ ಊರಿನಲ್ಲಿದ್ದರೂ, ಯಾವುದೋ ಕೆಲವು ಸಮಾರಂಭಗಳಲ್ಲಷ್ಟೇ ಭೇಟಿಯಾಗುತ್ತಿತ್ತು. ಅವನ ಆತ್ಮೀಯ ಒಡನಾಟ ಶುರುವಾಗಿದ್ದೇ ಬಾಪೂಜಿ ಕಾಲೇಜ್ ಸೇರಿದ ನಂತರ..
ಇವನದು "Information Science" ವಿಭಾಗ. ವಿಭಾಗ ಬೇರೆ ಇದ್ದರೂ, ವಿಷಯಗಳು ಬಹುತೇಕ ವಿಷಯಗಳು ಒಂದೇ ಆಗಿದ್ದರಿಂದ, ನನ್ನ ಪಠ್ಯಪುಸ್ತಕಗಳ ಪ್ರಾಯೋಜಕನೂ ಅವನೇ ಆಗಿದ್ದ.. ಅದಕ್ಕಾಗಿ ಸದಾ ಅವನಿಗೆ ಋಣಿ..ನನ್ನ ಲ್ಯಾಪ್-ಟಾಪ್ ಗೆ ಬೇಕಾದ ಎಲ್ಲ ತಂತ್ರಾಂಶಗಳನ್ನು ಅದರಲ್ಲಿ ಅಳವಡಿಸಿಕೊಟ್ಟಿದ್ದೂ ಕೃಷ್ಣನೇ. ತೊಂದರೆ ಬಂದಾಗೆಲ್ಲಾ ಅವನ ಮನೆಗೆ ಓಡಿಹೊಗುತ್ತಿದ್ದೆ..

ಎಲ್ಲಕ್ಕಿಂತ ಮುಖ್ಯವಾಗಿ, ನನಗೆ ಕನ್ನಡದ ಬರವಣಿಗೆಯಲ್ಲಿ ಈ ಮಟ್ಟಿಗಿನ ಉತ್ಸಾಹಕ್ಕೆ ಕಾರಣನೂ ಇವನೇ.. ನಮ್ಮ ಕೃಷ್ಣ ಅಧ್ಬುತ ಕವಿ. ಪ್ರಣಯದ,ಪ್ರಕೃತಿಯ ವರ್ಣನಾತ್ಮಕವಾದ ಅದೆಷ್ಟೋ ಕವಿತೆಗಳನ್ನು ಬರೆದಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕನ್ನಡ ಸಾಹಿತ್ಯವನ್ನು ವಿಮರ್ಶಿಸುವ ತಾಕತ್ತೂ ಇದೆ.. ನಾನು ಕನ್ನಡದ ಅಭಿಮಾನಿಯಾಗಿದ್ದೆನಾದರೂ, ಹೀಗೆ ಕಥೆ,ಲೇಖನ, ಕವನಗಳನ್ನೂ ಎಂದೂ ಬರೆದವನಲ್ಲ.. ಹಾಗೆ ಬರೆಯಲು ಸ್ಫೂರ್ತಿಯೇ ಈ ಕೃಷ್ಣ..ಕಾಲೇಜು ಸೇರುವಾಗಿನಿಂದ ಹಿಡಿದು, ಈಗಲೂ ಸದಾ ನನ್ನ ಬೆಂಬಲಕ್ಕೆ ನಿಲ್ಲುವ ವ್ಯಕ್ತಿ ಈ ಕೃಷ್ಣ..

ಈ ಕೃಷ್ಣನ ಜೊತೆ ಮತ್ತೊಬ್ಬ ಹಿರಿಯ ವಿದ್ಯಾರ್ಥಿಯ ಪರಿಚಯವಾಯಿತು.. ಅವನ ಹೆಸರು "ಮಿತೇಶ್".
ಮಿತೇಶ್ ನನ್ನದೇ ಕಂಪ್ಯೂಟರ್ ವಿಭಾಗದಲ್ಲಿ, ನನಗಿಂತ ಒಂದು ವರ್ಷ ಹಿರಿಯ ವಿದ್ಯಾರ್ಥಿ.. ಅವನು, ನಮ್ಮ ಕೃಷ್ಣ ಒಳ್ಳೆಯ ಗೆಳೆಯರು. ಅಲ್ಲದೆ, ನನ್ನದೇ ವಿಭಾಗದ ವಿದ್ಯಾರ್ಥಿಯ ಪರಿಚಯವಾಗಿದ್ದು ನನಗೂ ತುಂಬಾ ಸಂತಸ ತಂದಿತ್ತು. ಮುಂದೆ ಕಂಪ್ಯೂಟರ್ ವಿಭಾಗಕ್ಕೆ ಹೋದ ಮೇಲೆ, ಈ ಮಿತೇಶ್ ನ ಸಹಾಯವೂ ಅಪಾರ..!!

ಅಂದಹಾಗೆ, ಇವನ ಪರಿಚಯ ಆಗಲಿಕ್ಕೆ ಕಾರಣ ನಮ್ಮ ಕಾಲೇಜಿನ ಒಂದು ಸಾಂಸ್ಕೃತಿಕ ಹಬ್ಬ "ದವನ".
ದವನ ಎಂದ ತಕ್ಷಣ ನನಗಂತೂ ಮೈ ನವಿರೇಳುತ್ತದೆ. ಕೇವಲ ನನಗಷ್ಟೇ ಅಲ್ಲ, ಅದರಲ್ಲಿ ಪಾತ್ರವಹಿಸಿದ ಎಲ್ಲರಿಗೂ ದವನ ಅಂದರೆ ಮರೆಯಲಾಗದ ನೆನಪುಗಳ ಭಂಡಾರ..ದವನದಿಂದ ನಾವು ಕಲಿತಿದ್ದು ಅದೆಷ್ಟೋ, ಸ್ನೇಹಿತರಾದವರೆಷ್ಟೋ, ಮಾಡಿದ ತಮಾಷೆಯೇಷ್ಟೋ.,ಅಬ್ಬಾ..!!
ಅದರ ಬಗ್ಗೆನೇ ಮುಂದಿನ ಭಾಗದಲ್ಲಿ ಪೂರ ಹೇಳ್ತೀನಿ...!![ ಮುಂದುವರೆಯುವುದು....]

