ಅಮ್ಮ ನೋಡಾಗಸದಿ ಮೋಡದ
ಗುಮ್ಮ ಗರ್ಜಿಸಿ ಬರುವನು..
ಧುಮ್ಮನಿತ್ತೆಡೆ ಬರಲು ಅಂಜಿಕೆ
ಸುಮ್ಮನಿಲ್ಲಿಯೆ ಇರುವೆನು..||
ಹೊರಗೆ ಹೋಗಲು ಮಳೆಯ ನೀರನು
ಸುರಿಸಿ ತೊಂದರೆ ನೀಡುವ..
ಮರಳಿ ಎಲ್ಲೆಡೆ ಕೆಸರಿನೋಕುಳಿ
ಎರಚುತಲಿ ನೆಗೆದಾಡುವ..||
ಬೆಳಗದಲೆ ರವಿಮಾಮ ಮೇಘದ
ಒಳಗೆ ಅಡಗಿಹ ಹೆದರುತಾ..
ಚಳಿಗೆ ಮೈ ಗಡ ನಡುಗುತಿಹುದು
ಬಳಿಯೇ ನೀನಿರು ರಮಿಸುತಾ..||
ದಾಳಿ ನಡೆಸುವ ಗುಡುಗು-ಮಿಂಚಲಿ
ಧೂಳನೆಬ್ಬಿಸಿ ಗಾಳಿಗೆ
ತಾಳಲಾರೆನು ಗುಮ್ಮನಾರ್ಭಟ
ನಾಳೆ ಹೋಗುವೆ ಶಾಲೆಗೆ..||
ಮಳೆಯ ಆರ್ಭಟದ ಬಗೆಗೆಗಿನ ಈ ಶಿಶು ಕವನ ಅಮೋಘವಾಗಿದೆ. ಹಾದಿಕೊಳ್ಳುವಂತೆಯೂ ಇದೆ.
ReplyDeleteಶಿಶು ಸಾಹಿತ್ಯದ ಕೊರತೆ ನೀಗಬಲ್ಲ ಕವಿ ನೀವು.