Tuesday, November 27, 2012

ಕಲಿಕೆ..!!ಅಲ್ಲೊಂದು ಹಕ್ಕಿ ತಾರುಣ್ಯ ಸಂಭ್ರಮದಲ್ಲಿ
ಉಲಿದು ಚಿಲಿಪಿಲಿಯ ಸ್ವರತಾನಸಂಗತಿಯ,
ಗರಿಗೆದರಿ ದೂರದ ದಿಗಂತಕ್ಕೆ ಹಾರಿರಲು
ಕಲಿತಿಹೆನು ಬದುಕಿನ ಸ್ವಾವಲಂಬನೆಯ..||1||

ಇರಲಿ ಇರದಿರಲಿ ಮುಡಿವವರು ಮೆಚ್ಚುವ ಜನರು
ಗಂಧ-ಸೌಂದರ್ಯತೆಗೆ ಹಾಡಿ ಹೊಗಳಿಕೆಯ..
ರವಿಯುದಯವಾದ ಚಣ ಬಿರಿವ ಸುಮತತಿಯಿಂದ
ಕಲಿತಿಹೆನು ಅನವರತ ಕರ್ತವ್ಯಮತಿಯ..||2||

ನೋಟ ಹಾಯಿಸದರೆಲ್ಲೆಡೆ ಎಲ್ಲೆ ಮೀರಿರುವ
ಜಲರಾಶಿಯಲಿ ಹುದುಗಿಸುತ ಜೀವಕುಲವ..
ತೆರೆಗಳುದ್ಘೋಷದಲಿ ಮೆರೆವ ಕಡಲಾಟದಿ
ಕಲಿತಿಹೆನು ನಾನಿಂದು ಗಾಂಭೀರ್ಯತನವ..||3||

ತನ್ನ ಬಸಿರೊಳಗಿಂದ ಚೈತನ್ಯವೀಯುತಲಿ
ಭೂಮಿ ತಾ ಪೊರೆದಿಹಳು ಬಗೆಬಗೆಯ ಪ್ರಾಣ..
ದ್ರೋಹವೆಸಗಿದರೂನು ಮತ್ತೆ ಮಮತೆಯ ತೋರೆ,
ಕಲಿತಿಹೆನು ಕ್ಷಮಾ-ಸಹನೆಯ ಸುಗುಣ..||4||

ದಟ್ಟಡವಿಯನೆ ಆಹುತಿಯನಾಗಿಸೆ ವಹ್ನಿ
ದುಷ್ಟತನವನು ಪೂರ್ಣ ಭಸ್ಮಿಸುವ ಕಲೆಯ..
ಕೆಳಮುಖದಿ ಹೂತ್ತಿಸೆ ಪುನರ್ಜ್ವಾಲೆ ಪುಟಿದಿರಲು
ಕಲಿತಿಹೆನು ಎಂದಿಗೂ ಊರ್ಧ್ವದೆಡೆ ಗತಿಯ..||5||

ಜೊತೆಬಂದ ಪರಿಮಳವ ಕೂಡಿ ಸಹಿಸುತ ಮುಂದೆ
ಎದುರಿಸುತ ಎದುರಿನ ಪರ್ವತದ ತಡೆಯ..
ಜನರ ಶ್ವಾಸೋಚ್ಛ್ವಾಸಹೇತುವಿಹ ಪವನದಿಂ
ಕಲಿತಿಹೆನು ನಿತ್ಯವೂ ಚಲನಶೀಲತೆಯ..||6||

ಬ್ರಹ್ಮಾಂಡ ವ್ಯಾಪಿಸಿದನಂತತೆಯ ಆಕಾಶ
ಭಿನ್ನವಿದ್ದರು ಪೂರ್ವ-ಪಶ್ಚಿಮಗಳೆಂದು..
ಅವರು-ಇವರೆನ್ನದಲೇ ಸೂರಾಗೆ ಸರ್ವರಿಗೂ
ಕಲಿತೆ ಸಮತೆಯೇ ಏಕತೆಯ ಮೂಲವೆಂದು..||7||

ಇನಿತು ವೈಚಿತ್ರ್ಯಗಳ ಒಡಲೊಳಗೆ ಕಾಪಿಟ್ಟು
ಸತತ ಬೋಧಿಸುತಿಹಳು ಪ್ರಕೃತಿಯ ಮಾತೆ..
ಬರಿ ಬುದ್ಧಿಯೊಳು ಬರದೆ, ಕಾರ್ಯದೊಳು ಕಲಿಕೆಯಿರೆ
ನಮ್ಮ ಜೀವನವೆಲ್ಲ ಮಹಾಯಶೋಗಾಥೆ..||8||ಚಿತ್ರಕೃಪೆ-ಅಂತರ್ಜಾಲ

