Wednesday, December 12, 2012

[ ಈ ಹಾಡು, "ಹುಡುಗರು" ಚಿತ್ರದ "ನೀರಲ್ಲಿ ಸಣ್ಣ ಅಲೆಯೊಂದು ಮೂಡಿ" ಗೀತೆಯ ರಾಗಕ್ಕೆ ಬರೆದ ಹೊಸ ಸಾಹಿತ್ಯ ]

ನಾ ಕಂಡ ಕಣ್ಣ ಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..
ಒಲವಾಯ್ತು ಮೌನದಿ, ಎದೆಯಲ್ಲಿ ಹಾಡುತಾ..
ಮಗದೊಮ್ಮೆ ಮೌನವೇ..ಬೇರೆಯಾಗುತಾ..||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..

ಊರೆಲ್ಲ ಪ್ರೀತಿಯನರಸಿ ನಾನಂತೂ ಅಲೆಮಾರಿ..
ಯಾರಿಲ್ಲ ಹಾದಿಯಲೀಗ ನಿನ್ನಂಥ ಸಹಚಾರಿ..
ಬಾನಿನಲ್ಲಿ ಮಿಂಚೊಂದು ಬಂದ ಹಾಗೆ ನೀನು,
ಘಳಿಗೆಯಷ್ಟೇ ಬೆಳಕಾಗಿ ಕಾಣದಾದೆ ಇನ್ನು..
ಹೊಂಗನಸ ಹೂವ ಪೋಣಿಸಿದೆ ನಿನ್ನ ಮುಡಿಗರ್ಪಿಸೋಣವೆಂದು
ಹೂವೆಲ್ಲ ಚೆಲ್ಲಿ ಈ ಹಾರ ಛಿದ್ರ, ಇದಕೆಲ್ಲಿ ತಾಣವಿಂದು..||1||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..

ತಂಗಾಳಿ ಬೀಸಿದರೂನು ಕಂಪಿಲ್ಲ ಜೀವಂತ..
ಮುಳ್ಳಂತೆ ಕಾಡಿದೆ ಈಗ ನೀನಿಲ್ಲದೇಕಾಂತ..
ಭಾವಕೊಂದು ಕಿಡಿ ಸೋಕಿ ಹೊತ್ತಿ ಉರಿದ ಬಗೆಗೆ..
ಬಿರುಕು ಮೂಡಿ ಸೇತುವಲಿ ಭಿನ್ನವಾಯ್ತೆ ಬೆಸುಗೆ..
ಧ್ವನಿ ನಿಂತರೂನು ಬರಿ ಗುನುಗುತಿಹುದು ಈ ಹೃದಯ ನಿನ್ನ ರಾಗ..
ಹೊರಹೋದರೂನು ನನ್ನಿಂದ ನೀನು, ಉಳಿದಿಹುದು ಕೂತ ಜಾಗ..||2||

ನಾ ಕಂಡ ಕಣ್ಣಕುಡಿ ಮುತ್ತು ಜಾರಿ, ಕಡಲಾಳದಲ್ಲಿ ಕರಗಿ..
ಮಾತೆಲ್ಲ ನೂರು ತೆರೆಯಲ್ಲಿ ಲೀನ, ಒಡಲಾಳದಲ್ಲಿ ಮರುಗಿ..
ಒಲವಾಯ್ತು ಮೌನದಿ, ಎದೆಯಲ್ಲಿ ಹಾಡುತಾ..
ಮಗದೊಮ್ಮೆ ಮೌನವೇ..ಬೇರೆಯಾಗುತಾ..||

No comments:

Post a Comment