Friday, July 6, 2012

ಮೋಡದ ಗುಮ್ಮ.. [ಶಿಶುಗೀತೆ]


ಅಮ್ಮ ನೋಡಾಗಸದಿ ಮೋಡದ
ಗುಮ್ಮ ಗರ್ಜಿಸಿ ಬರುವನು..
ಧುಮ್ಮನಿತ್ತೆಡೆ ಬರಲು ಅಂಜಿಕೆ
ಸುಮ್ಮನಿಲ್ಲಿಯೆ ಇರುವೆನು..||


ಹೊರಗೆ ಹೋಗಲು ಮಳೆಯ ನೀರನು
ಸುರಿಸಿ ತೊಂದರೆ ನೀಡುವ..
ಮರಳಿ ಎಲ್ಲೆಡೆ ಕೆಸರಿನೋಕುಳಿ
ಎರಚುತಲಿ ನೆಗೆದಾಡುವ..||


ಬೆಳಗದಲೆ ರವಿಮಾಮ ಮೇಘದ
ಒಳಗೆ ಅಡಗಿಹ ಹೆದರುತಾ..
ಚಳಿಗೆ ಮೈ ಗಡ ನಡುಗುತಿಹುದು 
ಬಳಿಯೇ ನೀನಿರು ರಮಿಸುತಾ..||


ದಾಳಿ ನಡೆಸುವ ಗುಡುಗು-ಮಿಂಚಲಿ
ಧೂಳನೆಬ್ಬಿಸಿ ಗಾಳಿಗೆ
ತಾಳಲಾರೆನು ಗುಮ್ಮನಾರ್ಭಟ
ನಾಳೆ ಹೋಗುವೆ ಶಾಲೆಗೆ..||