Monday, August 5, 2013

ಕಾಲೇಜು ದಿನಗಳು...! [ಭಾಗ ೧]

[ ಕೇವಲ ನಾಲ್ಕು ಸೆಕೆಂಡುಗಳಂತೆ ಸಂದು ಹೋದ ಇಂಜಿನಿಯರಿಂಗ್ ನ ಈ ನಾಲ್ಕು ವರ್ಷಗಳು, ಅನನ್ಯ ಅನುಭವದ ಗೂಡು. ಹೀಗೊಮ್ಮೆ ಅತೀತಕಾಲದೆಡೆ ತಿರುಗಿನೋಡಿ, ಸಾಗಿಬಂದ ರಸ್ತೆಯಲ್ಲಿ ಅವಿತಿಟ್ಟುಕೊಂಡಿರುವ ನೆನಪುಗಳನ್ನೆಲ್ಲ ಕೆದಕಿ ಹೊರತೆಗೆದು ನೀರು ಚಿಮುಕಿಸಿದಾಗಲೆಲ್ಲಾ, ಮತ್ತೆ ಮತ್ತೆ ಅನಿರ್ವಚನೀಯ ಆನಂದವೊಂದು ಮೊಳಕೆಯೊಡೆಯುತ್ತದೆ. ಆ ಮೊಳಕೆಯೊಡೆದ ಆನಂದದ ನೆರಳಿನಲ್ಲಿ ಕೂತು, ಈ ನಾಲ್ಕುವರ್ಷಗಳನ್ನು ನೋಡಿದರೆ, ಪ್ರತಿದಿನ, ಪ್ರತಿಕ್ಷಣವೂ ವಿಶಿಷ್ಟವಾಗಿ ಗೋಚರಿಸುತ್ತವೆ.
ಆ ಅವಿಸ್ಮರಣೀಯ ಘಟನಾವಳಿಗಳ ತುಣುಕುನೋಟವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನವಿದು..
ಈ ನಾಲ್ಕುವರ್ಷಗಳ ಅವಧಿಯಲ್ಲಿ ಜೊತೆಗಿದ್ದು ಹೆಗಲುಕೊಟ್ಟ ಎಲ್ಲರಿಗೂ ಈ ಸರಣಿಲೇಖನ ಅರ್ಪಣೆ..
ಈ ಲೇಖನಮಾಲೆಯ ಓದುವಿಕೆಯಿಂದ, ನನ್ನ ಗೆಳೆಯರ ವಿದ್ಯಾಥಿಜೀವನದ ನೆನಪುಗಳು ಮನದಾಳದಲ್ಲಿ ಮರುಕಳಿಸಿದರೆ, ಅದೇ ನನ್ನ ಬರಹದ ಸಾರ್ಥಕತೆ.!! ]

-------------------------------------------------------------------------------------------------------------

ಅವತ್ತು ಸೆಪ್ಟೆಂಬರ್ 4-2008. ಬಾಪೂಜಿ ಕಾಲೇಜಿನಲ್ಲಿ ನನ್ನ ಇಂಜಿನಿಯರಿಂಗ್ ವ್ಯಾಸಂಗ ಪ್ರಾರಂಭವಾದ ದಿನವದು. ಬೆಳಗಿನ ನಸುಕಿನಲ್ಲಿ, ಭವಿಷ್ಯದ  ಹೊಸ ಕನಸುಗಳ ಬ್ಯಾಗನ್ನು ಹೊತ್ತು ಬಸ್ಸಿಗಾಗಿ ದಾರಿ ಕಾಯುತ್ತಿದ್ದ ಕ್ಷಣ ಇನ್ನೂ ಸ್ಮೃತಿಪಟಲದಲ್ಲಿದೆ.. [ ಆಗಿನ್ನೂ ನಾನು 'ಹ್ಯಾಪಿಡೇಸ್' ಸಿನೆಮಾ ನೋಡಿರಲಿಲ್ಲ. ಅಕಸ್ಮಾತ್ ನೋಡಿದ್ದಿದ್ರೆ ಇನ್ನೂ ಬಗೆಬಗೆಯ  ಕನಸುಗಳೂ ಇರ್ತಿದ್ವೇನೋ..!!].. ಅಂತೂ ನನ್ನ ವಿದ್ಯಾರ್ಥಿಜೀವನದ ಮತ್ತೊಂದು ಮಜಲಿನ ದರವಾಜು ನನ್ನ ಬರುವಿಕೆಗಾಗಿ ಕಾದು ನಿಂತಿತ್ತು..

