Tuesday, August 13, 2013

ಕಾಲೇಜು ದಿನಗಳು...! [ಭಾಗ ೨]

ಎರಡನೇ ಸೆಮಿಸ್ಟರ್ ನಲ್ಲಿ ಕೊಠಡಿಗಳು ಬದಲಾಗಿದ್ದವು. ಬಯೋಮೆಡಿಕಲ್ ವಿಭಾಗದ, ಅಥವಾ ಸಿವಿಲ್ ವಿಭಾಗದ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಇದು ಕೆಮಿಸ್ಟ್ರಿ ಸೈಕಲ್ ಆಗಿದ್ದರಿಂದ, ಈ ಸೆಮಿಸ್ಟರ್ ನಲ್ಲಿ ಕಂಪ್ಯೂಟರ್ ಸೈನ್ಸ್ ನ ವಿಷಯವೂ ಇತ್ತು.
ಸತ್ಯವಾಗಲೂ, ನನಗೆ ಕಂಪ್ಯೂಟರ್ ನ ಬಗ್ಗೆ ಗಂಧ-ಗಾಳಿಯೂ ಗೊತ್ತಿರಲಿಲ್ಲ. ಬಹುಶಃ ಅನೇಕರು ನಗಬಹುದು, ನಾನು ಇಂಜಿನಿಯರಿಂಗ್ ಸೇರಿದಾಗ, ನನಗೆ ಕಂಪ್ಯೂಟರ್ ಅನ್ನು ಆನ್ ಮಾಡೋದು ಹೇಗೆ ಅನ್ನೋದು ಕೂಡ ಗೊತ್ತಿರಲಿಲ್ಲ. ಆದರೂ ಸಿ.ಇ.ಟಿ ನಲ್ಲಿ ಅದ್ಹೇಗೆ "ಕಂಪ್ಯೂಟರ್ ಸೈನ್ಸ್" ಆಯ್ಕೆ ಮಾಡಿದ್ದೇನೋ ಗೊತ್ತಿಲ್ಲ..

