Friday, January 27, 2012

( "ಗಾಳಿಪಟ" ಚಿತ್ರದ, "ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ.." ಎಂಬ ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..) 

ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು
ದಾಹದ ಕರೆಗೆ ಬಂದು ಒಲಿದ ಸುಧೆಯ ಹನಿ ನೀನು
ನೀನಿರದೆ ಇರದು ಬೇರೇನೂ...||


ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು....



ನೀ ಜೀವನೌಕೆಗೆ ಕಡಲದೀಪವು..
ನಿನ್ನ ಪ್ರೀತಿಬೆಳಕಲೇ ನನ್ನೀ ಯಾನವು..
ಈ ಕ್ಷಣದಿ ಮೂಡಿದೆ ಪ್ರಣಯಚಿತ್ರವು..
ನಿನ್ನ ನೆನಪು ಸೋಕಲು, ನೂರು ವರ್ಣವು..
ಕನಸಿನ ರೂಪಸಿ....ಕಾಡದೆ ಕಾಯಿಸಿ.....
ಸಹಿಯ ನೀಡು, ಮನಕೆ ಬರಲು, ನಗೆಯ ಹಾಸಿ.....||1||



ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು...



ನಿನ್ನ ಹೃದಯ ಮಿಡಿದು ಉಲಿವ ಪ್ರೀತಿಪಿಸುಮಾತು ಮುರಳಿ..
ನನ್ನ ಕಡೆಗೆ ಬೀಸಿಬಂತು, ಒಲವಿನ ಹಸಿಕಂಪು ಅರಳಿ..
ಕದಲಿಸಿ ಕಣ್ಣನೆ......ಕದಡಿದೆ ಭಾವನೆ.......
ಬಿಗಿದು ತಬ್ಬಿ, ಬಿಡದೆ ನನ್ನ ರಮಿಸು ನೀನೇ.....||೨||



ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು
ದಾಹದ ಕರೆಗೆ ಬಂದು ಒಲಿದ ಸುಧೆಯ ಹನಿ ನೀನು
ನೀನಿರದೆ ಇರದು ಬೇರೇನೂ...||

Tuesday, January 24, 2012

        ಧನ್ಯತೆ 

ನಿನ್ನ ಮೊಗಮಲ್ಲಿಗೆಯ, ದಳದ ಬಿಂದುವಿನಲ್ಲಿ
ಎನ್ನ ನಗೆ ಕಾಣಿಸಲು ಧನ್ಯನಾದೆ..
ಬಾಳಿನಾಟದಿ ನಿತ್ಯ, ಅರಸಿ ನಿನ್ನಯ ಪ್ರೀತಿ
ಪಾರಿತೋಷಕ ಸಿಗಲು ಮಾನ್ಯನಾದೆ..!

ಬಾಚುತಲಿ ತೋಳಿನ ವೀಚಿಯೊಳು ಹೃನ್ಮನವು
ನಲಿವಂತೆ ಮಂಜಿನ ನಲ್ಮೆ ಉಷೆಗೆ..
ಲಹರಿಗಳ ಹಾಳೆಯಲಿ, ಸ್ವಪ್ನಗಳ ಗೀಚಿಡುವೆ
ವ್ಯಾಖ್ಯಾನ ಬರೆದಿರಿಸು ನನ್ನ ವಶಕೆ..!

ಭವಿತವ್ಯ ಬಾಂದಳದಿ ಧ್ರುವದಂತೆ ಸ್ಫುಟವಾಗಿ
ನಯನದೊಳಿರೆ ಗಮ್ಯ ಪಯಣ ನಿರುತ
ಸುಕ್ಕುಗಟ್ಟದೇ ಕ್ರಮದಿ, ಯೌವನದ ಹಾದಿಯಲೇ
ಸ್ಫುರಿಸಿರಲಿ ಈ ನಮ್ಮ ಪ್ರಣಯಸ್ರೋತ..!

Sunday, January 22, 2012

(ಈ ಹಾಡು, "ಹಾಗೆ ಸುಮ್ಮನೆ" ಚಿತ್ರದ, "ಓಡಿ ಬಂದೆನು ನಿನ್ನ ನೋಡಲು.." ಎಂಬ ಹಾಡಿನ ಧಾಟಿಯಲ್ಲಿ ಬರೆದ ನೂತನ ಸಾಹಿತ್ಯ..)

