Tuesday, November 27, 2012

ಕಲಿಕೆ..!!



ಅಲ್ಲೊಂದು ಹಕ್ಕಿ ತಾರುಣ್ಯ ಸಂಭ್ರಮದಲ್ಲಿ
ಉಲಿದು ಚಿಲಿಪಿಲಿಯ ಸ್ವರತಾನಸಂಗತಿಯ,
ಗರಿಗೆದರಿ ದೂರದ ದಿಗಂತಕ್ಕೆ ಹಾರಿರಲು
ಕಲಿತಿಹೆನು ಬದುಕಿನ ಸ್ವಾವಲಂಬನೆಯ..||1||

ಇರಲಿ ಇರದಿರಲಿ ಮುಡಿವವರು ಮೆಚ್ಚುವ ಜನರು
ಗಂಧ-ಸೌಂದರ್ಯತೆಗೆ ಹಾಡಿ ಹೊಗಳಿಕೆಯ..
ರವಿಯುದಯವಾದ ಚಣ ಬಿರಿವ ಸುಮತತಿಯಿಂದ
ಕಲಿತಿಹೆನು ಅನವರತ ಕರ್ತವ್ಯಮತಿಯ..||2||

ನೋಟ ಹಾಯಿಸದರೆಲ್ಲೆಡೆ ಎಲ್ಲೆ ಮೀರಿರುವ
ಜಲರಾಶಿಯಲಿ ಹುದುಗಿಸುತ ಜೀವಕುಲವ..
ತೆರೆಗಳುದ್ಘೋಷದಲಿ ಮೆರೆವ ಕಡಲಾಟದಿ
ಕಲಿತಿಹೆನು ನಾನಿಂದು ಗಾಂಭೀರ್ಯತನವ..||3||

ತನ್ನ ಬಸಿರೊಳಗಿಂದ ಚೈತನ್ಯವೀಯುತಲಿ
ಭೂಮಿ ತಾ ಪೊರೆದಿಹಳು ಬಗೆಬಗೆಯ ಪ್ರಾಣ..
ದ್ರೋಹವೆಸಗಿದರೂನು ಮತ್ತೆ ಮಮತೆಯ ತೋರೆ,
ಕಲಿತಿಹೆನು ಕ್ಷಮಾ-ಸಹನೆಯ ಸುಗುಣ..||4||

ದಟ್ಟಡವಿಯನೆ ಆಹುತಿಯನಾಗಿಸೆ ವಹ್ನಿ
ದುಷ್ಟತನವನು ಪೂರ್ಣ ಭಸ್ಮಿಸುವ ಕಲೆಯ..
ಕೆಳಮುಖದಿ ಹೂತ್ತಿಸೆ ಪುನರ್ಜ್ವಾಲೆ ಪುಟಿದಿರಲು
ಕಲಿತಿಹೆನು ಎಂದಿಗೂ ಊರ್ಧ್ವದೆಡೆ ಗತಿಯ..||5||

ಜೊತೆಬಂದ ಪರಿಮಳವ ಕೂಡಿ ಸಹಿಸುತ ಮುಂದೆ
ಎದುರಿಸುತ ಎದುರಿನ ಪರ್ವತದ ತಡೆಯ..
ಜನರ ಶ್ವಾಸೋಚ್ಛ್ವಾಸಹೇತುವಿಹ ಪವನದಿಂ
ಕಲಿತಿಹೆನು ನಿತ್ಯವೂ ಚಲನಶೀಲತೆಯ..||6||

ಬ್ರಹ್ಮಾಂಡ ವ್ಯಾಪಿಸಿದನಂತತೆಯ ಆಕಾಶ
ಭಿನ್ನವಿದ್ದರು ಪೂರ್ವ-ಪಶ್ಚಿಮಗಳೆಂದು..
ಅವರು-ಇವರೆನ್ನದಲೇ ಸೂರಾಗೆ ಸರ್ವರಿಗೂ
ಕಲಿತೆ ಸಮತೆಯೇ ಏಕತೆಯ ಮೂಲವೆಂದು..||7||

ಇನಿತು ವೈಚಿತ್ರ್ಯಗಳ ಒಡಲೊಳಗೆ ಕಾಪಿಟ್ಟು
ಸತತ ಬೋಧಿಸುತಿಹಳು ಪ್ರಕೃತಿಯ ಮಾತೆ..
ಬರಿ ಬುದ್ಧಿಯೊಳು ಬರದೆ, ಕಾರ್ಯದೊಳು ಕಲಿಕೆಯಿರೆ
ನಮ್ಮ ಜೀವನವೆಲ್ಲ ಮಹಾಯಶೋಗಾಥೆ..||8||



ಚಿತ್ರಕೃಪೆ-ಅಂತರ್ಜಾಲ

No comments:

Post a Comment