ಮೊತ್ತಮೊದಲ ಗಣಕಯಂತ್ರದ ಲ್ಯಾಬ್ ನಲ್ಲಿ, ಒಂದು ಸಣ್ಣ "word document" ತಯಾರಿಸಲು ಹೇಳಿದರು. ನನ್ನ ಜೊತೆಗಿದ್ದವರು ಪಟಪಟನೆ ಕೀಪ್ಯಾಡ್ ಕುಟ್ಟುತ್ತಿದ್ದರೆ, ನನಗೆ ಏನೂ ಮಾಡಲು ತೋಚದೆ ಸುಮ್ಮನೆ ಕುಳಿತಿದ್ದೆ.. ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಆತ್ಮೀಯ ಗೆಳೆಯ "ಹರ್ಷ", ಅದನ್ನು ಆನ್ ಮಾಡಿಕೊಟ್ಟು, ಹೇಗೆ ಡಾಕ್ಯುಮೆಂಟ್ ಮಾಡೋದು ಅಂತ ಹೇಳಿಕೊಟ್ಟ. ಆದರೂ ಅಂಬೆಗಾಲಿಡುವ ಮಗುವಿನಂತೆ ಒಂದೊಂದೇ ಅಕ್ಷರಗಳನ್ನು ಒತ್ತುತ್ತಾ ಹೇಗೋ ಮುಗಿಸಿದೆ. ಆದರೆ ಅವತ್ತೇ ಭಯ ಆವರಿಸಿತು. ಏನೂ ಗೊತ್ತಿಲ್ಲದ ಈ ಕಂಪ್ಯೂಟರ್ ವಿಷಯದಲ್ಲೇ ಇನ್ನು ಮುಂದಿನ ೩ ವರ್ಷ ಕಳೆಯಬೇಕಲ್ಲ..ಇದು ನನ್ನಿಂದ ಸಾಧ್ಯವೇ, ಎಂಬ ದಿಗಿಲು. ಅವತ್ತು ಮನೆಗೆ ಹೋಗಿ ಮಂಕಾಗಿ ಕೂತಿದ್ದೆ. ಅಕ್ಷರಶಃ ಕಣ್ಣು ತುಂಬಾ ನೀರಿತ್ತು.. ಆದರೆ ಸ್ನೇಹಿತರೆಲ್ಲರ ಧೈರ್ಯದ ಮಾತುಗಳಿಂದ ಸ್ವಲ್ಪ ಸಮಾಧಾನವಾಗಿತ್ತು..
ಆದರೆ, ನಾನು ಕಂಪ್ಯೂಟರ್ ಅನ್ನು ಹೆಚ್ಚು ಅಭ್ಯಾಸ ಮಾಡಬೇಕಾದ್ದು ಅನಿವಾರ್ಯವಾಗಿತ್ತು. ಆ ಮೊದಲನೇ ಇಂಟರ್ನಲ್ ನಲ್ಲಿ ಕಂಪ್ಯೂಟರ್ ವಿಷಯದಲ್ಲಿ ನನಗೆ ಬಂದ ಅಂಕಗಳು ೮.. ತರಗತಿಯ ಟಾಪರ್ ಆಗಿ, ಇಂಥಾ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲ. ಅವತ್ತೇ ಕಂಪ್ಯೂಟರ್ ಒಂದನ್ನು ಖರೀದಿಸಲು ತೀರ್ಮಾನಿಸಿದೆ..
ಡೆಸ್ಕ್ಟಾಪ್ ತೊಗೊಂಡ್ರೆ ಮನೆತುಂಬಾ ಜಾಗ ಹಿಡಿಯುತ್ತೆ ಅಂತ, ಲ್ಯಾಪ್-ಟಾಪ್ ಅಂತ ನಿರ್ಧರಿಸಿದೆ. ಬೆಂಗಳೂರಿನಲ್ಲಿರುವ ನನ್ನ ಭಾವ [ ಶ್ರೀ.ಜಯತೀರ್ಥ ಕಟ್ಟಿ ], ಆ ವಿಷಯವಾಗಿ ಬಹಳ ಸಹಕರಿಸಿದರು. ಕೊನೆಗೂ ಅವರ ಸಹಾಯದಿಂದ "DELL Vostro" ಲ್ಯಾಪ್-ಟಾಪ್ ತೊಗೊಂಡು ಮನೆಗೆ ಬಂದೆ. 120 GB, 1 GB ನಷ್ಟು configuration  ಇದ್ದ ಆ ಗಣಕಯಂತ್ರ, ಆಗ ನನ್ನ ಪಾಲಿನ ಸಕಲವೂ ಅದೇ ಆಗಿತ್ತು.. ಆಗ ಕೇವಲ ತರಗತಿಯಲ್ಲಿ ಹೇಳಿಕೊಟ್ಟ ಪ್ರೊಗ್ರಾಮ್ ಗಳನ್ನು ಕಲಿಯಲು ಪ್ರಾರಂಭಿಸಿದೆ..
ಆಗ, ಕಂಪ್ಯೂಟರ್ ವಿಷಯವನ್ನು ಚೆನ್ನಾಗಿ ಹೇಳಿಕೊಟ್ಟವನು, "ಸಂದೀಪ ಎಸ್.ಎಚ್"..ಅವನಿಗೆ ಆ ವಿಷಯದ ಒಳಹೊರಗು ಬಹುತೇಕ ಗೊತ್ತಿತ್ತು..ಕಾಲೇಜಿನಲ್ಲಿ ಸಮಯ ಸಿಕ್ಕಾಗಗಲೆಲ್ಲ ನನಗೆ ಪ್ರೊಗ್ರಾಮ್ ಗಳನ್ನೂ ಅರ್ಥ ಮಾಡಿಸುತ್ತಿದ್ದ.. ಅವನ ಆ ಬೋಧನೆ ಬಹಳಷ್ಟು ಮನದಟ್ಟು ಮಾಡಿತು..!!

