Monday, June 11, 2012

ದಿವ್ಯಬಿಂದು..!!




ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು
ಭೋರ್ಗರೆದು ಚಿಮ್ಮಿಸುತ ಮಂಗಳದ ಹಾಡು..
ಉಕ್ಕುವ ರಭಸದಲಿ ತೊಳೆದು ಕೊಳೆಗಳ ಕಾಡು
ಸೆಳೆದು ಝೇಂಕರಿಸುತಲಿ ಜನರೆದೆಯ ಗೂಡು..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ಕನ್ನಡಾಂಬೆಯ ಪಾದಪದ್ಮದಿಂ ಉದ್ಭವಿಸಿ
ರಾಜರಾಜೇಶ್ವರರ ಮುಕುಟ ಸಿಂಗರಿಸಿ..
ರನ್ನ ಪಂಪರ ಚಿನ್ನಲೇಖನಿಯ ಸಂದಣಿಸಿ
ದಶದಿಶೆಗೂ ಸಂಸ್ಕೃತಿಯ ಗಂಧ ಸೂಸಿ..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು...


ಸ್ವರ್ಗಕನ್ಯೆಯರಿಳಿದು ಶಿಲ್ಪವಾಗಿಹ ಮೋದ
ಹಸಿರುಮಾತೆಯ ಕರದೊಳರಳಿದ ಪ್ರಭೇದ.
ನಿತ್ಯ ಸಂಗೀತರಸರುಚ್ಛ್ರಾಯದ ನಾದ.,
ವಚನಕೀರ್ತನಗಣದಿ ಪಸರಿಸುತ ಸ್ವಾದ..||


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ನಡೆದ ಕಡೆ ಎಲ್ಲರೊಡನೊಡನಾಡುವ ನಲುಮೆ
ಸ್ವರ್ಣಯುಗದೊಳು ಮೆರೆದ ಚರಿತೆಯ ಗರಿಮೆ..
ಮೊಗೆದಷ್ಟು ಪುಟಿದೇಳ್ವ ಜ್ಞಾನಸಲಿಲದ ಚಿಲುಮೆ
ಪದಗಳಲ್ಲಿಡಬಹುದೇ, ಕೊನೆಯಿರದ ಮಹಿಮೆ..?!!


ಕನ್ನಡದ ವಾಕ್ಪ್ರವಹ ಸಾರಿಬರುತಿದೆ ನೋಡು..


ಧನ್ಯರಾದವರೆಷ್ಟೋ, ಈ ಧಾರೆಯಲಿ ಮಿಂದು
ಬೇಡಿ ಬಂದವರಿಗೊಲಿದಮೃತಸಿಂಧು..
ಗಂಗೆಗಿಂತಲೂ ಅಧಿಕ ಪಾವನತರಂಗವಿದು
ಎಲ್ಲ ಜನ್ಮಕೂ ದೊರಕಲೀ ದಿವ್ಯಬಿಂದು..!!

2 comments:

  1. ಕನ್ನಡಾಂಬೆಗೆ ಒಳ್ಳೆಯ ಗಾನಪುಷ್ಪ.

    ನನ್ನ ಬ್ಲಾಗಿಗೂ ಅಪರೂಪಕೆ ಬನ್ನಿರಿ!!!!

    ReplyDelete
  2. ಎರಡು ಮೂರು ಸಾರಿ ಓದಿದೆ.. ಮಧುರಾನುಭೂತಿ.. ನಿಮ್ಮ ಕವಿತೆಯ ತಾಳಕ್ಕೆ ನನ್ನೆದೆ ಕುಣಿಯಿತು. ಮನ ಆ ಭಾವ ಲಹರಿಯಲಿ ಲೀನವಾಯಿತು. ಇದೆ ಅಲ್ಲವೇ ಕವಿತೆಯ ಸಾರ್ಥಕತೆ.. ಸುಂದರ.. ಶುಭವಾಗಲಿ ಭೀಮಣ್ಣ.. ನಿಮ್ಮ ಭೀಮ ಬಲಕ್ಕೆ ಯಾರು ಸಾಟಿ :)

    ReplyDelete