Wednesday, November 21, 2012

[ ನಾನು ಬರೆದ 25ನೇ ಚಿತ್ರಗೀತೆ..!!!!
'ಸಂಧ್ಯಾರಾಗ' ಚಿತ್ರದ, 'ಪೂರಿಯಾ  ಕಲ್ಯಾಣ' ರಾಗದಲ್ಲಿರುವ, 'ನಂಬಿದೆ ನಿನ್ನ ನಾದದೇವತೆಯೇ' ಹಾಡಿನ ಧಾಟಿಗೆ ಬರೆದ ನೂತನ ಗೀತೆ.. ಶಿವನ ಸ್ತೋತ್ರ ರೂಪದಲ್ಲಿ...]ಪಾಲಿಸು ದೇವ ಪಾರ್ವತೀಧಣಿಯೆ..
ಲಯತಾಳದೊಡನೆ ಕುಣಿವ ನಟಮಣಿಯೆ..|
ಉರಗಭಸ್ಮಭೂಷಿತ ಶರೀರಿಯೇ..
ಡಮರುಶೂಲಧರ ಕೈಲಾಸದೊರೆಯೇ..||


ಪಾಲಿಸು ದೇವ ಪಾರ್ವತೀಧಣಿಯೆ..|

ನಂದಿಗಮನ ಪದ ಪೊಂದಿದೆ ಛಂದದಿ,
ಅಂಧವ ನಂದಿಸೋ ಇಂದುವಿನಂದದಿ..
ಕುಂದು..ನೂರೆಂಟಿದೆ..
ಒಂದೂ..ಗಣಿಸದೆ..
ದೇವ..ದೇವ..ಕಾರುಣ್ಯದಾಂಬುಧೇ..
ಬಂಧು ಕಾಣೆ ನೀನಲ್ಲದೆ...
ತಂದೆಯಂತೆ ಪೊರೆ ಹಿಂಗದೆ...||  

Thursday, November 15, 2012

ಮತ್ತೆ ಚಿಗುರಿತು ಮರ..!!


ಪೊಡವಿಯೊಡಲಿನ ತುಸು ಬೆಚ್ಚಗಿನ ಕಾವು
ಹಿಡಿದಿಟ್ಟ ಮಣ್ಣಿನೊಳು ಊರಿಸುತ ಠಾವು..
ಮೊಳಕೆಯೊಡೆದರಳಿಹುದು ವೃಕ್ಷದ ಚಿಗುರು
ಪ್ರೀತಿಸುತ ತಾ ನಿಂತ ನೆಲವ ಹಗಲಿರುಳು..

ಯಾರೋ ನೀರೆರೆದಿಹರು ವಾತ್ಸಲ್ಯ ಸಿಂಧು
ಬೇಲಿಯೊಳಗಿಂಬಿಟ್ಟು ಪೊರೆವನ್ಯ ಬಂಧು..
ಮಗದೊಬ್ಬ ಶಕ್ತಿರಸ ನೀಡಿ ಬೆಳೆಸಿಹನು,
ಪ್ರತಿಹೆಜ್ಜೆಯಲು ಪರಿಸರದ ಋಣದಿ ತಾನು..

ಹೊಸದೇನೋ ಸಾಧಿಸುವ ಬಯಕೆ ತುಂಬಿರಲು
ಸುತ್ತಮುತ್ತಲು ಬರೀ ಕಳೆಗಳದೆ ಸಾಲು..
ಸ್ವಾರ್ಥ-ಅಸೂಯೆಗಳ ಗೆದ್ದಲಿನ ಹುಳುಗಳು
ಕೊರೆದು ಬರಿದಾಗಿಸಿವೆ ಮರದ ಒಳತಿರುಳು..

ಕ್ಷೀಣವಾಗಿಹುದಿಲ್ಲಿ ಇನಿದನಿಯ ಹುರುಪು,
ನಿಸ್ತೇಜವಾಗಿಹುದು ಹೂ-ಎಲೆಯ ಹೊಳಪು..
ಆದರೂ ನವಚೈತ್ರದಾಪೇಕ್ಷೆಯಲಿ ನಿರತ
ಅನ್ಯದಿಶೆ ಹೊಂಗಿರಣದರಸುವಿಕೆ ನಿರುತ...

ಮರಳುಗಾಡಲಿ ದೊರೆವ ಜಲದ ಸಿಹಿಸೆಲೆಯಂತೆ
ಅಲ್ಲೊಂದು ಇಲ್ಲೊಂದು ಸ್ಫೂರ್ತಿಗಳ ಸಂತೆ..
ಭರವಸೆಯ ಹೊಮ್ಮಿಸಲು ಸಾಕು ನೆಲೆಯೊಂದು
ಹೊಸಕನಸಿನಲಿ ಮತ್ತೆ ಮರ ಚಿಗುರಿತಿಂದು..||