ಈ ಸಂದರ್ಭದಲ್ಲಿ ನಾನು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೇಳಲೇಬೇಕು..
"ಕೃಷ್ಣ ಹುಯಿಲಗೋಳ್"-ನಾನೆಂದೂ ಮರೆಯಲಾಗದ ವ್ಯಕ್ತಿಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಕೃಷ್ಣ ಅರ್ಜುನನ ಸಾರಥಿಯಾದಂತೆ, ನನ್ನ ಇಂಜಿನಿಯರಿಂಗ್ ಬದುಕಿನಲ್ಲಿ ಈ ಕೃಷ್ಣ ನನ್ನ ಮಾರ್ಗದರ್ಶಕನಾಗಿದ್ದ.. ಹಾಗೆ ನೋಡೋದಾದ್ರೆ, ಇವನು ನನಗೆ ದೂರದ ಸಂಬಂಧಿಯಾಗಿದ್ದರೂ, ಒಂದೇ ಊರಿನಲ್ಲಿದ್ದರೂ, ಯಾವುದೋ ಕೆಲವು ಸಮಾರಂಭಗಳಲ್ಲಷ್ಟೇ ಭೇಟಿಯಾಗುತ್ತಿತ್ತು. ಅವನ ಆತ್ಮೀಯ ಒಡನಾಟ ಶುರುವಾಗಿದ್ದೇ ಬಾಪೂಜಿ ಕಾಲೇಜ್ ಸೇರಿದ ನಂತರ..
ಇವನದು "Information Science" ವಿಭಾಗ. ವಿಭಾಗ ಬೇರೆ ಇದ್ದರೂ, ವಿಷಯಗಳು ಬಹುತೇಕ ವಿಷಯಗಳು ಒಂದೇ ಆಗಿದ್ದರಿಂದ, ನನ್ನ ಪಠ್ಯಪುಸ್ತಕಗಳ ಪ್ರಾಯೋಜಕನೂ ಅವನೇ ಆಗಿದ್ದ.. ಅದಕ್ಕಾಗಿ ಸದಾ ಅವನಿಗೆ ಋಣಿ..ನನ್ನ ಲ್ಯಾಪ್-ಟಾಪ್ ಗೆ ಬೇಕಾದ ಎಲ್ಲ ತಂತ್ರಾಂಶಗಳನ್ನು ಅದರಲ್ಲಿ ಅಳವಡಿಸಿಕೊಟ್ಟಿದ್ದೂ ಕೃಷ್ಣನೇ. ತೊಂದರೆ ಬಂದಾಗೆಲ್ಲಾ ಅವನ ಮನೆಗೆ ಓಡಿಹೊಗುತ್ತಿದ್ದೆ..

ಎಲ್ಲಕ್ಕಿಂತ ಮುಖ್ಯವಾಗಿ, ನನಗೆ ಕನ್ನಡದ ಬರವಣಿಗೆಯಲ್ಲಿ ಈ ಮಟ್ಟಿಗಿನ ಉತ್ಸಾಹಕ್ಕೆ ಕಾರಣನೂ ಇವನೇ.. ನಮ್ಮ ಕೃಷ್ಣ ಅಧ್ಬುತ ಕವಿ. ಪ್ರಣಯದ,ಪ್ರಕೃತಿಯ ವರ್ಣನಾತ್ಮಕವಾದ ಅದೆಷ್ಟೋ ಕವಿತೆಗಳನ್ನು ಬರೆದಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕನ್ನಡ ಸಾಹಿತ್ಯವನ್ನು ವಿಮರ್ಶಿಸುವ ತಾಕತ್ತೂ ಇದೆ.. ನಾನು ಕನ್ನಡದ ಅಭಿಮಾನಿಯಾಗಿದ್ದೆನಾದರೂ, ಹೀಗೆ ಕಥೆ,ಲೇಖನ, ಕವನಗಳನ್ನೂ ಎಂದೂ ಬರೆದವನಲ್ಲ.. ಹಾಗೆ ಬರೆಯಲು ಸ್ಫೂರ್ತಿಯೇ ಈ ಕೃಷ್ಣ..ಕಾಲೇಜು ಸೇರುವಾಗಿನಿಂದ ಹಿಡಿದು, ಈಗಲೂ ಸದಾ ನನ್ನ ಬೆಂಬಲಕ್ಕೆ ನಿಲ್ಲುವ ವ್ಯಕ್ತಿ ಈ ಕೃಷ್ಣ..

