ಎಂತು ವರ್ಣಿಸಲಿ ಚಂದ್ರಿಕೆಯ ಚೆಲುವು.
ಸುಂದರದ ರಾತ್ರಿಯಲಿ ಚಂದ್ರಮನ ಒಲವು.
ಚುಕ್ಕಿಗಳ ತೋರಣವು ಗಾಢಕೃಷ್ಣತೆಯಲ್ಲಿ,
ಮುಸುಕಿ ಮರೆಯಾಗುತಿಹ ಮೇಘಗಳ ಮಾಯೆ.
ಶುಭ್ರ ಬೆಳದಿಂಗಳ ಬೆಳಕ ವಿಸ್ತರಣೆಯಲಿ,
ಮೂಡಿಹುದು ಬಾನೊಳಗೆ ಉತ್ಸವದ ಛಾಯೆ..
ಸೂರ್ಯನಿರುವಿಕೆಯಲ್ಲಿ ಬಳಲಿ ಹೋಗಿವೆ ಬೇಗ,
ಕುಮುದಸಂಚಯವು ಝಳ-ತಾಪದಲಿ ಬೆಂದು.
ಮಂದ ಶೀತಲ ಶಶಿಯು ನಗುತ ಉದಿಸಲು ಈಗ
ಎಲ್ಲೆಡೆಗೂ ಕಂಪೆಸೆದು ನಿಂತಿಹವು ಬಿರಿದು..
ದಿನವಿಡೀ ಚಡಪಡಿಸಿ ಪ್ರಿಯಕರನ ಸನಿಹಕ್ಕೆ,
ಈ ಚಕೋರಗಳು ಕಾದು ಕುಳಿತಿಹವು.
ಆಗಸದಿ ಸೌಮ್ಯಭೇಶನ ಪ್ರಭೆಯ ಸಂಭ್ರಮಕೆ,
ಹರ್ಷನಿರ್ಭರವಾಗಿ ಕುಣಿದಾಡುತಿಹವು..
ತಿಳಿನೀರಿನಲಿ ಚಂದ್ರ ಬಿಂಬವನು ಕಂಡಿಲ್ಲಿ,
ಹಿಡಿಯಲು ಮೇಲೇರಿ ಆಡುತಿವೆ ಮೀನು.
ದಿನವೆಲ್ಲ ದಣಿದು, ಈ ರಮ್ಯ ನೀರವತೆಯಲಿ,
ಹೊಂಗನಸಿನೊಳು ಸುಪ್ತ, ಜಗವು ತಾನು..
ಯಾರು ಕೊಟ್ಟಿಹರು?! ಆಕಾಶದೊಡೆಯಗೆ ಇಂಥ
ರಜತ ಕಾಣಿಕೆಯನ್ನು ಸದ್ದಿಲ್ಲದಂತೆ..
ಮಧುರ ಬೆಳಕನು ಈವ ವೃತ್ತಬೊಂಬೆಯು ಸ್ವಂತ
ಸೃಷ್ಟಿಕರ್ತನ ಭವ್ಯ ಕಲೆಯ ಸಂತೆ ..
ಚಿತ್ರಕೃಪೆ--arch0708.goldtent.net
No comments:
Post a Comment