ದೂರ ಹೋದೆ ನೀ, ಕೊಡದೆ ಕಾರಣ..
ದಾರಿ ಕಾಣದಂತೆ, ಪ್ರಣಯದಂಗಣ..
ಸುತ್ತ ಸುಪ್ತನೀರಲಿ ಒಂಟಿ ನಾವಿಕ... ಈಗ ಭಾವುಕ.....
ನಿನ್ನ ನೋಡದೇ, ಅಂಧ ಈ ಮನ..
ಇನ್ನು ಗುಂಗಿನಲ್ಲೇ, ನನ್ನ ಬಂಧನ..
ಮತ್ತೆ ತೀರದಂಚನು ಕಾದ ನಾವಿಕ... ಈಗ ಭಾವುಕ.....||ಪ||


ಎದೆಯಲ್ಲಿ ಪ್ರೀತಿಶಶಿಯು, ಹೊರತಂದ ಚಂದ್ರಿಕೆ
ಅರಳಿಸದಲೇ, ಈ ನೈದಿಲೆ, ಲೀನಿಸಿತು ಏತಕೆ..?!!
ಹೊಸದೊಂದು ರೀತಿಖುಷಿಯು, ಚಿಗುರೊಡೆವ ವೇಳೆಗೆ
ಒಲವುಣಿಸದೆ ನೀ ಹೋಗಲು ಬಾಡಿಹುದು ಮೆಲ್ಲಗೆ..||೧||


ನಿನ್ನ ನೋಡದೇ, ಅಂಧ ಈ ಮನ..
ಇನ್ನು ಗುಂಗಿನಲ್ಲೇ, ನನ್ನ ಬಂಧನ..
ಮತ್ತೆ ತೀರದಂಚನು ಕಾದ ನಾವಿಕ... ಈಗ ಭಾವುಕ....

ಹಂಬಲಿಸಿ ನಿಂತೆ, ಮುಗಿಲ ಮಳೆಹನಿಯ ಸಾಲನು
ಮರೆಯಾಗಿಹೆ ಪಿಸುಗುಡದಲೇ, ಒಂದಿನಿತು ಮಾತನು..
ಕಂಬನಿಯ ಧಾರೆ ತುಳುಕಿ, ನರಳುತಿರೆ ಜೀವವು,
ಒಡಮೂಡಿದ ಕನಸೆಲ್ಲವೂ, ಒಣಗಿ ಚೂರಾದವು..||೨||


ದೂರ ಹೋದೆ ನೀ, ಕೊಡದೆ ಕಾರಣ..
ದಾರಿ ಕಾಣದಂತೆ, ಪ್ರಣಯದಂಗಣ..
ಸುತ್ತ ಸುಪ್ತನೀರಲಿ ಒಂಟಿ ನಾವಿಕ... ಈಗ ಭಾವುಕ.....

Saturday, January 21, 2012

ಓಲೈಕೆ



ಏಕೆ ಸಖಿ ನಿನ್ನ, ಮುಖದಿ ಇಂಥ ರಂಗು..?!
ಕಡುಸಿಡುಕಿನ ಸೂರ್ಯ, ಕುಣಿದಿಹನೆ ಹಾಂಗೂ..!!

ಸುಮಬಾಣವ ಅರೆನೋಟದಿ ಸರಿನೇರ ಹೂಡಿ ನೀನು..
ಕೆನೆಹಾಲಿನ ಆಂತರ್ಯವ ಮಳೆಗರೆಯುತಿದ್ದ ಕಣ್ಣು..
ಏಕೋ ಕಾಣೆ, ಬೀಸುತಿಹುದು ಮುನಿಸಿ ಉಲ್ಕೆಯನ್ನು..!!

ಕರೆದೊಯ್ಯಲೇ ಹೂದೇರಲಿ ವೈಭವದ ವನವಿಹಾರ..
ಸಿಂಗರಿಸುತಾ ಈ ಕೊರಳನು, ಕಂಗೊಳಿಪ ರತ್ನಹಾರ..
ದಾರಿಯೇನು.? ಹೇಳು ಇನ್ನು.; ಹೆಣೆಯೆ ದೂರತೀರ..!!