ಆ ಬಸ್ಸನ್ನು ನಾನು ಮರೆಯುವಂತೆಯೇ ಇಲ್ಲ.. ನಾನೊಬ್ಬನೇ ಅಲ್ಲ, ಹರಿಹರದಿಂದ ಓಡಾಡುವ ಯಾವ  ಇಂಜಿನಿಯರಿಂಗ್ ವಿದ್ಯಾರ್ಥಿಯೂ ಆ ಬಸ್ಸನ್ನ ಮರೆಯಲು ಸಾಧ್ಯವಿಲ್ಲ.  'ಚಿಕ್ಕಬಿದರಿ' ಗ್ರಾಮದಿಂದ ದಾವಣಗೆರೆಗೆ ಹೋಗುವ ನೀಲಿ-ಬಿಳಿ ಬಣ್ಣ ಮಿಶ್ರಿತ, ಗ್ರಾಮಾಂತರ ಸಾರಿಗೆಯ ಬಸ್ಸದು. ಇಂಜಿನಿಯರಿಂಗ್ ಹುಡುಗರ ಮತ್ತು ಸಾರಿಗೆ ಸಂಸ್ಥೆಯವರ ಒಪ್ಪಂದದ ಮೇರೆಗೆ, ಅದೊಂದು ಬಸ್ಸು ಬೆಳಗಿನ ಮೊದಲ ಟ್ರಿಪ್ ಅನ್ನು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿತ್ತು.. ಪ್ರತಿದಿನ ಸುಮಾರು 7-15 ರ ಹೊತ್ತಿಗೆ ಹರಿಹರದ ಎಲ್ಲ ಅಭಿಯಂತರರನ್ನು ತುಂಬಿಸಿಕೊಂಡು, ನೇರ ನಮ್ಮ ಬಾಪೂಜಿ ಕಾಲೇಜಿನ ಗೇಟಿನ ಬಳಿಗೆ ನಿಲ್ಲುತ್ತಿತ್ತು.. ಹೀಗಾಗಿಯೇ, ಆ ಬಸ್ಸನ್ನೇ ಹಿಡಿಯಲು ಶತಾಯ-ಗತಾಯ ಪ್ರಯತ್ನಿಸುತ್ತಿದ್ದೆವು.. ಜೊತೆಗೆ ಆ ಬಸ್ಸು ಹೋಗುವಾಗ, ನಮ್ಮ ಮನೆಯ ಹತ್ತಿರದ ಮುಖ್ಯರಸ್ತೆಯಲ್ಲಿಯೇ ಹೋಗಬೇಕಾದ್ದರಿಂದ, ನನಗೆ ಬಸ್ಸು ಹಿಡಿಯುವುದು ಅಷ್ಟೊಂದು ಕಷ್ಟವಾಗಿರಲಿಲ್ಲ.. ಆದರೂ ಈ ಬಸ್ಸು ಹಿಡಿಯುವ ಉತ್ಸಾಹ ಮೊದಲೆರಡು ವರ್ಷದಲ್ಲಿದ್ದಂತೆ ಕೊನೆವರೆಗೂ ಇರಲಿಲ್ಲ. 5 ನೆ ಸೆಮಿಸ್ಟರ್ ನಿಂದಂತೂ ಒಮ್ಮೆಯೂ ಆ ಬಸ್ಸನ್ನು ಹತ್ತಲೇ ಇಲ್ಲ.. ಮನಸ್ಸಿಗೆ ಬಂದ ಸಮಯಕ್ಕೆ, ಸಿಕ್ಕ ಬೇರೆ ಬಸ್ಸನ್ನು ಹಿಡಿದು ಹೋಗುವುದೇ ರೂಢಿಯಾಗಿತ್ತು.. ಇದು ನನ್ನೊಬ್ಬನ ಪಾಡಲ್ಲ... ಹರಿಹರದ ಎಲ್ಲ ವಿದ್ಯಾರ್ಥಿಗಳೂ ಎರಡು ವರ್ಷಗಳ ನಿರಂತರ ಓಡಾಟದಿಂದ ಬೇಸತ್ತು ಬದಲಾಗುವ ಪರಿಯಿದು..!!!


ಮೊದಲನೇ ದಿನ, ಕಾಲೇಜಿನಲ್ಲಿ ಕಾಲಿಟ್ಟಾಗ ನನ್ನ ತರಹವೇ, ಯಾವುದೋ ಲೋಕಕ್ಕೆ ಬಂದಂತೆ ದಿಗ್ಭ್ರಾಂತರಾಗಿ ನಿಂತಿದ್ದ ಹುಡುಗ-ಹುಡುಗಿಯರ ದಂಡೇ ನೆರೆದಿತ್ತು.. ಅಲ್ಲೊಂದಿಷ್ಟು ಪರಿಚಯ, ನಗುವಿನ ವಿನಿಮಯ ಹಾಗೇ ನಡೆದಿತ್ತು..
ಅಲ್ಲಿನ ಸಿಬ್ಬಂದಿಯೊಬ್ಬನ ಸೂಚನೆಯ ಮೇರೆಗೆ, ಎರಡನೇ ಅಂತಸ್ತಿನಲ್ಲಿದ್ದ, "ಸೆಮಿನಾರ್ ಹಾಲ್" ಗೆ ಹೋಗಿ ಕುಳಿತೆವು..ಹಾಗೆ ನೋಡೋದಾದ್ರೆ, ಹರಿಹರದಿಂದ ಬಂದಿದ್ದ ಒಂದಿಷ್ಟು ಗೆಳೆಯರನ್ನು ಬಿಟ್ರೆ, ಉಳಿದವರೆಲ್ಲ ಅಪರಿಚಿತರೇ. ಯಾರೊಬ್ಬರ ಮುಖಪರಿಚಯ ಕೂಡ ಇರಲಿಲ್ಲ..!! ಹಾಗೇ ಒಮ್ಮೆ ಎಲ್ಲ ಕಡೆ ಕಣ್ಣು ಹಾಯಿಸುತ್ತಿರುವಾಗಲೇ, ಒಮ್ಮೆಲೇ ಎಲ್ಲರೂ ಎದ್ದು ನಿಂತರು.. ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾಗಿದ್ದ ನಮ್ಮೆಲ್ಲರನ್ನೂ ಉದ್ದೇಶಿಸಿ ಮಾತನಾಡಲು, ಕಾಲೇಜಿನ ಪ್ರಾಂಶುಪಾಲರು ಬರುತ್ತಿರುವುದು ಗೋಚರಿಸಿತು..

