ರುದ್ರ-ರಮಣೀಯತೆಯ ಪಶ್ಚಿಮದ ಘಟ್ಟ,
ದಟ್ಟ ಹಸಿರನು ಉಟ್ಟ ಮಲೆನಾಡ ಬೆಟ್ಟ.
ಸುರಲೋಕ ಧರೆಗಿಳಿದು ಬಂದಂಥ ಭಾವ,
ಪ್ರತಿನೋಟದಲೂ ಪುಳಕಗೊಂಡಿಹುದು ಜೀವ...
ನಿತ್ಯ-ನಿರ್ಮಲ-ರಮ್ಯ ಝರಿ-ತೊರೆಯ ಬಳುಕು,
ಪ್ರತಿಹೊದರಿನಲೂ ಪಕ್ಷಿ ಚಿಲಿಪಿಲಿಯ ಪಲಕು.
ಬಗೆಬಗೆಯ ಮೃಗ-ಮಿಗ-ವಿಹಂಗಗಳ ಸೊಬಗು,
ಪ್ರಕೃತಿಮಾತೆಯ ಸೃಷ್ಟಿ ಕಲೆಯ ಹೊಮ್ಮೆರಗು...
ಸತತ ಸೋನೆಯ ರಾಗ ಹಾಡುತಿಹ ಜಡಿ-ಮಳೆ,
ಲಯದಿ ಹನಿಗಳು ಇಳಿಯೆ ಗಂಧ ಸೂಸಿದೆ ಇಳೆ.
ತಂಗಾಳಿ ಬೀಸಿರಲು ಮರದೆಲೆಗಳ ತಾಳ,
ನೆರೆದಿಹುದು ಇಲ್ಲೊಂದು ಸಂಗೀತ ಮೇಳ...
ಸೂಜಿಗಲ್ಲಿನ ತೆರದಿ ಸೆಳೆಯುತಿದೆ ಮನವ,
ಚಿಮ್ಮಿಸುತಲಿದೆ ತನುವಿನೊಳಗೆ ಹೊಸತನವ.
ವೃಕ್ಷಗಳು ಚಾಚಿರುವ ರೆಂಬೆಗಳು ಇಂದು,
ಕರೆಯುತಿವೆ ಪಯಣಿಗನ ಮತ್ತೆ ಬಾ ಎಂದು...
ಚಿತ್ರಕೃಪೆ--skyscrapercity.com
No comments:
Post a Comment