ಸೌಂದರ್ಯ ಲೀಲೆ
ನನ್ನವಳು, ನನ್ನೆದೆಯ ತಿಳಿಮುಗಿಲಿನಲಿ ನಿಂತು
ಅನುದಿನವೂ ಮಿನುಗುತಿಹ ತಾರೆ ಇವಳು
ನನ್ನ ತಪಸಿಗೆ ಮೆಚ್ಚಿ , ಬಾನಿನಿಂ ಧರೆಗಿಳಿದು
ಗಂಗೆಯಂದದಿ ಮನವ ತಂಪಿಸಿಹಳು..
ಅವಳ ತುಟಿಯಲಿನ ತುಸು ಮಂದಹಾಸವೇ ಹೀಗೆ,
ಕೆಂಪು ಹವಳದಲಿ ಬಿಳಿ ಮುತ್ತನಿಟ್ಟಂತೆ
ಹೊಳೆವ ಕಂಗಳನು ಅರಳಿಸುತ ನಕ್ಕರೆ ಒಮ್ಮೆ,
ಮುಂಜಾವಿನಲಿ ತಾವರೆಯು ಅರಳಿದಂತೆ..
ಮುಖದ ರಂಗದಿ, ದಿವ್ಯ ನಾಟ್ಯ ಆಡಿಹುದವಳ
ಮುಂಗುರುಳು ತಂಬೆಲರ ತಾಳ ಸಮದಿ
ಕೆನ್ನೆ ರಂಗೇರುವುದು, ನಾಚಲೊಮ್ಮೆ ಅವಳು
ಕೆಂಗುಲಾಬಿಯೋ ! ಎಂದು ಭಾವಿಸಿದೆ ಕ್ಷಣದಿ..
ಹಕ್ಕಿಯಿಂಚರಕಿಂತ ಇಂಪು ಆಕೆಯ ನಾದ
ಕಿವಿಯ ಕಣಿವೆಯಲಿ ಮಾರ್ದನಿಸುತಿದೆ ಬಿಡದೆ
ಲತೆಯ ತೆರದಲಿ ಬಳುಕಿ, ನಡೆದು ಬರುತಿರೆ ಕಾಲ,
ಗೆಜ್ಜೆ ಸದ್ದಲಿ ಎನ್ನ ಹೃದಯ ಕುಣಿಯುತಿದೆ..
ದೇವಕನ್ನಿಕೆಯರನೂ ನಾಚಿಸುವ ಚೆಲ್ವಿಕೆಯ
ಮೂರ್ತಿವೆತ್ತಿಹಳು ಮನ್ಮನದ ಒಡತಿ.
ಒಂದೆರಡು ಮಾತಿನಲಿ ವರ್ಣಿಸಲು ಸಿಗದಂಥ
ಸೌಂದರ್ಯ ಲೀಲೆ ನನ್ನಾಕೆ ನಿಜದಿ..
No comments:
Post a Comment