Thursday, December 20, 2012

ದ್ವಂದ್ವ..!!




ನಯನಗೋಚರದ ಋತವಿಷಯಗಳಿಗನೃತತ್ವ
ಕಾಣಿಸದ ಅನೃತ ಸಂಗತಿಗಳಿಗೆ ಋತವು..
ಒಬ್ಬೊಬ್ಬರೊಂದೊಂದು ದೃಷ್ಟಿ ಕಾಲಾತೀತ
ಪರ-ವಿರೋಧದ ನಡುವೆ ಸಮಾನ ಅಂತರವು..


ಧರ್ಮವನೆ ಜೀವಿಸುವ ಧರ್ಮನಿಷ್ಠನು ಅಲ್ಲಿ
ಧರ್ಮವಿಲ್ಲದೆ ದೈವದೂಷಕನೂ ಇಹನಿಲ್ಲಿ..
ನಡುಮಧ್ಯೆ ದೇವರನೆ ವ್ಯಾಪಾರ ಮಾಡುವವ
ಅದರೊಳಗೂ ಒಂದಿಷ್ಟು ಕಾಪಟ್ಯದ ವಿಶ್ವ..

ಇತಿಹಾಸವನು ಮರೆತು ಮೆದ್ದು ಮಲಗಿಹನೊಬ್ಬ
ಚರಿತೆಪುಟಗಳ ಕೆದಕಿ ಓದಿ ಬೀಗುವನೊಬ್ಬ.
ನಡುಮಧ್ಯೆ ಎಲ್ಲವನು ತಿರುಚಿ ಹೇಳುತ ನಿತ್ಯ
ಕಲಸುಮೇಲೋಗರವು ಗತ ಸತ್ಯ-ಮಿಥ್ಯ..

ದೇಶದುತ್ಥಾನದಲಿ ಉಸಿರು ಬಸಿದಿಹ ಧೀರ
ದೇಶವನೆ ಕೊಳ್ಳೆಹೊಡೆದಾತ್ಮಹೀನನು ಚೋರ..
ನಡುಮಧ್ಯೆ ದೇಶಭಾಷೆಯ ಪತಾಕೆಯ ಹೊತ್ತು
ತಮ್ಮ ಮನೆ ಸೂರಿನೊಳು ಮುಚ್ಚಿಹರು ತೂತು..

ಲೋಕದ ಉಗಿಬಂಡಿ ಸಾಗಿದೆ ನಿರಂತರವು
ಎಂದಿಗೂ ಒಂದಾಗದಿಹ ಹಳಿಯ ಮೇಲೆ..

ಅಂಕುಡೊಂಕುಗಳಾಟ ಇದ್ದರೂ ಅಲ್ಲಿಲ್ಲಿ
ಬಿದ್ದಿಲ್ಲ ಉಗಿಬಂಡಿ ; ಇದು ಯಾರ ಲೀಲೆ..?!!!!!
 


ಚಿತ್ರಕೃಪೆ - ಅಂತರ್ಜಾಲ

Wednesday, December 12, 2012

[ ಈ ಹಾಡು, "ಹುಡುಗರು" ಚಿತ್ರದ "ನೀರಲ್ಲಿ ಸಣ್ಣ ಅಲೆಯೊಂದು ಮೂಡಿ" ಗೀತೆಯ ರಾಗಕ್ಕೆ ಬರೆದ ಹೊಸ ಸಾಹಿತ್ಯ ]

ನಾ ಕಂಡ ಕಣ್ಣ ಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..
ಒಲವಾಯ್ತು ಮೌನದಿ, ಎದೆಯಲ್ಲಿ ಹಾಡುತಾ..
ಮಗದೊಮ್ಮೆ ಮೌನವೇ..ಬೇರೆಯಾಗುತಾ..||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..

ಊರೆಲ್ಲ ಪ್ರೀತಿಯನರಸಿ ನಾನಂತೂ ಅಲೆಮಾರಿ..
ಯಾರಿಲ್ಲ ಹಾದಿಯಲೀಗ ನಿನ್ನಂಥ ಸಹಚಾರಿ..
ಬಾನಿನಲ್ಲಿ ಮಿಂಚೊಂದು ಬಂದ ಹಾಗೆ ನೀನು,
ಘಳಿಗೆಯಷ್ಟೇ ಬೆಳಕಾಗಿ ಕಾಣದಾದೆ ಇನ್ನು..
ಹೊಂಗನಸ ಹೂವ ಪೋಣಿಸಿದೆ ನಿನ್ನ ಮುಡಿಗರ್ಪಿಸೋಣವೆಂದು
ಹೂವೆಲ್ಲ ಚೆಲ್ಲಿ ಈ ಹಾರ ಛಿದ್ರ, ಇದಕೆಲ್ಲಿ ತಾಣವಿಂದು..||1||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..

