Friday, December 30, 2011

( ಈ ಹಾಡು, "ಹಾಗೆ ಸುಮ್ಮನೆ" ಚಿತ್ರದ, "ಮಾಯವಾಗಿದೆ ಮನಸು ಹಾಗೆ ಸುಮ್ಮನೆ.." ಎಂಬ ಹಾಡಿನ ಧಾಟಿಗೆ ಬರೆದ ಹೊಸ ಸಾಹಿತ್ಯ..)

ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ..|
ಕಣ್ಣ ಸನ್ನೆಯಲ್ಲಿಯೇ ಸೆಳೆವ ಸಾಲು ಮಲ್ಲಿಗೆ.
ಪೂರ್ಣ ಕಳೆದು ಹೋಗಿಹೆ ಕಾಣದೆ ಎಲ್ಲಿಗೆ....


ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ..|


ಕಂಡ ಬೆರಗಿನಲ್ಲಿಯೇ ಸೋತು ಕ್ಷಣದಲಿ
ಇಂದೇ ತೆರೆಯುವೆ ಭಾವದ ಬಾನುಲಿ..
ನಲ್ಲೆ ನಿನಗೆ ಮೀಸಲು ಮನದ ಮಾಳಿಗೆ
ನೀಡಬೇಕು ತಂಗಲು, ನೋಟದ ಬಾಡಿಗೆ...||1||

ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ...

ನಿನ್ನ ನೆನಪಿನಂದಕೆ ಎಲ್ಲಿ ಪರಿಮಿತಿ..
ಹೂಡು ಖಾತೆಗೆ ಕನಸಿನ ಪಾವತಿ..
ನೀನೆ ಸಾಥಿ ಎಂದಿಗೂ ಎಲ್ಲಾ ದಾರಿಗೆ..
ತಾಣವೀಗ ಮೋಹದ ಮಾಯೆಯ ಊರಿಗೆ...||2||

ಮಾತನಾಡಿದೆ ಹೃದಯ ಕೇಳು ಮೆಲ್ಲಗೆ..
ಪ್ರೀತಿಯು ಮೂಡುವ ಸಮಯ ತಾಳು ಮೆಲ್ಲಗೆ..

ಕಣ್ಣ ಸನ್ನೆಯಲ್ಲಿಯೇ ಸೆಳೆವ ಸಾಲು ಮಲ್ಲಿಗೆ.
ಪೂರ್ಣ ಕಳೆದು ಹೋಗಿಹೆ ಕಾಣದೆ ಎಲ್ಲಿಗೆ....

Wednesday, December 28, 2011

( ಈ ಹಾಡು, "ಲೈಫು ಇಷ್ಟೇನೆ." ಚಿತ್ರದ, "ನಿನ್ನ ಗುಂಗಲ್ಲೇ ಚಲಿಸುವೆನು.." ಎಂಬ ಹಾಡಿನ ರಾಗಕ್ಕೆ ಬರೆದ ಹೊಸ ಗೀತೆ..)

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..
ಹುಸಿ ಮುನಿಸೊಂದಿಗೆ, ತುಸು ನಗು ಹೂಡಲು
ಇಂದು ಮತ್ತೊಮ್ಮೆ ಮಣಿಯುವೆನು..
ಕಣ್ಣ ನಡೆಯಲ್ಲೇ ದಣಿಯುವೆನು...||

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..

ಕೋಮಲೆ ನಿನ್ನ ಮುಖದ ರಂಗದಿ, ನನ್ನಂತರಂಗವಿರಿಸು..
ಭೂಮಿಯೇ ಸ್ವರ್ಗ ನೀನು ನಡೆದಾಡುತಾ, ದಯಮಾಡಿ ನನ್ನೂ ಕರೆಸು..
ಬಳಸಿ ತೋಳಲಿ, ಬಿಡದೆ ಪೀಡಿಸು.,
ಒಮ್ಮೆ ನಿನ್ನಲ್ಲೇ ಕಳೆಯುವೆನು..
ಪ್ರತಿಕನಸಲ್ಲೂ ಕಲೆಯುವೆನು...||1||

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..

