Friday, December 16, 2011

                                ಹಂಬಲ..
           

                          ಎಣಿಕೆಯಿಲ್ಲದೆ ಕಲ್ಲು ಎಸೆದು ಬರಿದಾಗಿಹುದು
                          ಉಳಿದದ್ದು ನಾನೀಗ ಕುಳಿತಿರುವ ಬಂಡೆ..
                          ದಾಸವಾಳದ ಸೂರ್ಯ, ಗಗನಗರ್ಭದಿ ಲೀನ
                          ನೀನು ಜೊತೆಯಿರದೆ, ನೀರವತೆಯಲಿ ದಂಡೆ..

                          ನೂಪುರದ ಇನಿದನಿಯ ತೆರೆಯ ಹಂಬಲದಲ್ಲಿ,
                          ಭೋರ್ಗರೆವ ತೆರೆಗಳದೂ ಮೌನಗೀತೆ..
                          ಜಡನದಿಯು ಸಾಗರವ ಸೇರಲುತ್ಸುಕವಿಹುದು,
                          ಭೇಟಿಗೊಮ್ಮೆಯೂ ಬರದೆ, ಏಕೆ ಕುಳಿತೆ.??!!

                          ನೀನಿರದ ಬೇಸರದ ಭಾವತೀವ್ರತೆಯಲ್ಲಿ
                          ಕಣ್ಣ ಕೊಳ ತುಳುಕಾಡಿ, ಕೆನ್ನೆ ತೇವ..
                          ಮರದ ಜೋಡಿಯ ಹಕ್ಕಿ ಕೆಣಕಿಹುದು ಏಕಾಂತ,
                          ನೋಟದಲೆ ಹುದುಗಿಸಿಹೆ, ಒಡಲ ನೋವ..

                          ತಲ್ಲಣಿಸುವಂತೆ ಮನ ಮಾಡಿರುವೆ ನೀ ಗೆಳತಿ,
                          ಹೇಳು ಬೇಗನೆ ಮುಂದೆ ನನ್ನ ಪಾಡೇನು.?
                          ಎದೆಯೊಳಗೆ ಪೂಜಿಸಲು, ಒಲವಸುಮವಿರಿಸಿರುವೆ,
                          ತಡವಿರದೆ ಗುಡಿಯೊಳಗೆ ಬರಬೇಕು ನೀನು..!!!


( ಚಿತ್ರಕೃಪೆ --
123rf.com )

3 comments:

  1. ತುಂಬಾ ತೀವ್ರವಾದ ಶೈಲಿ ಮತ್ತು ಪದ ಪ್ರಯೋಗದ ಕವನ. ಭೇಷ್...

    ReplyDelete
  2. ಭೀಮಸೇನ್ ಪುರೋಹಿತರೇ ನಿಮ್ಮ ಶೈಲಿ ಮತ್ತು ಪದಗಳ ಅದ್ಭುತ ಪ್ರಯೋಗ ಮನಕ್ಕೆ ಒಮ್ಮೆಲೇ ಧಾಳಿಯಿಟ್ಟು ಓದುಗನ ಮನಸ್ಸನ್ನು ಸೂರೆಗೊಂಡುಬಿಡುತ್ತದೆ..ಕವಿತೆಯಲ್ಲಿ ಭಾವತೀವ್ರತೆಯನ್ನು ಅಷ್ಟೇ ಸುಂದರ ಸಾಲುಗಳಲ್ಲಿ ಬಂಧಿಸಿರುವ ನಿಮ್ಮ ನಿರೂಪಣೆಯ ಪರಿ ಅಭಿನಂದನಾರ್ಹ..:))) ವಿರಹದ ತುಟ್ಟ ತುದಿಯಲ್ಲಿ ಮೂಡುವ ಭಾವಗಳೇನೋ ಇವುಗಳು ಎನ್ನಿಸುವಷ್ಟರ ಮಟ್ಟಿಗೆ ನೀವು ಅವುಗಳನ್ನು ಬಿಂಬಿಸಿದ್ದೀರಿ.. ಮನಸ್ಸಿನಲ್ಲುಳಿಯುವ ಕವಿತೆ..:)))

    ReplyDelete