ಪ್ರಣಯ ಲಹರಿ
ನನ್ನ ಬಾಳಿನ ಬಾನಿನೊಳು ಚಂದ್ರನಂತೆ
ನೀನಿರಲು ಎದೆತುಂಬ ಬೆಳಕ ತೆರೆಯು..
ಪ್ರೀತಿದೋಣಿಯಲಿಂದು ಜೊತೆಗಾತಿ ನೀನಿರಲು
ಜೀವನದ ಕಡಲೀಗ ಪುಟ್ಟ ತೊರೆಯು...
ನಿನ್ನ ಮೃದುನಗು ಸುರಿವ, ಕಿರಣ ಸೋಕಲು ಬಿರಿವ
ತಾವರೆಯ ಹೂವಿಂದು, ನನ್ನ ಮನಸು..
ದೃಷ್ಟಿಯಿರೆ ನನ್ನೆಡೆಗೆ, ಆನಂದ ಸಿರಿ ಎದೆಗೆ;
ಕನಸು ಮೂಡಲು ಕ್ಷಣವೂ, ಬದುಕು ಸೊಗಸು...
ಹೃದಯದಂಗಳ ತುಂಬ, ನಿನ್ನದೇ ಮೊಗಬಿಂಬ
ರಂಗೋಲಿಯಂದದಲಿ ನಿನ್ನ ಹೆಸರು..
ಮನದ ಕದ ತೆರೆದಂತೆ, ನವ್ಯ ಭಾವದ ಸಂತೆ;
ನಿನ್ನೊಲುಮೆ ವರ್ಷದಲಿ, ಜೀವ ಹಸಿರು...
ಹರುಷಕಲ್ಲದ ಹೊರತು, ನಿನ್ನ ಕಂಬನಿ ಗುರುತು
ಇರದಂತೆ ನಾನೆಂದೂ ಕಾಪಿಡುವೆನು..
ಒಲವಪಯಣದಲಿಂತು, ಮರವಾಗಿ ನಾ ನಿಂತು
ಹೆಜ್ಜೆ ಹೆಜ್ಜೆಗೂ ನೆರಳನೀದು ನಡೆಸುವೆನು...
ಚಿತ್ರಕೃಪೆ-- dovezoepo.blogspot.com

Nice liked it.
ReplyDeleteLiked last para most.
Swarna