ಕಾವಲು ಇದ್ದರೂನು ಆಕಾಂಕ್ಷೆಯ ದೋಚಿರುವೆ ಗೂಢಚಾರಿ..
ಹಾವಳಿ ತಾಳದೇನೆ ಅನ್ವೇಷಿತ ನಿನ್ನೆಡೆಯ ಗುಪ್ತದಾರಿ..
ಒಲವಿನ ಈ ಖುಷಿ, ಇನ್ನು ಕಂಗೆಡಿಸಿದೆ.,
ಮಧುಭಾವದಲಿ ನೆನೆಯುವೆನು..
ನಿನ್ನ ಹಾಜರಿಗೆ ತಣಿಯುವೆನು...||2||

ನಿನ್ನ ನೆರಳನ್ನೇ ಹೆಣೆಯುವೆನು..
ಕ್ಷಣ ಸಂಭ್ರಾಂತ ಕುಣಿಯುವೆನು..
ಹುಸಿ ಮುನಿಸೊಂದಿಗೆ, ತುಸು ನಗು ಹೂಡಲು
ಇಂದು ಮತ್ತೊಮ್ಮೆ ಮಣಿಯುವೆನು..
ಕಣ್ಣ ನಡೆಯಲ್ಲೇ ದಣಿಯುವೆನು...||

Monday, December 26, 2011

( ಈ ಹಾಡು "ಗೋಕುಲ" ಚಿತ್ರದ, "ಆರಾಮಾಗೆ ಇದ್ದೆ ನಾನು, ನಿನ್ನ ಕಂಡು ಅರೆ ಏನಾಯಿತು.." ಎಂಬ ಹಾಡಿನ ಧಾಟಿಗೆ ಬರೆದ ಹೊಸ ಸಾಹಿತ್ಯ..)

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ
ಈ ಕ್ಷಣದಿಂದಲೇ ನವಿರಾದ ಸೆಲೆ, ಚಿಗುರೊಡೆದಂತೆ ನನ್ನೆದೆಯಿಂದಲೇ..
ಹರಡಿದೆ ಈಗಲೇ, ಕಿರುನಗೆಯ ಬಲೆ, ಮುಗಿಲೆತ್ತರಕೂ ಭುವಿಯಿಂದಲೇ...||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ........
 
ಸುರಿಯಿತು ಕನಸು ಸುರಿಯಿತು, ಮೃದುಮಿಂಚಿನ ಓಕುಳಿಯೊಂದನು..
ಬರೆಯಿತು ಮನವು ಬರೆಯಿತು, ನಿನ ಅಂಚೆಗೆ ಓಲೆಯನೊಂದನು..
ಈಗಲೇನೆ ಶುಭತಾರಾಯೋಗ..
ಪ್ರೀತಿಯಲ್ಲಿ ಜೋಡಿಯಾಗು ಬೇಗ..
ಹೊಸಕುಸುರಿಕಲೆ, ಈ ಕ್ಷಣದಿಂದಲೇ, ಅರಳಿದೆ ಮಧುರ ನೆನಪಿಂದಲೇ....||1||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ......
 
ಬೆರೆಯಿತು ಭಾವ ಬೆರೆಯಿತು, ಈ ನೋಟದ ಸಂಗಮದಲ್ಲಿಯೇ..
ಮೆರೆಯಿತು ಜೀವ ಮೆರೆಯಿತು, ಅತಿನೂತನ ಸಂಭ್ರಮದಲ್ಲಿಯೇ..
ಹೇಳದೇನೇ ಒಮ್ಮೆ ಕೇಳದೇನೇ 
ಮೋಡಿ ಮಾಡಿ ಕಾಡಿದಾಕೆ ನೀನೆ...
ಬದಲೀಗ ನೆಲೆ, ಈ ಕ್ಷಣದಿಂದಲೇ, ನವಸೌಧಕೆ ನಿನ್ನೊಲವಿಂದಲೇ...||2||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ
ಈ ಕ್ಷಣದಿಂದಲೇ ನವಿರಾದ ಸೆಲೆ, ಚಿಗುರೊಡೆದಂತೆ ನನ್ನೆದೆಯಿಂದಲೇ..
ಹರಡಿದೆ ಈಗಲೇ, ಕಿರುನಗೆಯ ಬಲೆ, ಮುಗಿಲೆತ್ತರಕೂ ಭುವಿಯಿಂದಲೇ...||

Saturday, December 24, 2011

ಭಾವ ಲಾಸ್ಯ..!!!!!

