Friday, August 31, 2012

ಪರಿಣಯ..!!

ಬೆಳಕಿನ ಬಿಂದುಗಳ
ಬಂಧದಲಿ ಹೊಂದಿಸಿದ
ಮಂದಿರದೊಳಗೆ ಇಂದುವಿನ ಪರಿಣಯ...
ಮಂಗಳಾಂಗಿನಿ ಭೃಂಗ-
-ಕುಂತಲೆ ರೋಹಿಣಿಯ
ಸಂಗದಿಂದಲಿ ಶೃಂಗರಿತವೀ ಪ್ರಣಯ..||

ಶರಧಿಯ ಗರ್ಭದಲಿ
ಅಬ್ಬರಿಸಿ ಮೇಲೆದ್ದ
ಉಬ್ಬಲೆಗಳೆಬ್ಬಿಸಿದ ಮಂತ್ರಗಾನ..
ಶೀತಲಕೀಲಾಲದಲಿ
ಸಾಲು ನೆಲೆನಿಂತಿರುವ
ನೀಲೋತ್ಪಲದಿ ರಚಿತ ಪುಷ್ಪಕವಿಮಾನ..||

ಆಗಸಾಂಗಳದೊಳಗೆ 
ನೀಳ ಬಾಳೆಲೆಯಲ್ಲಿ 
ಬೆಳದಿಂಗಳಿನ ಕಂಗೊಳಿಸುವ ಭೂಮ..
ತಲೆದೂಗುತಿಹ ತರುಗಳಾ
ಚಾಮರದಿ ಸ್ಫುರಿತ
ಹಿತಸಮೀರನ ಕೂಡಿರುವ ಸುರಭಿಪ್ರೇಮ..||


ರೂಪ್ಯಸಾರೂಪ್ಯತೆಯ
ಪ್ರಾಪ್ತ ಸುಪಯೋಧರದಿ
ಕಲ್ಪಿತವಿತಲ್ಪದಲಿ ರಾಜಿಸುತಲಿ..
ಹೂಗನಸಿನ ಹಾದಿ
ಹಾಸಿ ಹೃದಯದಿ ಹೆಣೆದ
ಹರುಷದೀ ಹೊನಲೆಂದೂ ಹೊಳೆಹೊಳೆಯುತಿರಲಿ..||


4 comments:

  1. ಭಾರಿ ಭಾರಿ ಅರ್ಥವಿರುವ ಪದಗಳ ಶೃಂಗಾರ ಕವಿತೆಯನ್ನು ಅಲಂಕರಿಸಿರುವ ಸಾಲುಗಳ ಅಚ್ಚುಕಟ್ಟಾದ ರಚನೆ .. ಇವು ನಿಮ್ಮ ಕವಿತೆಯ ವಿಶೇಷ .. & ತುಂಬಾ ದಿನಗಳೇ ಆಗಿತ್ತು ನಿಮ್ಮ ಕವಿತೆಗಳ ನೋಡಿ (ಓದಿ) .. ಈ ರೀತಿಯ ಪದಗಳ ಕವಿತೆಗಳು ದೂರದ ಮಾತು .. ಇತ್ತೀಚಿನ ಯುವಕರಲ್ಲಿ ಕನ್ನಡ ಪದಗಳ ಮಾತುಗಳೇ ಸಿಗುತ್ತಿಲ್ಲಾ .. ಇನ್ನೂ ನಾ ನೋಡಿದಂತೆ ನಿಮ್ಮಷ್ಟೇ ವಯಸ್ಸಿನವರಲ್ಲೂ ಸಹ ಅದು ನಿಜ. ನಿಮ್ಮ ಪ್ರತಿಭೆ ಅಳೆಯಲಾಗದಷ್ಟು ಮಹಾಸಾಗರ .. ನಿಮಗೆ ಎಲ್ಲಾ ರೀತಿಯ ಆಶೀರ್ವಾದಗಳು ಲಭಿಸಲಿ .. ದೇವರು ಸದಾ ಒಳಿತನ್ನೇ ಕರುಣಿಸಲಿ ಎಂದು ಹಾರೈಸುತ್ತೇವೆ .. :)

    ReplyDelete
  2. ನಾನು ಇನ್ನೊಂದು ಭರವಸೆಯಿಟ್ಟ ಕವಿ ಇವರು. ಪ್ರತೀ ಕಾವ್ಯದಲ್ಲಿ ಒಂದು ಶಕ್ತಿಯನ್ನು ಕುಳ್ಳಿರಿಸುತ್ತಾರೆ.ಆ ಶಕ್ತಿಯೇ ಮತ್ತೆ ಮತ್ತೆ ಓದುಗರನ್ನು ಸೆಳೆಯುವುದು. ಅದು ಶ್ರಮದ ಫಲಕ್ಕೆ ದೇವರು ಕೊಟ್ಟ ವರ. ಮೊದಲ ಸಾಲಿನಿಂದ ನಿಲ್ಲಿಸಿ ಓದುಗನನ್ನು ಅದೇ ಧ್ಯಾನಕ್ಕೆ ಕೊನೆಯವರೆಗೆ ಕೊಂಡೊಯ್ಯುವ ಕಾವ್ಯ ಸಾರ್ವಕಾಲಿಕವಾಗುವುದು. ಮತ್ತೊಂದು ಸದಾ ಕಡೆದ ಶಿಲ್ಪದಂತೆ ಕಂಗೊಳಿಸುವ ಭಾವಗಳು.ಸುಂದರ ಕವಿತೆ ಭೀಮಣ್ಣ. ನಿಮ್ಮ ಶ್ರಮಕ್ಕೆ ಭಗವಂತ ಕೊಟ್ಟ ಶಕ್ತಿ ಇದು.ಹಾಗೇ ಕಾಪಾಡಿ... ದೇವರು ದೊಡ್ಡವನು.

    ReplyDelete
  3. ಅಂತರಂಗಕ್ಕೇ ಲಗ್ಗೆಯಿಟ್ಟ ಮೃದಂಗ ಧ್ಯಾನ.. ನಿಮ್ಮನ್ನು ನೋಡುವಾಗ ನಿಜಕ್ಕೂ ಹೆಮ್ಮೆಯಾಗುತ್ತದೆ ಭೀಮಣ್ಣ.. ಕವಿತೆ ಹೇಗಿರಬೇಕೆಂದು ಇತರರಿಗೆ ಉದಾಹರಿಸುವಾಗ ನಿಮ್ಮ ಕವಿತೆಗಳನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು ಅಷ್ಟು ಪಕ್ವತೆ ಸಾಧಿಸಿಕೊಳ್ಳುತ್ತಿದ್ದೀರಿ.. ಲಯ, ಭಾವ, ಪ್ರಾಸ ಅಬ್ಬಾ.. ಮಾತುಗಳಿಲ್ಲ ನನ್ನ ಬಳಿ.. ಶಹಬ್ಬಾಶ್ ಎಂದು ಬೆನ್ನು ತಟ್ಟುತ್ತೇನೆ..:)

    ReplyDelete
  4. ಈ ಲಾಲಿತ್ಯತೆ ನನಗೆ ಯಾವಾಗಲೂ ಬೆರಗು ಹುಟ್ಟಿಸುತ್ತದೆ. ಶಕ್ತ ಬರಹಗಾರ ನೀವು.

    ಹೂಗನಸಿನ ಹಾದಿಯ ಕಲ್ಪನೆ ನಮಗೂ ಸಿದ್ದಿಯಾಗಲಿ.

    ReplyDelete