"ಡಾ.ಬಿ.ಟಿ.ಅಚ್ಯುತ" -- ಬಹುಶಃ ಇಂಥಾ ಒಬ್ಬ ಅದ್ಭುತ ಪ್ರಾಂಶುಪಾಲರನ್ನು ನಾನು ಹಿಂದೆಯೂ ನೋಡಿಲ್ಲ, ಮುಂದೆಯೂ ನೋಡಲು ಸಾಧ್ಯವಿಲ್ಲ.. ಸುಮಾರು ೬೫ ರ ಮೇಲಿನ ವಯಸ್ಸಾಗಿದ್ದರೂ, ಅದೇ ತಾರುಣ್ಯ,ಲವಲವಿಕೆ, ಸದಾ ಮುಖದಲ್ಲೊಂದು ಮೃದುನಗೆ, ಯಾವುದೇ ವರ್ಷದ,ಯಾವುದೇ ವಿಭಾಗದ ವಿದ್ಯಾರ್ಥಿಯಾಗಿರಲಿ ಎಲ್ಲರೊಂದಿಗೂ ಅಷ್ಟೇ ಆತ್ಮೀಯತೆಯ ಒಡನಾಟ, ಯಾರೊಬ್ಬರಿಗೂ ಕಟುವಾಗಿ ನಿಂದಿಸದ ಸೌಮ್ಯತೆ, ವಿದ್ಯಾರ್ಥಿಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ಪ್ರಾಂಶುಪಾಲರು ಬಹುಬೇಗ ಎಲ್ಲರನ್ನೂ ಆಕರ್ಷಿಸುತ್ತಿದ್ದರು.. ಪ್ರಿನ್ಸಿಪಾಲ್ ಅಂದ್ರೆ ಹೇಗಿರಬೇಕು ಅಂತ ಯಾರಾದರೂ ಕೇಳಿದರೆ, ಬಹುಶಃ ನಾನು ಹೇಳುವ ಉತ್ತರ ಒಂದೇ, "ಅಚ್ಯುತ್ ಸರ್.", ಬರೀ ನಾನೊಬ್ಬನೇ ಅಲ್ಲ, ಎಲ್ಲಾ ವಿದ್ಯಾರ್ಥಿಗಳೂ, ಎಲ್ಲ ಉಪನ್ಯಾಸಕರೂ ಅಭಿಪ್ರಾಯವೂ ಇದೇ.. ಅಂದ್ರೆ ಅವರ ವ್ಯಕ್ತಿತ್ವದ ಔನ್ನತ್ಯ ಎಷ್ಟು ಅನ್ನೋದನ್ನು ಯಾರಾದ್ರೂ ಊಹಿಸಬಹುದು..!!!


ಆ ಮೊದಲನೇ ದಿನ, ಪ್ರಾಂಶುಪಾಲರು, ನಮ್ಮೆಲ್ಲರಿಗೂ ಸ್ವಾಗತ ಕೋರಿ, ಇಂಜಿನಿಯರಿಂಗ್ ನ ವೈಶಿಷ್ಟ್ಯ ಅದರ ಶಿಸ್ತು, ಬದ್ಧತೆ, ೪ ವರ್ಷಗಳ ಪರಿಶ್ರಮ ಇವೆಲ್ಲದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು..
ಅದಾದ ಬಳಿಕ, ಎಲ್ಲ ವಿದ್ಯಾರ್ಥಿಗಳನ್ನೂ ಸೇರಿಸಿ, ಇಡೀ ಕಾಲೇಜನ್ನು ಒಮ್ಮೆ ಸುತ್ತಿಸಿಕೊಂಡು ಬರಲು ಹಿರಿಯ ಉಪನ್ಯಾಸಕರು ಆರಂಭಿಸಿದರು..

ನನ್ನ ಮೊದಲ ಸ್ನೇಹಿತ ಸೃಷ್ಟಿಯಾಗಿದ್ದು ಇಲ್ಲೇ..ಹೆಸರು 'ಅನೂಪ'. ನನಗೆ ಅವನ ಪರಿಚಯವಿಲ್ಲದಿದ್ದರೂ, ಅವನಿಗೆ ನನ್ನ ಗುರುತಿತ್ತು. ಕಾರಣ, ಪ್ರೌಢಶಾಲೆಯಲ್ಲಿ ನನ್ನ ಗೆಳೆಯನಾಗಿದ್ದ ಒಬ್ಬ, ಅವನಿಗೆ ಪದವಿಪೂರ್ವ ತರಗತಿಯಲ್ಲಿ ಗೆಳೆಯನಾಗಿದ್ದರಿಂದ, ನನ್ನ ಮಾಹಿತಿಯೆಲ್ಲವೂ ಅವನಿಗೆ ತಿಳಿದಿತ್ತು.. ಹಾಗೆ ಕಾಲೇಜಿನ ಸುತ್ತ ಸುತ್ತುತ್ತಿರುವಾಗ ಅವನಾಗೇ ಬಂದು, "ಹೇ, ನೀನು ಭೀಮ ಆಲ್ವಾ?" ಅಂತ ಪ್ರಶ್ನಿಸಿದ. ಅರೆಕ್ಷಣ ಅವಾಕ್ಕಾದೆ..!! ಆನಂತರ ಅವನೇ ತನ್ನ ಪರಿಚಯವನ್ನು ಮಾಡಿಕೊಂಡ ಮೇಲೆ ತುಸು ಖುಷಿಯಾಯಿತು. [ ಬೇರೆ ಊರಲ್ಲೆಲ್ಲ ನಮ್ಮ ಕೀರ್ತಿಪತಾಕೆ ಹಾರಾಡ್ತಿದೆ ಅಂದ್ರೆ ಖುಷಿ ಆಗಲ್ವೇ.!!  ]..ಹಾಗೆ ಮಾತಾಡುತ್ತಾ, ಸುಮಾರು ೬೦ ಎಕರೆ ವಿಸ್ತೀರ್ಣದಲ್ಲಿ ಇರುವ ಕಾಲೇಜ್ ಕ್ಯಾಂಪಸ್, ವಿವಿಧ ವಿಭಾಗಗಳ ಕಟ್ಟಡಗಳನ್ನು ನೋಡುತ್ತಲೇ ಸಾಗಿದ್ದೆ...
ಆನಂತರ ನಿಗದಿತವಾದ ನಮ್ಮ ಕೊಠಡಿಗೆ ತೆರಳಿದೆವು..ಅದೂ ಹಳೆಯ ಟೆಕ್ಸ್ಟೈಲ್ ಬ್ಲಾಕ್ ನಲ್ಲಿ ಇದ್ದ ಕೊಠಡಿ.!!!