ಸವಿಪ್ರೀತಿಯ ಸಂಭಾವನೆ ನೀಡಿದರೂ ಉಳಿದ ತಾಪ..
ಒಲೈಕೆಗೂ ಇನ್ನೆಷ್ಟು ನಾ, ಕೊಡಬಹುದು ಓಲೆರೂಪ..
ಹಿಂದಿನಂತೆ ಕ್ಷಮಿಸಿ ಇಂದೂ, ಸರಿಸು ಕೋಪಶಾಪ..!!!!


ಚಿತ್ರಕೃಪೆ-ಅಂತರ್ಜಾಲ 

Thursday, January 19, 2012


( "ಸಂಚಾರಿ" ಚಿತ್ರದ, "ಗಾಳಿಯೇ ನೋಡು ಬಾ ದೀಪದ ನರ್ತನ.." ಎಂಬ ಹಾಡಿನ ಧಾಟಿಗೆ ನೂತನ ಸಾಹಿತ್ಯ..)


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..
ನೀನೀಗ ನಿಂತಲ್ಲೇ ನೂರಾರು ಗಾನ..
ಬಾನಿಂದ ಜಾರುತ್ತ ತಾರೇನು ಮೌನ..
ನವಿರಾಗಿಸು ಚೇತನ..!!!


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..


ಸವಿಗನಸಲ್ಲಿಯ ವಾಹಿನಿಯಲ್ಲಿಯೇ ಬರಿ ನಿನ್ನಂದದ ವಾರ್ತೆಯು..
ಪ್ರತಿಚಣದಲ್ಲಿಯೂ ಕಣ್ಣೆವೆಯಲ್ಲಿಯೂ ಸಿರಿ ಶೃಂಗಾರದ ಮೂರ್ತಿಯು..
......................
ಸೆಳೆತ ಹೆಚ್ಚಾಗಿದೆ.. ಉಳಿಸಿಬಿಡು ನನ್ನ..
ನವಿರಾಗಿಸು ಚೇತನ....||1||


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..


ನಸುನಗೆಯ ಹನಿ, ಇಳಿವಾಗ ಎದೆ ಹಸಿರಾದಂತೆ ಚೆಲುವಾಗಿದೆ..
ಪಿಸುಮಾತಾಡುತ ಜೊತೆಗೂಡಿ ಮನ, ಹೊಸದಾದಂಥ ಒಲವಾಗಿದೆ..
...................
ನೆರಳು ಒಂದಾಗಿದೆ.. ಬೆಳಕು ಹಿಡಿಯೋಣ..
ನವಿರಾಗಿಸು ಚೇತನ... ||2||


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..

Friday, January 6, 2012

                    ಕನವರಿಕೆ 

                    ರಮಿಸು ಕುಳಿತು ಬಳಿಗೆ..
                    ಕುಡಿಯಲ್ಲೇ ಹೊಳೆವ ದೀವಿಗೆ..!!

                    ಮುಂಗುರುಳ ಚಾಮರದಲಿ ತಂಗಾಳಿಯ,
                    ಬೀಸಿರಲು ಚಂದ್ರ ತಂದ ಮಧುಪ್ರೀತಿಯ..
                    ತಾರೆಗಳ ಮೀರಿ ಮುತ್ತು ಮಣಿಮಾಲೆಯ,
                    ಹೆಣೆದಿಡುತಲಿ ಧರಿಸಿದೆ ಸುಹೃದಯ..!!

                     ಕನಸೂರ ರಾಜಕುವರಿ ಈ ಪ್ರೇಯಸಿ..
                     ಕನ್ನಡಿಯೂ ಹಾತೊರೆಯುವ ಅತಿರೂಪಸಿ,
                     ನಲ್ನುಡಿಯ ಹೂವಿನಿಂದ ಕ್ಷಣ ಮೋಹಿಸಿ,
                     ಬಾನಾಡಿ ನೀ ನನ್ನೆದೆ ತೇಲಿಸಿ..!!

                     ಹೊಂಬಿಸಿಲ ಸೌಮ್ಯತನದ ಅನುಭಾವವ
                     ಮೀರಿಸುವ ನಿನ್ನ ಬೆರಳ ಈ ಮಾರ್ದವ..
                     ಸ್ಪರ್ಶಿಸಲು ನೂತ್ನ ಉದಯ, ಋತುವೈಭವ
                     ಕನವರಿಕೆಗೂ ತುಂಬಿಸು ಜೀವವ..!!