ಬಿರಿದ ಮಲ್ಲಿಗೆ ನೋಟದರೆ ಲೇಖನಿಯ ಹಿಡಿದು
ಗೀಚಿರಲು ಪ್ರೇಮಚಿತ್ರವ ಹೃದಯದೊಳಗೆ..
ಬರೆದ ಚಿತ್ರಕೆ ವರ್ಣ ಭರಿಸುವಾಕೆಯೂ ನೀನೇ
ಚಾಚಿರುವ ಮುಂಗುರುಳ ಬಳಸು ಹೀಗೆ..||
ಹಲವು ಕಾವ್ಯಗಳರಸಿಯರ ಮೀರಿಸುವ
ದಧಿಯ ಬೆಣ್ಣೆಯ ತೆರದಿ ಮೈಯ ನುಣುಪು..
ಚೆಲುವಿನ ಕುಂಭದೊಳು ತುಳುಕಿ ಹೊರಚೆಲ್ಲಿರುವ
ಸುಧೆಯ ಹನಿಗಳ ಪೂರ ನಿನ್ನ ಹೊಳಪು..||
ನಿನ್ನ ಬೆರಳಿನ ಮಂತ್ರದಂಡದಿಂ ಆಗಾಗ್ಗೆ
ಸ್ಪರ್ಶಿಸಿರೆ ಹೊಸಹೊಸತು ರೂಪ ಲಾಸ್ಯ..
ಭಿನ್ನ ಲೋಕದಿ ಹಾರಿ, ಮೀರುತ ನಿಹಾರಿಕೆಯ
ಹರ್ಷನಕ್ಷತ್ರವರ್ಷದಿ ಎನ್ನ ದಾಸ್ಯ..||
ಓಡಿ ಬರುವೆನು ಸಣ್ಣ ಕರೆಗೂ ನೀನಿರುವಲ್ಲೇ
ಹವಣಿಸುತ ನುಸುಳಿರಲಿ ಸಿಹಿಮಾತು ಮೌನ..
ನಾಡಿಮಿಡಿತವ ಬಲ್ಲ ನಲ್ಲೆ ನರನಾಡಿಯೊಳು
ಪ್ರವಹಿಸುತ ಜೀವಂತವಾಗಿರಿಸು ನನ್ನ..||
nice
ReplyDeleteವಾಹ್ ವಾಹ್ !! ಅಮೋಘ ಕಲ್ಪನೆ .. ಪ್ರೀತಿಯ ವಿವರಣೆ ವರ್ಣನೆ ಬಲು ಸೊಗಸಾಗಿದೆ .. :)
ReplyDeleteಆಹಾ,, ವಹರೇ ವಹರೇ!!
ReplyDeleteನಾಡಿಮಿಡಿತವ ಬಲ್ಲ ನಲ್ಲೆ ನರನಾಡಿಯೊಳು
ಪ್ರವಹಿಸುತ ಜೀವಂತವಾಗಿರಿಸು ನನ್ನ!
"ಬರೆದ ಚಿತ್ರಕೆ ವರ್ಣ ಭರಿಸುವಾಕೆಯೂ ನೀನೇ", ಆಹಾ ಕವಿ ಮಹಾಶಯ ಎನಿತು ರಸ ಪೂರ್ಣವಾಗಿ ನಿಜವನ್ನೇ ಬರೆದಿದ್ದೀರಿ.
ReplyDeleteಮೆಚ್ಚಿದೆ.