ನಮ್ಮದು "ಐ" ಸೆಕ್ಷನ್.. ಮೊದಲನೇ ವರ್ಷದ ಹತ್ತು ತರಗತಿಗಳಲ್ಲಿ ನಮ್ದು ಒಂಬತ್ತನೆದು. "ಐ" ಫಾರ್ ಇಂಟೆಲಿಜೆಂಟ್ಸ್ ಅಂತ ನಾವೇ ಅನ್ಕೊಂಡು ಬೀಗುತ್ತಿದ್ದೆವು.. ಮೊತ್ತಮೊದಲ ಕ್ಲಾಸ್ ಗೆ 'ಜಿ.ಎಸ್.ಬಿ' ಎಂಬ ಪ್ರಾಧ್ಯಾಪಕಿಯೊಬ್ಬರು ಎಲೆಕ್ಟ್ರಿಕಲ್ ವಿಷಯ ಬೋಧಿಸಲು ಬಂದಿದ್ದರು. ಮೊದಲ ಒಂದು ವಾರವಂತೂ ಬರೀ ಹೊಸ ಪರಿಚಯ, ಹೊಸ ಸ್ನೇಹ, ಇದರಲ್ಲೇ ಕಳೆದಿತ್ತು.. ಚೂರುಚೂರಾಗಿ ವಿಷಯಗಳ ಬೋಧನೆಯೂ ಆರಂಭವಾಗಿತ್ತು. ಅದೇ ಭೌತಶಾಸ್ತ್ರ, ಗಣಿತ ಇದ್ದಿದ್ದರಿಂದ ಅಷ್ಟೇನೂ ಕಷ್ಟ ಅನಿಸಿರಲಿಲ್ಲ.

ಆದರೆ ಯಾತನಾಮಯ ಅಂದ್ರೆ, ವರ್ಕ್-ಶಾಪ್. ಆ ಖಾಕಿ ವಸ್ತ್ರ ಧರಿಸಿ, ಮಧ್ಯಾಹ್ನದ ಬಿಸಿಲಿನಲ್ಲಿ, ಕಬ್ಬಿಣ ತಿಕ್ಕೋದು, ವೆಲ್ಡಿಂಗ್ ಇವೆಲ್ಲ ಬಹಳ ಬೇಸರದ ಆದರೆ ಅನಿವಾರ್ಯವಾದ ಸಂಗತಿಯಾಗಿದ್ದವು.. ನೋಡುನೋಡುತ್ತಿದ್ದಂತೆ ಮೊದಲನೇ ಇಂಟರ್ನಲ್ ಬಂತು. ಜನ್ಮದಲ್ಲಿ ಆ ಶಬ್ದ ಕೇಳಿದ್ದು ಅದೇ ಮೊದಲು. ಏನೋ ತಿಂಗಳ ಪರೀಕ್ಷೆ ಥರ ಇದೂ ಕೂಡ ಅಂತ ಹಿರಿಯ ಸ್ನೇಹಿತರು ಹೇಳಿದ್ದರು. ವಿಷಯಗಳು ಕಷ್ಟವಿಲ್ಲದಿದ್ದರೂ, ಹೊಸ ವಾತಾವರಣದ ಕಾರಣಕ್ಕೋ ಏನೋ, ಸ್ವಲ್ಪ ಭಯದಲ್ಲಿಯೇ ಇದ್ದೆ.. ಆದರೂ ಇಂಟರ್ನಲ್ ನ ಅಂಕಗಳು ಚೆನ್ನಾಗೆ ಬಂದಿತ್ತು..ಅಲ್ಲಿಗೆ ನನಗೂ ಸ್ವಲ್ಪ ಸಮಾಧಾನವಾಗಿತ್ತು.