ಈ ಕೃಷ್ಣನ ಜೊತೆ ಮತ್ತೊಬ್ಬ ಹಿರಿಯ ವಿದ್ಯಾರ್ಥಿಯ ಪರಿಚಯವಾಯಿತು.. ಅವನ ಹೆಸರು "ಮಿತೇಶ್".
ಮಿತೇಶ್ ನನ್ನದೇ ಕಂಪ್ಯೂಟರ್ ವಿಭಾಗದಲ್ಲಿ, ನನಗಿಂತ ಒಂದು ವರ್ಷ ಹಿರಿಯ ವಿದ್ಯಾರ್ಥಿ.. ಅವನು, ನಮ್ಮ ಕೃಷ್ಣ ಒಳ್ಳೆಯ ಗೆಳೆಯರು. ಅಲ್ಲದೆ, ನನ್ನದೇ ವಿಭಾಗದ ವಿದ್ಯಾರ್ಥಿಯ ಪರಿಚಯವಾಗಿದ್ದು ನನಗೂ ತುಂಬಾ ಸಂತಸ ತಂದಿತ್ತು. ಮುಂದೆ ಕಂಪ್ಯೂಟರ್ ವಿಭಾಗಕ್ಕೆ ಹೋದ ಮೇಲೆ, ಈ ಮಿತೇಶ್ ನ ಸಹಾಯವೂ ಅಪಾರ..!!

ಅಂದಹಾಗೆ, ಇವನ ಪರಿಚಯ ಆಗಲಿಕ್ಕೆ ಕಾರಣ ನಮ್ಮ ಕಾಲೇಜಿನ ಒಂದು ಸಾಂಸ್ಕೃತಿಕ ಹಬ್ಬ "ದವನ".
ದವನ ಎಂದ ತಕ್ಷಣ ನನಗಂತೂ ಮೈ ನವಿರೇಳುತ್ತದೆ. ಕೇವಲ ನನಗಷ್ಟೇ ಅಲ್ಲ, ಅದರಲ್ಲಿ ಪಾತ್ರವಹಿಸಿದ ಎಲ್ಲರಿಗೂ ದವನ ಅಂದರೆ ಮರೆಯಲಾಗದ ನೆನಪುಗಳ ಭಂಡಾರ..ದವನದಿಂದ ನಾವು ಕಲಿತಿದ್ದು ಅದೆಷ್ಟೋ, ಸ್ನೇಹಿತರಾದವರೆಷ್ಟೋ, ಮಾಡಿದ ತಮಾಷೆಯೇಷ್ಟೋ.,ಅಬ್ಬಾ..!!
ಅದರ ಬಗ್ಗೆನೇ ಮುಂದಿನ ಭಾಗದಲ್ಲಿ ಪೂರ ಹೇಳ್ತೀನಿ...!!



[ ಮುಂದುವರೆಯುವುದು....]

