Friday, March 16, 2012

ಸಂಪಿಗೆಯ ಕಂಪು















ಆಕೆ ಮುಡಿದಿದ್ದ 
ಸಂಪಿಗೆಯ ಕಂಪೊಂದು
ಉಳಿದುಕೊಂಡಿದೆ ಹಾಗೆಯೇ..
ಚಣಚಣವೂ ಅನುರಣಿಸಿ
ಹುಡುಕಿ ಕೆದಕುತ ಮನದಿ
ಮರುಗಿದ ಮೌನವನು ಹೀಗೆಯೇ..!!


ನನ್ನ ವಿರಹದ ಉರಿಯೇ
ಅವಳ ತಂಪುಕೊಳವಿರಲು 
ಬೇಡವೆನ್ನಲಿ ಏಕೆ, ಸೌಖ್ಯಹೇತು..!!
ಒಳಗೆ ಬೆಚ್ಚಗೆ ಇದ್ದ
ಹಕ್ಕಿ ಹಾರಲು ದೂರ
ಹರಸದೆ ಬೇರೇನು ಗೂಡು ಮಾಡೀತು.??!


ಎದುರು ಚೆಲ್ಲಿದೆ ಸಾಲು
ಮಲ್ಲೆಹೂವಿನ ರಾಶಿ
ಅವಳ ಸುಮಸಮಘಮವು ಬಂದೀತೆ ಇಲ್ಲಿ..!?
ನೀರ ಮೇಲಿನ ಬರಹ
ತೆರೆಯೊಳಗೆ ಹುದುಗೀತು.
ನನ್ನ ಕನಸಿನ ಚಿತ್ರ ಕಲ್ಲಿನಲ್ಲಿ..!!!


ಗೋರಿ ಕಟ್ಟಿದರೂನು,
ಪ್ರವಾಸೀ ಸ್ಥಳದಂತೆ 
ನಿತ್ಯ ಯೋಚನೆ ನೂರು ಭೇಟಿಯಿಡುತಿಹವು..
ಬರಿದಾದ ಕಣ್ಣಿನಲೂ
ಹನಿಯ ಧಾರೆಯು ಜಿನುಗಿ
ಮನದ ತಾಪಕೆ ಶೀಘ್ರ ಆವಿಯಾಗಿಹವು..!! 



ಆಕೆ ಮುಡಿದಿದ್ದ 
ಸಂಪಿಗೆಯ ಕಂಪೊಂದು
ಉಳಿದುಕೊಂಡಿದೆ ಹಾಗೆಯೇ..
ಚಣಚಣವೂ ಅನುರಣಿಸಿ
ಹುಡುಕಿ ಕೆದಕುತ ಮನದಿ
ಮರುಗಿದ ಮೌನವನು ಹೀಗೆಯೇ..!!


4 comments:

  1. ವಿರಹದ ಬೇಗುದಿಗೆ ಸಾಲುಗಳ ಜೊತೆ ಕೊಟ್ಟಾಗ ಮೂಡಿರುವ ಭಾವ ಸಮ್ಮಿಲನ ಪ್ರೀತಿಯ ತೊಟ್ಟಿಲಲ್ಲಿ ಓದುಗರನ್ನಿಟ್ಟು ತೂಗಿದೆ ಭೀಮಣ್ಣ.. ಸಮರ್ಥ ರಚನೆ, ಎಲ್ಲೂ ನನ್ನನ್ನು ನಿರಾಸೆಗೊಳಿಸಲಿಲ್ಲ.. ಪದಪ್ರಯೋಗದಲ್ಲಿ ಮೇರೆ ಮೀರುತ್ತೀರಿ.. ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ಪ್ರೌಢಿಮೆ ಸಿದ್ಧಿಸಿಕೊಂಡ ನಿಮ್ಮನ್ನು ಕಂಡಾಗ ಹೆಮ್ಮೆಯೆನಿಸುತ್ತದೆ..
    ಆಕೆ ಮುಡಿದಿದ್ದ
    ಸಂಪಿಗೆಯ ಕಂಪೊಂದು
    ಉಳಿದುಕೊಂಡಿದೆ ಹಾಗೆಯೇ..
    ಚಣಚಣವೂ ಅನುರಣಿಸಿ
    ಹುಡುಕಿ ಕೆದಕುತ ಮನದಿ
    ಮರುಗಿದ ಮೌನವನು ಹೀಗೆಯೇ..!!
    ಈ ಸಾಲುಗಳೇ ನನ್ನ ಮನಸ್ಸನ್ನು ಸೆಳೆದುಬಿಟ್ಟವು.. ಕೈಯಲ್ಲುಳಿದ ಸಂಪಿಗೆಯ ಕಂಪೇ ಹಳೆಯ ನೆನಪನ್ನು ಕೆದಕಿ ಕಾಡುವಂತೆ.. ಭೇಷ್..:)))

    ReplyDelete
  2. ಚೆನ್ನಾಗಿದೆ. ಒಳ್ಳೆ ಭಾವ.. ಒಳ್ಳೆ ಶಬ್ಧಗಳು.

    ReplyDelete
  3. ಅವಳು ಎನ್ನುವ ನೆನಪೇ ಅನುರಿಂಗಣ. ಆ ನೆನಪು ಸದಾ ಕಾಡೋ ಚಿಂತೆ!

    ಹಾಡಿಸಿಕೊಂಡು ಹೋಗುವ ನಿಮ್ಮ ಕಾವ್ಯ ಗುಣ ಚಿರಂತನವಾಗಿರಲಿ.

    ReplyDelete
  4. ನನಗೆ ತುಂಬಾ ಇಷ್ಟವಾದ ಲಯಬದ್ಧ ಕವಿತೆ ಇದು. ಚೆಂದದ ಭಾವ ಸುರುಳಿ ಬಿಚ್ಚುವ ಹೃದಯ ನಿಮ್ಮದು ಭೀಮಣ್ಣ. ಶುಭವಾಗಲಿ.

    ReplyDelete