ಪೊಡವಿಯೊಡಲಿನ ತುಸು ಬೆಚ್ಚಗಿನ ಕಾವು
ಹಿಡಿದಿಟ್ಟ ಮಣ್ಣಿನೊಳು ಊರಿಸುತ ಠಾವು..
ಮೊಳಕೆಯೊಡೆದರಳಿಹುದು ವೃಕ್ಷದ ಚಿಗುರು
ಪ್ರೀತಿಸುತ ತಾ ನಿಂತ ನೆಲವ ಹಗಲಿರುಳು..
ಯಾರೋ ನೀರೆರೆದಿಹರು ವಾತ್ಸಲ್ಯ ಸಿಂಧು
ಬೇಲಿಯೊಳಗಿಂಬಿಟ್ಟು ಪೊರೆವನ್ಯ ಬಂಧು..
ಮಗದೊಬ್ಬ ಶಕ್ತಿರಸ ನೀಡಿ ಬೆಳೆಸಿಹನು,
ಪ್ರತಿಹೆಜ್ಜೆಯಲು ಪರಿಸರದ ಋಣದಿ ತಾನು..
ಹೊಸದೇನೋ ಸಾಧಿಸುವ ಬಯಕೆ ತುಂಬಿರಲು
ಸುತ್ತಮುತ್ತಲು ಬರೀ ಕಳೆಗಳದೆ ಸಾಲು..
ಸ್ವಾರ್ಥ-ಅಸೂಯೆಗಳ ಗೆದ್ದಲಿನ ಹುಳುಗಳು
ಕೊರೆದು ಬರಿದಾಗಿಸಿವೆ ಮರದ ಒಳತಿರುಳು..
ಕ್ಷೀಣವಾಗಿಹುದಿಲ್ಲಿ ಇನಿದನಿಯ ಹುರುಪು,
ನಿಸ್ತೇಜವಾಗಿಹುದು ಹೂ-ಎಲೆಯ ಹೊಳಪು..
ಆದರೂ ನವಚೈತ್ರದಾಪೇಕ್ಷೆಯಲಿ ನಿರತ
ಅನ್ಯದಿಶೆ ಹೊಂಗಿರಣದರಸುವಿಕೆ ನಿರುತ...
ಮರಳುಗಾಡಲಿ ದೊರೆವ ಜಲದ ಸಿಹಿಸೆಲೆಯಂತೆ
ಅಲ್ಲೊಂದು ಇಲ್ಲೊಂದು ಸ್ಫೂರ್ತಿಗಳ ಸಂತೆ..
ಭರವಸೆಯ ಹೊಮ್ಮಿಸಲು ಸಾಕು ನೆಲೆಯೊಂದು
ಹೊಸಕನಸಿನಲಿ ಮತ್ತೆ ಮರ ಚಿಗುರಿತಿಂದು..||
ನನಗೆ ಇಲ್ಲಿ ಮತ್ತೆ ಚಿಗುರಿದ ಅಂತರಂಗ ಮೃದಂಗದ ವಾದಕ ಗೋಚರಿಸಿದ! ಕವಿತೆಗೆ ಹತ್ತಾರು ಆಯಾಮಗಳಿವೆ, ಅರ್ಥೈಸಿಕೊಂಡಂತೆ.. ಬಹಳ ಸಮಯ ತೆಗೆದುಕೊಂಡು ಒಂದೊಳ್ಳೆಯ ಕವಿತೆಯೊಂದಿಗೆ ಬಂದಿದ್ದೀರಿ ಭೀಮಣ್ಣ.. ಬಹಳ ಹಿಡಿಸಿತು ಕವಿತೆ.. ವೃಕ್ಷದೊಂದಿಗೆ ಬದುಕಿನ ಪ್ರತಿಮೆಯನ್ನು ಬಹಳ ಸುಂದರವಾಗಿ ಎತ್ತಿ ನಿಲ್ಲಿಸಿದ್ದೀರಿ.. ನಾನು ಕವಿತೆಯಲ್ಲಿ ಪ್ರತಿಯೊಂದು ಕವಿತೆಯೊಂದಿಗೆ ಹುಟ್ಟುವ ಕವಿಯನ್ನೂ ನೋಡುತ್ತಿದ್ದೇನೆ.. ಮನಗೆಲ್ಲುವ ಕವಿತೆ..:)
ReplyDelete