7 comments:

  1. ಮತ್ತೊಮ್ಮೆ ನಿನ್ನ ಬರವಣಿಗೆಯ ರಮಣೀಯತೆಯನ್ನು ನಿರೂಪಿಸಿದ್ದೀಯ ಪ್ರಿಯ ಮಿತ್ರ.
    ಏನೂ ಗೊತ್ತಿಲ್ಲದವರೇ ಆಳವಾದ ಅಧ್ಯಯನದಿಂದ ಅತ್ಯುನ್ನತ ಸ್ಥಾನವನ್ನು ತಲುಪುತ್ತಾರೆಂದು ನೀನು ತೋರಿಸಿದ್ದೀಯ.
    ನನಗೂ ಸಹ ನನ್ನ ಸೀನಿಯರ್ಸ್( Kavya Sunil Sandeep Jyothi)))))) ಇನ್ನೂ ಅನೇಕರು ) ಪುಸ್ತಕಗಳನ್ನು ಕೊಡುತ್ತಿದ್ದರು. ಅದೇ ರೀತಿ, ನಾನು ಅವುಗಳನ್ನು ನಿನಗೆ ಹಸ್ತಾಂತರಿಸುತಿದ್ದೆ. ಇದರಲ್ಲಿ ಸ್ನೇಹದ ಅಲೆಗಳು ಒಬ್ಬರಿಂದ ಮತ್ತೊಬ್ಬರಿಗೆ ರವಾನೆ ಆದವೇ ಹೊರತು, ಬೇರೇನೂ ಇಲ್ಲ.
    ಜೊತೆಗೆ ನಿನ್ನಲ್ಲಿದ್ದ ಭಾಷಾ-ಹಿಡಿತವನ್ನು ಅತೀ ಸಮೀಪದಿಂದ ನೋಡಿದ ಕಾರಣ, ನಿನ್ನಿಂದ ಸಾಹಿತ್ಯ ಸೇವೆ ನಡೆಯಲಿ ಎಂದು ಉತ್ತೇಜನ ನೀಡಿದೆ. ಆ ಪ್ರಯತ್ನ ನಿಜವಾಗಿಯೂ ಅತ್ಯಂತ ಹರ್ಷದಾಯಕವೂ ಉಲ್ಲಾಸದಾಯಕವೂ ಆಗಿ ನನಗೆ ಅತೀವ್ರ ಆನಂದ ತಂದಿದೆ.

    ReplyDelete
    Replies
    1. ಧನ್ಯವಾದಗಳು..
      ನಿನ್ನ ಪ್ರೇರಣೆ, ಬೆಂಬಲ ಸದಾ ಇರಲಿ.:)

      Delete
  2. ಕಾಲೇಜಿನ ಅನುಭವದ ಬಗ್ಗೆ ಇಷ್ಟೊ೦ದು ಬರೆಯಬಹುದೇ....!!!??

    ReplyDelete
    Replies
    1. ಹೇಳಬೇಕಾದ್ದು ಇನ್ನೂ ಬಹಳ ಇದೆ..
      ನನಗೆ ನೆನಪಾದದ್ದನ್ನು ಹೇಳುತ್ತಿದ್ದೇನೆ ಅಷ್ಟೇ..!!
      ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಡೈರಿಯ ಕಲ್ಪನೆಯಲ್ಲಿ ಬರೆಯುತ್ತಿರುವುದಷ್ಟೇ..:)

      Delete
  3. ಬದುಕು ಕಲಿಸಿದ ಪಾಠಗಳನ್ನು ಸಮರ್ಥವಾಗಿ ನಿರೂಪಿಸಿದ್ದೀರಿ ಭೀಮಣ್ಣ. ಕಲಿಯುವವರಿರುವೆಡೆ ಕಲಿಸುವವರಿದ್ದೇಯಿರುತ್ತಾರೆ. ಶುಭವಾಗಲಿ.

    ReplyDelete
  4. ಭೀಮಸೇನರೆ, ನಿಮ್ಮ ಕಾಲೇಜಿನ ಅನುಭವ ಬಹಳ ಚೆನ್ನಾಗಿ ಮೂಡಿ ಬರುತಿದೆ

    ReplyDelete