ನನ್ನ ಎದೆಯ ವೀಣೆಯಲ್ಲಿ, ಮೀಟಿದೊಂದು ಭಾವಕೆ
ಮಿಡಿದಳೀ ಅಭಿಸಾರಿಕೆ..
ನಯನಪುಷ್ಪ ಪೋಣಿಸಿರಲು, ಮೂಡಿದೊಲವಮಾಲಿಕೆ
ಕೊರಳಪದಕ ಸೋಲಿಗೆ..

ಕಲೆಯ ಶಿಲ್ಪ ಉಸಿರು ತಂದು, ಉಸುರಿದಂಥ ಹೆಸರು ನೀನು
ಬೆಳೆದ ಹಸಿರು ಪೈರು ಎಸೆದ, ಎಸೆವ ಕಂಪಿನಾಕೆ ನೀನು..
ದೂರದೃಶ್ಯ ಕ್ಷೀರಪಥದಿ ಮೆರೆವ ತಾರೆಗಳ ಕುಂಚ,
ಬಿಡಿಸಿ ತಂದ ರೂಪವೀಗ, ಮನದಿ ವ್ಯಾಪ್ತ ಬಿಡದೆ ಕೊಂಚ..||

ಝರಿಯ ಒಡಲ ರವದಿ ಬಂತು, ಹೂವುನಡೆಯ ಮೃದುಲತಾಳ
ಕಿವಿಯ ಮೀನು ತೇಲಿ ಇಂದು, ಕಲಕಿತೀಗ ಮನತಿಳಿಗೊಳ..
ನಗೆಯ ಸೂರ್ಯ ಮೇರೆ ಮೀರೆ, ಕಬ್ಬುಸಿಹಿಯ ಸಂಕ್ರಾಂತಿ,
ನಿನ್ನ ನೆನಪೇ ಪ್ರವಹಿಸಿರಲು, ಕನಸಿಗೆಲ್ಲಿಯ ವಿಶ್ರಾಂತಿ..!!!

Thursday, December 22, 2011

( ಈ ಹಾಡು "ಪೃಥ್ವಿ" ಚಿತ್ರದ, "ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ.." ಎಂಬ ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..)

ನನಗೇನೋ ಅಪಾರವಾದ ಸಂತಸ ಕಣ್ಣಲ್ಲಿ..
ನಿನಗೇನೇ ಅಪಾರವಾದ ಮಾನಸ ನನ್ನಲ್ಲಿ..
ಈಗ ಭೂಮಿ ಬಾನು ಎಲ್ಲವ, ನಾನು ಮರೆತೆನು ನಿನ್ನಲ್ಲಿ...|

ನನಗೇನೋ ಅಪಾರವಾದ ವಿಸ್ಮಯ ಕಂಡಲ್ಲಿ..
ನಿನಗೇನೇ ಅಪಾರವಾದ ನಲ್ಮೆಯು ಇನ್ನಿಲ್ಲಿ..
ಬೇಗ ಪ್ರೇಮಜಾಲವ ರೂಪಿಸಿ, ನನ್ನ ಬಚ್ಚಿಡು ನಿನ್ನಲ್ಲಿ...||

ಈ ಕಣ್ಣಲಿ ಕಂಡ ಒಲವೀಗ.. ಹುಣ್ಣಿಮೆಯಲಿ ಮೊರೆವ ಕಡಲಂತೆ..
ನನ್ನುಸಿರಲಿ ನಿನ್ನ ಹೆಸರಿಗ.. ತಂಗಾಳಿಗೆ ಕಂಪು ಬೆರೆತಂತೆ..
ಸವಿನೆನಪಗನ್ನಡಿಯನು ನಾ ಹೊರತೆಗೆದೆ ನನ್ನೆದೆಯಲಿ.. ಬರಿ ಕಂಡೆ ನಿನ್ನದರಲಿ.. ಹೋ ಹೋ..
ಹೊಸ ಕನಸಿನಂಗಡಿಯನು ನಾನು ತೆರೆದೆ ಈ ಮನದಲಿ.. ನೀ ದೋಚಿದೆ ನಗೆಯಲಿ.. ಹೋ ಹೋ...||1||

