Monday, August 6, 2012

ಭೃಂಗದ ಬೆನ್ನೇರಿ..!!


ಕಂಡ ನೂರು ಕನಸಿಗೆಲ್ಲ
ರೆಕ್ಕೆ ಪುಕ್ಕ ಕಟ್ಟಿ ಹಾರಿ,
ಹಚ್ಚ ಹಸಿರ, ಸ್ವಚ್ಛ ಜಗದಿ
ವಿಹರಿಸುತ್ತ ಸುಖಿಸುತಿರಲು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ದೇವಪಾರಿಜಾತವಿರಲಿ
ದೀನಸುಮವ್ರಾತವಿರಲಿ
ಅಲ್ಲಿಗಿಲ್ಲಿಗೆಲ್ಲ ತೆರಳಿ
ಸ್ನೇಹಲೋಕ ಹೆಣೆಯಲೆಂದು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ಎರಡು ದಿನದ ಬದುಕಿನಲ್ಲಿ
ಎಲ್ಲರೊಲುಮೆ ಸಿಹಿಯ ಹೀರಿ
ಸತ್ತ ಮೇಲೂ ಮಧುವ ಬೀರಿ
ಮೆದ್ದ ಜನರ ಮನದೊಳಿರಲು,
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!

ಗೂಡಿನರಸಿ ನಾಡದೇವಿ
ಅವಳ ಆಜ್ಞೆಯಾಳು ನಾನು
ನಮ್ಮ ಬಳಗ ಮುರಿಯ ಬಂದ
ದುರುಳರನ್ನು ಸರಿಸಲೆಂದು..
ಹೊರಟಿಹೆನೀಗ ಇದೋ..
ಭೃಂಗದ ಬೆನ್ನೇರಿ..!!


4 comments:

  1. ಬಹಳ ಸುಂದರ ಭಾವ. ನಿಮ್ಮ ಭೃಂಗದ ಪ್ರಯಾಣ ಸಫಲವಾಗಲಿ. ನೀವು ಕೀರ್ತಿವಂತರಾಗಿ. ಮೊದಲೇ ಭೀಮಸೇನ. ಮತ್ತೇನು ಹೇಳುವುದು. ಶುಭಮಸ್ತು

    ReplyDelete
  2. ಭೀಮಣ್ಣ, ನಿಮ್ಮ ಲಾಲಿತ್ಯಗಳೆದುರು ನಾನು ಬರಿದೇ ಗುಂಯ್ಯ್-ಗುಡಬೇಕು, ಭೃಂಗದ ಬೆನ್ನೇರಿ. ನೀವು ಅಪ್ರತಿಮರು. ಅನನ್ಯ. ಅನೂಹ್ಯ!

    ReplyDelete
  3. ಭೀಮಣ್ಣ ಪ್ರತಿ ಭಾರಿಯೂ ನನ್ನನ್ನು ನಿರಾಸೆ ಮಾಡದೆ ನಿಮ್ಮ ಮೇಲಿನ ಭರವಸೆಯನ್ನು ಕಾಪಾಡಿಕೊಳ್ಳುವ ಕವಿವರ್ಯ ನೀವು..;) ಚೆಂದದ ಬರೆದಿದ್ದಿ ಭೀಮಣ್ಣ.. ನಾನು ನಿಮ್ಮ ಕವಿತೆಗಳ ಲಯಕ್ಕೆ ಹೆಚ್ಚು ಮಾರುಹೋಗುತ್ತಿದ್ದವನು ಇಂದೇಕೋ ಕವಿತೆಯ ಭಾವಕ್ಕೆ ಮಾರುಹೋಗಿದ್ದೇನೆ.. ಭೃಂಗದ ಬೆನ್ನೇರಿ ನಿನ್ನ ಸವಾರಿ ಸಾವಿರಾರು-ಲಕ್ಷಾಂತರ ಓದುಗರನ್ನು ನಿನ್ನ ಸಾಹಿತ್ಯದೆಡೆಗೆ ಸೆಳೆಯುವ ತಾಕತ್ತುಳ್ಳದ್ದು.. ಎಂದೂ ನಿಲ್ಲದೆ ಸಾಗಲಿ ಸವಾರಿ..:)))

    ReplyDelete
  4. ಭೃಂಗದ ಬೆನ್ನೇರಲೂ ಪ್ರಾಪ್ತಿ ಬೇಕು. ಅದು ನಿಮಗಿದೆ. ನಿಮ್ಮ ಪಯಣ ಯಶಸ್ವಿಯಾಗಲಿ. ಸುಖವೇ ಸಲ್ಲಲಿ.

    ReplyDelete