ಅಷ್ಟರಲ್ಲಿ ಅನೇಕ ಹಾಸ್ಟೆಲ್ ವಿದ್ಯಾರ್ಥಿಗಳು ನನಗೆ ಗೆಳೆಯರಾಗಿದ್ದರು."ವರುಣ" ,"ಹರ್ಷ" ,"ಶ್ರೀನಿಧಿ" ,"ಸಂದೀಪ","ಹರೀಶ" ಹೀಗೇ ಪಟ್ಟಿ ಬೆಳೆಯುತ್ತಾ ಹೋಯಿತು..ಅದೊಂದು ದಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ "ದೇವೇಂದ್ರಪ್ಪ ಸರ್" ತರಗತಿಗೆ ಬಂದವರೇ, 'ಇವತ್ತು ಸಿ.ಆರ್ (ಕ್ಲಾಸ್ ರೆಪ್ರಸೆಂಟೇಟಿವ್) ನ ಆಯ್ಕೆಯಾಗಬೇಕಾಗಿದೆ, ಆಸಕ್ತಿಯಿದ್ದವರು ಹೆಸರು ಕೊಡಬಹುದು' ಅಂತಂದ್ರು.. ಒಟ್ಟು ೧೦ ಜನ ಎದ್ದು ನಿಂತಿದ್ದರು. ಶಾಲೆಯಲ್ಲೆಲ್ಲ ತರಗತಿಯ ಲೀಡರ್ ಆಗಿ ಅನುಭವವಿದ್ದ ನಾನೂ ಅವರ ಜೊತೆ ಎದ್ದು ನಿಂತೆ.. ಹಾಸ್ಟೆಲ್ ಹುಡುಗರ ಬೆಂಬಲ ಬೇರೆ ಇತ್ತಲ..!
ಅಷ್ಟು ಜನ ಎದ್ದು ನಿಂತಿದ್ದನ್ನು ನೋಡಿ, ಪ್ರಾಧ್ಯಾಪಕರಿಗೆ ಅಚ್ಚರಿಯಾಗಿ ಚುನಾವಣೆ ಆಗಬೇಕೆಂದರು. ಅದಕ್ಕೂ ಮುನ್ನ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ತಮ್ಮ ಬಗ್ಗೆ ವಿವರಣೆ ನೀಡಬೇಕೆಂದು ಹೇಳಿದರು.. ಒಂಥರಾ ರಾಜಕಾರಣಿಗಳು ಕ್ಯಾಂಪೇನ್ ಮಾಡ್ತಾರಲ ಹಂಗೆ.. ನಾನೂ ಮಾತನಾಡಲು ವೇದಿಕೆಗೆ ಹೋಗಿ "ನನ್ನ ಆಯ್ಕೆ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳನ್ನೂ ನಾನು ಪರಿಹರಿಸುತ್ತೇನೆ. ಎಲ್ಲ ವಿಷಯಗಳಲ್ಲೂ ಬೆಂಬಲಿಸುತ್ತೇನೆ" ಎಂದೆಲ್ಲಾ, ಅಪಾರ ಭರವಸೆಗಳನ್ನು ಕೊಟ್ಟೆ.. ನನ್ನ ನಂತರ ಬಂದವರೂ ಅದೇ ಥರದ ಮಾತುಗಳನ್ನಾಡಿದರು..ನಂತರ ಚುನಾವಣಾ ನಡೆಯಿತು. ಎಲ್ಲ ಅಭ್ಯರ್ಥಿಗಳಿಗೂ ಒಂದು ಸಂಖ್ಯೆ ಕೊಟ್ಟು, ಆಯಾ ಸಂಖ್ಯೆ ಗೆ ಮತ ಹಾಕಲು ಹೇಳಲಾಯಿತು.. ನನ್ನ ಸಂಖ್ಯೆ ೨ ಆಗಿತ್ತು.. ವಿಪರ್ಯಾಸ ಅಂದ್ರೆ, ನಾನೇ ನನಗೆ ಮತ ಹಾಕಿಕೊಂಡಿರಲಿಲ್ಲ.!!! ಬೇರೆಯವನಿಗೆ ಮತ ಹಾಕಿದ್ದೆ.. ಅದಕ್ಕೆ ಕಾರಣವೂ ಇತ್ತು.. ಹಾಗೆ ತರಗತಿಯ ನಾಯಕನಾದವನು, ಅನೇಕ ಕೆಲಸಗಳಲ್ಲಿ,ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿದಾಗ, ದಿನವೂ ಬೇರೆ ಊರಿನಿಂದ ಪ್ರಯಾಣ ಮಾಡೋದ್ರಲ್ಲೇ ಸುಸ್ತಾಗಿರುತ್ತೆ, ಇನ್ನ ಬೇರೆ ಕೆಲಸ ಮಾಡಲು ಸಾಧ್ಯವೇ ಎಂಬ ದಿಗಿಲು ನನ್ನನ್ನು ಕಾಡಿತ್ತು..!!

ಅಂತು ಚುನಾವಣಾ ಮುಗಿದು, ಮತ ಎಣಿಕೆ ಶುರುವಾಯಿತು..ಮೊದ್ಲು ಮೊದ್ಲು ಬರೀ ಬೇರೆಯವರ ಹೆಸರೇ ಬರುತ್ತಿತ್ತು. ನನ್ನ ಹೆಸರು ಬರಲೇ ಇಲ್ಲ. ಅಲ್ಲಿಗೆ ಠೇವಣಿ ಕಳೆದುಕೊಂಡ ಪರಿಸ್ಥಿತಿಯಲ್ಲಿ ನಾನಿದ್ದೆ.. ಆದರೆ ಆಮೇಲೆ, ಧಿಡೀರನೆ ಒಂದಿಷ್ಟು ಮತಗಳು ನನ್ನ ಪರವಾಗಿ ಸತತವಾಗಿ ಬಂದು, ಮತ್ತೆ ನಿಂತಿತು. ಬೇಸಿಗೆಯ ಅಕಾಲಿಕ ಮಳೆಯ ಹಾಗೆ..!
ಕೊನೆಗೆ, "ಅನೂಪ್ ಶರ್ಮ' ಎಂಬ ಹುಡುಗ ನಾಯಕನಾಗಿ ಆಯ್ಕೆಯಾಗಿದ್ದ.. ಅವನಾದರೋ ಮೂಲತಃ ಅದೇ ಊರಿನವನು, ತರಗತಿಯಲ್ಲಿದ್ದ ಅರ್ಧದಷ್ಟು ಜನ ಅವನ ಸ್ನೇಹಿತರೇ..!!  ಅವನಿಗೆ ಬಂದಿದ್ದ ಮತಗಳು ೧೪.. ನನಗೆ ಬಂದಿದ್ದು ಅವನ ಅರ್ಧದಷ್ಟು, ಅಂದ್ರೆ ೭ ಮತಗಳು..ಎಲ್ಲ ಅಪರಿಚಿತರ ನಡುವೆಯೂ, ನನಗೂ ಬೆಂಬಲ ನೀಡುವ ೭-೮ ಜನರಾದರೂ ಇದ್ದಾರಲ್ಲ ಎಂಬ ಹೆಮ್ಮೆಯಂತೂ ನನಗಾಗಿತ್ತು..!!!

