Thursday, November 24, 2011

ಅಲಂಕಾರ..!!

ಇರುಳುಗುರುಳಿನ ಸುರುಳಿಹೆರಳನು
ಹೊರಳಿಸುತ ನೀ ತೆರಳಲು..
ಸರಳದಲೇ ಮನ ಮರುಳು ಮಾಡಿಹೆ
ಮರಳಿ ಅರಳಿತು ನೆರಳಲೂ..

ಮೊಗದಿ ಮುಗಿಯದ ಮುಗುಳುನಗುವಿನ
ಸೊಗಸಿಗತಿಮಿಗಿಲಿಲ್ಲವು..
ಹಗಲು ಮುಗಿಲಲೂ ಝಗಝಗಿಸುವ
ಮಿನುಗುಖಗಗಳು ಜಿಗಿದವು..

ಬಾನಿನೊಳು ಘನಇನನು ಕುಣಿಸುವ
ಭಾನುಸನ್ನಿಭ ಹೊನ್ನು ನೀ..
ನೆನೆಯೇ ಅನುದಿನ ಜೇನುಕೆನೆಯನು
ಹನಿಸುವ ಮನವನಿತೆ ನೀ..

ದ್ರುಮದ ಕುಸುಮದಿ ಮಧುಗೆ ಭ್ರಮರದ
ಸಂಭ್ರಮದಿ ಪರಿಭ್ರಮಿಸುವೆ..
ಭ್ರೂಭ್ರಮದ ಗಮಕ್ರಮದಲುಗಮಿಪ
ಅಮರ ಪ್ರೇಮದಿ ರಮಿಸುವೆ...