ನನಗೇನೋ ಅಪಾರವಾದ ಸಂತಸ ಕಣ್ಣಲ್ಲಿ..
ನಿನಗೇನೇ ಅಪಾರವಾದ ಮಾನಸ ನನ್ನಲ್ಲಿ..
ಈಗ ಭೂಮಿ ಬಾನು ಎಲ್ಲವ, ನಾನು ಮರೆತೆನು ನಿನ್ನಲ್ಲಿ...|
 
ನೀನಿಲ್ಲದೆ ಕ್ಷಣವೂ ಯುಗದಂತೆ.. ಆವರಿಸು ನೀ ನನ್ನನೀಗಿಂದೆ..
ನೀ ನಡೆಯಲು ಸನಿಹ ಬಿಡದಂತೆ.. ನಾ ನಡೆಯುವೆ ನಿನ್ನ ನೆರಳಂತೆ..
ಸಿಹಿ ನಿನ್ನ ಒಡನಾಟವ ನೆನೆದು, ಖುಷಿಯು ತುಳುಕಾಡಿದೆ.. ಇನ್ನೊಮ್ಮೆ ಬೇಕಿನಿಸಿದೆ.. ಹೋ ಹೋ..
ಹಿತವಾದ ಕಣ್ಣೋಟವ ಬಯಸಿ ಮನವು ಚಡಪಡಿಸಿದೆ.. ನನ್ನೊಮ್ಮೆ ನೋಡು ಬರಿದೆ...||2||
ಹೋ ಹೋ...

ನನಗೇನೋ ಅಪಾರವಾದ ವಿಸ್ಮಯ ಕಂಡಲ್ಲಿ..
ನಿನಗೇನೇ ಅಪಾರವಾದ ನಲ್ಮೆಯು ಇನ್ನಿಲ್ಲಿ..
ಬೇಗ ಪ್ರೇಮಜಾಲವ ರೂಪಿಸಿ, ನನ್ನ ಬಚ್ಚಿಡು ನಿನ್ನಲ್ಲಿ...||..

Friday, December 16, 2011

                                ಹಂಬಲ..
           

                          ಎಣಿಕೆಯಿಲ್ಲದೆ ಕಲ್ಲು ಎಸೆದು ಬರಿದಾಗಿಹುದು
                          ಉಳಿದದ್ದು ನಾನೀಗ ಕುಳಿತಿರುವ ಬಂಡೆ..
                          ದಾಸವಾಳದ ಸೂರ್ಯ, ಗಗನಗರ್ಭದಿ ಲೀನ
                          ನೀನು ಜೊತೆಯಿರದೆ, ನೀರವತೆಯಲಿ ದಂಡೆ..

                          ನೂಪುರದ ಇನಿದನಿಯ ತೆರೆಯ ಹಂಬಲದಲ್ಲಿ,
                          ಭೋರ್ಗರೆವ ತೆರೆಗಳದೂ ಮೌನಗೀತೆ..
                          ಜಡನದಿಯು ಸಾಗರವ ಸೇರಲುತ್ಸುಕವಿಹುದು,
                          ಭೇಟಿಗೊಮ್ಮೆಯೂ ಬರದೆ, ಏಕೆ ಕುಳಿತೆ.??!!

                          ನೀನಿರದ ಬೇಸರದ ಭಾವತೀವ್ರತೆಯಲ್ಲಿ
                          ಕಣ್ಣ ಕೊಳ ತುಳುಕಾಡಿ, ಕೆನ್ನೆ ತೇವ..
                          ಮರದ ಜೋಡಿಯ ಹಕ್ಕಿ ಕೆಣಕಿಹುದು ಏಕಾಂತ,
                          ನೋಟದಲೆ ಹುದುಗಿಸಿಹೆ, ಒಡಲ ನೋವ..

                          ತಲ್ಲಣಿಸುವಂತೆ ಮನ ಮಾಡಿರುವೆ ನೀ ಗೆಳತಿ,
                          ಹೇಳು ಬೇಗನೆ ಮುಂದೆ ನನ್ನ ಪಾಡೇನು.?
                          ಎದೆಯೊಳಗೆ ಪೂಜಿಸಲು, ಒಲವಸುಮವಿರಿಸಿರುವೆ,
                          ತಡವಿರದೆ ಗುಡಿಯೊಳಗೆ ಬರಬೇಕು ನೀನು..!!!


( ಚಿತ್ರಕೃಪೆ --
123rf.com )