ದಿನಗಳುರುಳಿದವು.. ಮೊದಲನೇ ಸೆಮಿಸ್ಟರ್ ನ ಪರೀಕ್ಷೆಗಳು ಬಂದೆ ಬಿಟ್ಟವು.. ಪ್ರಾಯೋಗಿಕ ಪರೀಕ್ಷೆಗಳೆನೋ ಮುಗಿದವು.. ಬರವಣಿಗೆಯ ವಿಷಯಗಳದ್ದೇ ಒಂದು ಭಯ ಇದ್ದೆ ಇತ್ತು. ಮೊದಲನೇ ವಿಷಯ ಭೌತಶಾಸ್ತ್ರ.. ಎಷ್ಟು ಓದಿದರೂ ಮರೆತು ಹೋಗುವಂತೆ ಭಾಸವಾಗುತ್ತಿತ್ತು.. ಆದರೂ ಹೇಗೋ ಎಲ್ಲವೂ ನಿರಾತಂಕವಾಗಿ ಮುಗಿಯಿತು.. ತಿಂಗಳ ನಂತರ ಫಲಿತಾಂಶವೂ ಬಂದಿತು, ಆಗ ನನ್ನ ಬಳಿ ಲ್ಯಾಪ್-ಟಾಪ್ ಇರಲಿಲ್ಲ. ನನ್ನ ಗೆಳೆಯನೊಬ್ಬ ಫೋನ್ ಮಾಡಿ ತಿಳಿಸಿದ.
ಅಚ್ಚರಿಯೆಂದರೆ, ನಾನೇ ತರಗತಿಯಲ್ಲಿ ಮೊದಲಿಗನಾಗಿ ಬಂದಿದ್ದೆ.. ಇಡೀ ಕಾಲೇಜಿಗೆ ಮೂರನೆಯನವನಾಗಿ..!! ಇದರ ನಂತರ, ಹೆಚ್ಚು ಅಂಕ ಪಡೆದ ಕಾರಣಕ್ಕೆ, ಒಂದಿಷ್ಟು ಜನಪ್ರಿಯತೆಯೂ ಹೆಚ್ಚಾಗಿತ್ತು..

ರಜೆ ಮುಗಿದು, ಎರಡನೇ ಸೆಮಿಸ್ಟರ್ ನ ತರಗತಿಗಳಿಗೆ ಹೊರಡಲು ಅಣಿಯಾದೆನು..!!
[ ಮುಂದುವರೆಯುವುದು.............]Wednesday, June 26, 2013

ಶ್ರೀಹರಿಹರಸ್ತವನಂ [ ಅಶ್ವಧಾಟಿಯಲ್ಲಿ.. ]ಎಂದೆಂದು ತನ್ನಸುಗೆ ಕುಂದಿಲ್ಲದಾ ವರವ ಛಂದಾಗಿ ಬೊಮ್ಮನೆರೆಯೆ
ನಿಂದಾತ್ಮ ತಾ ಗುಹನು ಕೊಂದಾಡೆ ಸಜ್ಜನರ ವಂದಾರುಲೋಕ ಕರೆಯೆ..
ಸಿಂಧೂತ್ಠಳಾ ರಮಣ ಮಂದಾಕಿನೀಂದುಧರರೊಂದಾಗಿ ದೇಹ ತೆರೆಯೆ
ಬಂದಾರು ದೈತ್ಯನನು ಕೊಂದಾರು ಕಲ್ಲಿನಲಿ ನಿಂದಾರು ಲೋಕ ಪೊರೆಯೆ..||೧||

ಏನೀಗ ಬಣ್ಣಿಸಲಿ ತಾನಾಗೆ ಭೂಮಿಗಿಳಿದಾನಮ್ಯನಾಸ್ಯಸುಖವಂ
ಆ ನಾಕದಾಣ್ಮರ ಭಯಾನೇಕವಂ ತೊಡೆದು ಮಾನಾದ್ಯವಿತ್ತ ಬಲವಂ..
ಹೀನಾತ್ಮರಿಂ ಸಿಗದಿಹೀ ನಾಥ ದಾಸರಿಗೆ ನಾನಾರ್ಥವಿತ್ತು ಪೊರೆವಂ 
ಜ್ಞಾನೈಕಗಮ್ಯ ಸುರಗಾನಪ್ರಕೀರ್ತಿತನು ಮೀನಾದಿರೂಪಕಶಿವಂ..||೨||

ಪಕ್ಷೀಶಗಾಪರಿಮಿತಾಕ್ಷೇಶನುಂ ದಿವಿಜಯಕ್ಷಾದಿಸಂನಮಿತನುಂ
ತ್ರ್ಯಕ್ಷಂ ಜಗತ್ರಿತಯರಕ್ಷಂ ವಿಭೂತವಿಸರಾಕ್ಷಾಯಮಾನಶಿವನುಂ..
ಲಕ್ಷ್ಮೀಸಮುಲ್ಲಸಿತವಕ್ಷಸ್ಥಲಮ್ ಜನಪದಕ್ಷಾತ್ಮಜೇಕ್ಷಕಶುಭಂ
ಆಕ್ಷೋಭಿತಾಹಿತಜನಾಕ್ಷೇಪಣಂ ತ್ರಿಪುರರಕ್ಷೋಧಿಪಕ್ಷಯಕರಂ..||೩||