ತಂಗಾಳಿ ಬೀಸಿದರೂನು ಕಂಪಿಲ್ಲ ಜೀವಂತ..
ಮುಳ್ಳಂತೆ ಕಾಡಿದೆ ಈಗ ನೀನಿಲ್ಲದೇಕಾಂತ..
ಭಾವಕೊಂದು ಕಿಡಿ ಸೋಕಿ ಹೊತ್ತಿ ಉರಿದ ಬಗೆಗೆ..
ಬಿರುಕು ಮೂಡಿ ಸೇತುವಲಿ ಭಿನ್ನವಾಯ್ತೆ ಬೆಸುಗೆ..
ಧ್ವನಿ ನಿಂತರೂನು ಬರಿ ಗುನುಗುತಿಹುದು ಈ ಹೃದಯ ನಿನ್ನ ರಾಗ..
ಹೊರಹೋದರೂನು ನನ್ನಿಂದ ನೀನು, ಉಳಿದಿಹುದು ಕೂತ ಜಾಗ..||2||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..
ಒಲವಾಯ್ತು ಮೌನದಿ, ಎದೆಯಲ್ಲಿ ಹಾಡುತಾ..
ಮಗದೊಮ್ಮೆ ಮೌನವೇ..ಬೇರೆಯಾಗುತಾ..||

Sunday, December 9, 2012

ಪ್ರಸ್ಥಾನ ಗೀತೆ..!!




ಹೊರಟಿಹೆನು ನಾನಿಂದು ಭಾರ ಹೆಜ್ಜೆಯನಿಟ್ಟು
ಮರಳಿ ನನ್ನಯ ದಿಶೆಗೆ ನಿನ್ನಿಲ್ಲಿ ಬಿಟ್ಟು...||
 
ಮುಂಬಾಗಿಲಂಚಿನಲಿ ಕೊಂಚ ಮಿಂಚಾಡಿಸುವ
ರೆಪ್ಪೆ ಬಡಿಯದ ನಿನ್ನ ಕಂಗಳು ಹೊಳೆದು..
ಮತ್ತೊಮ್ಮೆ ಕರೆದಂತೆ ಭಾಸ; ಬರಲೇ? ಬಿಡಲೇ?
ಸಂದಿಗ್ಧಭಾವದಲಿ ಹೃದಯ ನಿಂತಿಹುದು..||

ಏರಿ ಕೂತಿಹ ಬಂಡಿ, ಓಡುತಿದೆ ಊರಿನೆಡೆ
ಬರಲೊಪ್ಪದೆನ್ನ ಮನವೆಳೆದು ಸೆಳೆದು..
ಹಾದಿಯ ಇಕ್ಕೆಲದಿ ನಿಂತ ಹಸುರಿನ ಚೆಲುವು
ನನ್ನ ಏಕಾಂತ ತಣಿಸದಲೇ ಸೋತಿಹುದು..|| 

ನಿನ್ನ ನಗುವಿರದೆ ಆರಂಭವಾಗುವ ಬೆಳಗು
ನಿನ್ನ ಮಾಂತ್ರಿಕಸ್ಪರ್ಷವಿರದಡಿಗೆ ಘಮವು..
ನಿನ್ನ ಹೂಬಂಧದಲಿ ಕರಗಿಹೋಗದ ರಾತ್ರಿ
ನೆನೆದೆ ಬರಿ ಪರಿತಪಿಸುತಿಹೆ ನಾನು ಕ್ಷಣವೂ..||

ತವರಿನಂಗಳದಲ್ಲಿ ನಿನಗೆ ಬಾಲ್ಯದ ನೆನಪು
ನನಗಾದರೋ ವಿರಹದುರಿಯೇ ನೂರೊಂದು..
ದಿನವು ಕಳೆಯಲು ಗೀಚುವೆ ದಿನಾಂಕದ ಗುರುತು
ಸಂತೈಸಲಾವರಿಸು ಬಳಿ ಬೇಗ ಬಂದು..|| 



ಚಿತ್ರಕೃಪೆ - ಅಂತರ್ಜಾಲ