ಸೊಂಪಾದ ಕೋಲಜಳ ತಂಪಾದ ವಾರ್ಗಮನದಿಂ ಪಾಪದೋಘ ಕಳೆದು
ಕಂಪಾದ ಪತ್ರಗಣದಿಂ ಪಾರಿಜಾತಮುಖಸಂಪುಷ್ಪದಿಂ ಪ್ರಭುವಿನ..
ಕೆಂಪಾದ ನೀರಭವವಂ ಪೋಲ್ವ ಪಾದಯುಗವಂ ಪೂಜಿಸಿ ಪ್ರತಿದಿನಂ
ಮಾಂಪಾಹಿ ಎಂದೆನಲಲಂ ಪಾವನಾತ್ಮಹರಿಪಂಪೇಶ್ವರಂ ಸಲಹುವಂ ..||೪||

Thursday, March 7, 2013


[" ಚೌದವೀ ಕಾ ಚಾಂದ್ ಹೊ, ಯಾ ಅಫ್ತಾಬ್ ಹೊ.." ಎಂಬ,ಹಿಂದಿ ಗೀತೆಯ ಭಾವಾನುವಾದ.]

ಪೂರ್ಣಚಂದ್ರಕಾಂತಿಯೋ, ಆ ರವಿಯೋ ನೀ..
ಏನೇ ಇರಲಿ ದೇವರಾಣೆ, ಅನೂಹ್ಯವೇ ನೀ..

ಮೆಘದಂಥ ಕೇಶವು, ಹೆಗಲಾಚೆ ಚಾಚಿದೆ..
ಮೋಹಗಣ್ಣ ಬಟ್ಟಲೊಳಗೀ ಪಾನ ತುಂಬಿದೆ..
ನೋಟದಲ್ಲೇ ಮತ್ತನುಣಿಸೋ ಭಾವ ಹೊಮ್ಮಿದೆ...!!

ಮೊಗವಂತು ನೀರೊಳಗೆ ನಲಿದಾಡೋ ತಾವರೆ.
ನಾದಭಂಗಿ ತಂದಿಹ, ಸವಿಗಾನದ ಸೆರೆ..
ಕಾವ್ಯದಂದದಲ್ಲಿ ಬೆರೆತ, ನೀನೆ ಅಪ್ಸರೆ..!!

ತುಟಿಯ ಮೇಲೆ ಲಾಸ್ಯದ,ಮಿಂಚಂತೆ ಹಾಸವು
ನಿನ್ನ ಪಾದಧೂಳಿಗೆ, ಜಗವೆಲ್ಲಾ ದಾಸವು..
ಸೃಷ್ಟಿರೂಪಸಾರ ನೀನು, ನವೊಲ್ಲಾಸವು...!![ ಮೂಲ ಗೀತೆ..!
  ರಚನೆ-ಶಕೀಲ್ ಬದಾಯುನಿ.  ]चौदवीं का चाँद हो, या आफताब हो
जो भी हो तुम खुदा की कसम, लाजवाब हो

जुल्फें हैं जैसे कांधों पे बादल झुके हुए
आँखें हैं जैसे मै के प्याले भरे हुए
मस्ती है जिसमें प्यार की तुम, वो शराब हो
चौदवीं का चाँद हो ...

चेहरा है जैसे झील में हँसता हुआ कँवल
या जिंदगी के साज़ पे छेड़ी हुई ग़ज़ल
जाने बहार तुम किसी शायर का ख्वाब हो
चौदवीं का चाँद हो ...

होठों पे खेलती हैं तबस्सुम की बिजलियाँ
सजदे तुम्हारी राह में करती है कैकशां
दुनिया-ए-हुस्नो-इश्क का तुम ही शबाब हो
चौदवीं का चाँद हो ...


Wednesday, February 20, 2013

ಮನೋಹರಿ..!!!!!!!


ಬಿರಿದ ಮಲ್ಲಿಗೆ ನೋಟದರೆ ಲೇಖನಿಯ ಹಿಡಿದು
ಗೀಚಿರಲು ಪ್ರೇಮಚಿತ್ರವ ಹೃದಯದೊಳಗೆ..
ಬರೆದ ಚಿತ್ರಕೆ ವರ್ಣ ಭರಿಸುವಾಕೆಯೂ ನೀನೇ
ಚಾಚಿರುವ ಮುಂಗುರುಳ ಬಳಸು ಹೀಗೆ..||


ಹಲವು ಕಾವ್ಯಗಳರಸಿಯರ ಮೀರಿಸುವ 
ದಧಿಯ ಬೆಣ್ಣೆಯ ತೆರದಿ ಮೈಯ ನುಣುಪು..
ಚೆಲುವಿನ ಕುಂಭದೊಳು ತುಳುಕಿ ಹೊರಚೆಲ್ಲಿರುವ
ಸುಧೆಯ ಹನಿಗಳ ಪೂರ ನಿನ್ನ ಹೊಳಪು..||


ನಿನ್ನ ಬೆರಳಿನ ಮಂತ್ರದಂಡದಿಂ ಆಗಾಗ್ಗೆ
ಸ್ಪರ್ಶಿಸಿರೆ ಹೊಸಹೊಸತು ರೂಪ ಲಾಸ್ಯ..
ಭಿನ್ನ ಲೋಕದಿ ಹಾರಿ, ಮೀರುತ ನಿಹಾರಿಕೆಯ
ಹರ್ಷನಕ್ಷತ್ರವರ್ಷದಿ ಎನ್ನ ದಾಸ್ಯ..||

ಓಡಿ ಬರುವೆನು ಸಣ್ಣ ಕರೆಗೂ ನೀನಿರುವಲ್ಲೇ

ಹವಣಿಸುತ ನುಸುಳಿರಲಿ ಸಿಹಿಮಾತು ಮೌನ..
ನಾಡಿಮಿಡಿತವ ಬಲ್ಲ ನಲ್ಲೆ ನರನಾಡಿಯೊಳು
ಪ್ರವಹಿಸುತ ಜೀವಂತವಾಗಿರಿಸು ನನ್ನ..||